ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಸೆರೆ ಕಾರ್ಯಾಚರಣೆಗೆ ಇಳಿದ ಪೊಲೀಸರು

15 ದಿನಗಳಿಂದ ನಗರದಲ್ಲಿ ಅವಿತ ಕಾಡಿನ ಅತಿಥಿ; ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಫಲ
Last Updated 19 ಆಗಸ್ಟ್ 2022, 10:48 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ 15 ದಿನಗಳಿಂದ ನಗರದಲ್ಲಿ ಠಿಕಾಣೆ ಹೂಡಿರುವ ಚಿರತೆ ಸೆರೆಗೆ ಈಗ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಶುಕ್ರವಾರ ನೂರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೈಯಲ್ಲಿ ಬಡಿಗೆ ಹಿಡಿದು ಕಾರ್ಯಾಚರಣೆಗೆ ನುಗ್ಗಿದರು.

ಈ ತಂಡದ ನೇತೃತ್ವ ವಹಿಸಿದ ಡಿಸಿಪಿ ರವೀಂದ್ರ ಗಡಾದಿ ಹಾಗೂ ಎಸಿಪಿ (ಅಪರಾಧ) ಎನ್‌.ವಿ. ಭರಮನಿ ಅವರು ಎಲ್ಲ ಸಿಬ್ಬಂದಿಗೆ ಕಾರ್ಯಾಚರಣೆಯ ಮಾರ್ಗದರ್ಶನ ಮಾಡಿದರು. ಅರಣ್ಯ ಇಲಾಖೆ ಮಾಡಿದ ಎಲ್ಲ ಕಸರತ್ತುಗಳೂ ವಿಫಲವಾದ ಕಾರಣ ಕೊನೆಯ ಪ್ರಯತ್ನವಾಗಿ ಪೊಲೀಸರು ಮುನ್ನುಗ್ಗಿದ್ದಾರೆ.

ಚಿರತೆ ಜನವಸತಿಯತ್ತ ಓಡಿಬರದಂತೆ ಕಾರ್ಯಾಚರಣೆ ನಡೆಸಬೇಕು. ದೊಡ್ಡ ಶಬ್ದ ಮಾಡುತ್ತ, ಡ್ರಮ್‌ ಬಾರಿಸುತ್ತ, ಶಿಳ್ಳೆ ಹೊಡೆಯುತ್ತ ‘ಸಿಂಗಲ್‌ ಲೈನ್‌’ ಮಾಡಿಕೊಂಡು ಹೊರಡಬೇಕು. ನಗರದ ಹೊರಕ್ಕೆ ಮುಖಮಾಡಿ ಹೋದಂತೆ ಚಿರತೆ ಹೊರಗಡೆಯೇ ಹೋಗಲು ಸಾಧ್ಯ ಎಂದು ಭರಮನಿ ನಿರ್ದೇಶನ ನೀಡಿದರು.

ಅದರಂತೆ ನೂರಕ್ಕೂ ಹೆಚ್ಚು ಪೊಲೀಸರು ಹಾಗೂ 50ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು.

15 ದಿನಗಳ ಸಾಹಸ: ಇಲ್ಲಿನ ಜಾಧವ ನಗರ, ವಿಶ್ವೇಶ್ವರಯ್ಯ ನಗರ ಹಾಗೂ ಗಾಲ್ಫ್‌ ಮೈದಾನದ ಪೊದೆಯಲ್ಲಿ ಆಗಸ್ಟ್‌ 5ರಂದು ಚಿರತೆ ಅವಿತುಕೊಂಡಿದೆ. ಜಾಧವ ನಗರದ ಕಟ್ಟಡ ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಿ, ಅಲ್ಲಿಂದ ‍‍‍ಪರಾರಿಯಾಗಿದ್ದ ಚಿರತೆಯ ಫೋಟೊ ಮೂರು ದಿನಗಳ ಬಳಿಕ ಟ್ರ್ಯಾ‍ಪ್‌ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ವನ್ಯಮೃಗದ ಸೆರೆಗಾಗಿ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ, ಎಂಟು ಕಡೆ ಬೋನು ಇಟ್ಟು ಕಾಯುತ್ತಿದ್ದಾರೆ. ಬೋನಿನಲ್ಲಿ ನಾಯಿ, ಆಡು ಕಟ್ಟಿ ಯತ್ನಿಸಿದರೂ ಚಿರತೆ ಅದರತ್ತ ಸುಳಿಯಲಿಲ್ಲ. ಕೆಲವು ದಿನ ಸ್ವತಃ ಅರಿವಳಿಕೆ ನೀಡುವ ಸಿಬ್ಬಂದಿ ರಾತ್ರಿಯಿಡೀ ಬೋನಿನಲ್ಲಿ ಕುಳಿತು ಕಾದರೂ ಪ್ರಯೋಜನವಾಗಲಿಲ್ಲ. 20 ಸ್ಥಳಗಳಲ್ಲಿ ಟ್ರ್ಯಾಪ್‌ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.

ಮೇಲಿಂದ ಮೇಲೆ ಅಲ್ಲಲ್ಲಿ ಕಾಣಿಸಿಕೊಂಡಿದೆ ಎಂಬ ಸುದ್ದಿಗಳು ಜನರಿಂದ ಬರುತ್ತಲೇ ಇವೆ. ಈ ಬಗ್ಗೆ ಹಲವು ನಕಲಿ ವಿಡಿಯೊಗಳು ಕೂಡ ಹರಿದಾಡಿ ಗೊಂದಲ ಮೂಡಿಸಿವೆ. ಆದರೆ, ಒಮ್ಮೆ ಕ್ಯಾರೆಮಾದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಎಲ್ಲೂ ಕಾಣಿಸಿಲ್ಲ. ಅದರ ಹೆಜ್ಜೆ ಗುರುತುಗಳೂ ಸಿಕ್ಕಿಲ್ಲ.

ಸುಮಾರು 250 ಎಕರೆ ವಿಸ್ತಾರವಾದ ಗಾಲ್ಫ್‌ ಮೈದಾನದ ಸುತ್ತ ದಟ್ಟ ಪೊದೆ ಬೆಳೆದಿದೆ. ಚಿರತೆ ಅವಿತುಕೊಳ್ಳಲು ಅದ ಅತ್ಯಂತ ಅನುಕೂಲಕರವಾಗಿದೆ. ಹೀಗಾಗಿ, ಸ್ಥಳದಿಂದ ಕದಲದೇ ಅಲ್ಲಿಯೇ ಓಡಾಡುತ್ತಿರಬಹುದು ಎಂಬುದು ಪೊಲೀಸರ ಲೆಕ್ಕಾಚಾರ. ಆದರೆ, ಚಿರತೆ ಮರಳಿ ಕಾಡಿಗೆ ಹೋಗಿರುವ ಸಾಧ್ಯತೆ ಇದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಂದಾಜು.

ಎರಡು ವಾರಗಳಿಂದ ಈ ಭಾಗದ 22 ಶಾಲೆಗಳಿಗೆ ರಜೆ ನೀಡಲಾಗಿತ್ತು. ಆಗಸ್ಟ್‌ 16ರಿಂದ ಮತ್ತೆ ಶಾಲೆಗಳನ್ನು ಆರಂಭಿಸಲಾಗಿದೆ. ಆದರೆ, ವಾಯು ವಿಹಾರ ಹಾಗೂ ರಾತ್ರಿ ಸಂಚಾರವನ್ನು ಇನ್ನೂ ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT