ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಹೊರವಲಯದ ಜನವಸತಿಯಲ್ಲಿ ಚಿರತೆ ಪ್ರತ್ಯಕ್ಷ: ಆತಂಕ

ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ
Last Updated 9 ನವೆಂಬರ್ 2018, 14:26 IST
ಅಕ್ಷರ ಗಾತ್ರ

ಬೆಳಗಾವಿ: ಹೊರವಲಯದ ಹಿಂಡಾಲ್ಕೊ ಕೈಗಾರಿಕಾ ಪ್ರದೇಶದಲ್ಲಿರುವ ಜನವಸತಿಯಲ್ಲಿ ಗುರುವಾರ ತಡರಾತ್ರಿ ಚರಿತೆಯೊಂದು ಪ್ರತ್ಯಕ್ಷವಾಗಿರುವುದರಿಂದ, ಆ ಭಾಗದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಮತ್ತು ಕೈಗಾರಿಕೆಗಳ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ.

ಚಿರತೆ ಓಡಾಡಿರುವ ದೃಶ್ಯವು, ಹಿಂಡಾಲ್ಕೊ ಕಾರ್ಖಾನೆ ಆವರಣದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನವರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸುದ್ದಿಯು ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿದ್ದಂತೆಯೇ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಭಾಗದಲ್ಲಿ ಸಾವಿರರು ಮನೆಗಳಿವೆ. ನೂರಾರು ಮಂದಿ ಕಾರ್ಮಿಕರು ದಿನವಿಡೀ ಓಡಾಡುತ್ತಾರೆ. ಇದರಿಂದಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಖಚಿತಪಡಿಸಿಕೊಂಡರು. ಸ್ಥಳೀಯರಿಂದಲೂ ಮಾಹಿತಿ ಸಂಗ್ರಹಿಸಿದರು. ಮಧ್ಯಾಹ್ನದಿಂದ ಸಂಜೆವರೆಗೂ ಪರಿಶೀಲನೆ ನಡೆಸಿದ ಅವರು, ಬೋನು ಇಡುವ ನಿರ್ಧಾರಕ್ಕೆ ಬಂದರು. ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾದ ಸ್ಥಳಕ್ಕೆ ಸಮೀಪದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಸಣ್ಣ ಕೆರೆಯ ಬಳಿ ಬೋನು ಇಡಲಾಗಿದೆ. ಕಾರ್ಖಾನೆಗೆ ಸಮೀಪದಲ್ಲಿರುವ ಕುರುಚಲು ಕಾಡಿನ ಕಡೆಯಿಂದ ಚಿರತೆ ಓಡಿಬಂದಿರಬಹುದು ಎಂದು ಅಂದಾಜಿಸಲಾಗಿದೆ.

‘ಚಿರತೆ ಪ್ರತ್ಯಕ್ಷವಾಗಿರುವುದನ್ನು ಕ್ಯಾಮೆರಾದಲ್ಲಿನ ದೃಶ್ಯಗಳನ್ನು ನೋಡಿ ದೃಢೀಕರಿಸಿಕೊಳ್ಳಲಾಗಿದೆ. ಅದನ್ನು ಓಡುತ್ತಿರುವಾಗ ಸೆರೆ ಹಿಡಿಯುವುದು ಕಷ್ಟ. ಹೀಗಾಗಿ, ನಾಯಿಯೊಂದನ್ನು ಕಟ್ಟಿ ಚಿರತೆಯನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ. ಬೋನಿನಲ್ಲಿ ನಾಯಿಯನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಅದರ ಜೀವಕ್ಕೆ ಅಪಾಯವಾಗುವುದಿಲ್ಲ. ಚಿರತೆಯು ನಾಯಿಗಾಗಿ ಓಡಿ ಬರುತ್ತಿದ್ದಂತೆಯೇ ಬೋನಿನ ಬಾಗಿಲು ಬಂದ್ ಆಗುತ್ತದೆ. ಚಿರತೆ ಸೆರೆಯಾಗುತ್ತದೆ’ ಎಂದು ಎಸಿಎಫ್‌ ಎಸ್.ಎಂ. ಸಂಗೊಳ್ಳಿ ತಿಳಿಸಿದರು.

ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯವರು, ಹಂದಿ ಹಿಡಿಯುವವರನ್ನು ಸ್ಥಳಕ್ಕೆ ಕರೆಸಿದ್ದು ಅಚ್ಚರಿ ಮೂಡಿಸಿತು.

‘ಈ ಭಾಗದಲ್ಲಿ ನಿತ್ಯ ಸಾವಿರಾರು ಮಂದಿ ಓಡಾಡುತ್ತರೆ. ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿದು ನಮ್ಮ ಆತಂಕ ನಿವಾರಿಸಬೇಕು’ ಎಂದು ಸ್ಥಳೀಯರು ಅಧಿಕಾರಿಗಳನ್ನು ಒತ್ತಾಯಿಸಿದರು.

ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಆರ್‌ಎಫ್‌ಒಗಳಾದ ಶ್ರೀನಾಥ ಕಡೋಲ್ಕರ್, ನಾಗರಾಜ ಬಾಳೆಹೊಸೂರ, ಪ್ರಭಾಕರ ಸಂಗಮೇಶ, ಡಿಆರ್‌ಎಫ್‌ಒ ರಮೇಶ ಗಿರಿಯಪ‍್ಪನವರ, ನೌಕರರಾದ ವಿನಯ ಗೌಡರ, ಶ್ರೀಕಾಂತ್, ಎಸ್‌.ಎ. ಮಗದುಮ್, ಮೊಹಮ್ಮದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT