ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಅಭಿವೃದ್ಧಿಗೆ ಸಾಹಿತಿಗಳ ಕೊಡುಗೆ ಅಪಾರ

ಶಾಸಕ ಅನಿಲ ಬೆನಕೆ ಅಭಿಮತ
Last Updated 23 ಫೆಬ್ರುವರಿ 2019, 14:05 IST
ಅಕ್ಷರ ಗಾತ್ರ

ಬೆಳಗಾವಿ: ‘ಸಾಹಿತಿಗಳ ಸತತ ಅಧ್ಯಯನ ಹಾಗೂಸಂಶೋಧನೆಯಿಂದಾಗಿ ಸಾಹಿತ್ಯ ಕ್ಷೇತ್ರ ಸದೃಢವಾಗಿ ಬೆಳೆಯುತ್ತಿದೆ’ ಎಂದು ಶಾಸಕ ಅನಿಲ ಬೆನಕೆ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸಾಹಿತಿ ಎಂ.ಸಿ. ಅಂಟಿನ ಅವರ ಅಭಿನಂದನಾ ಗ್ರಂಥ (ನೇಹದ ನಂಟು) ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಸಾಹಿತಿಗಳಿಲ್ಲದೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದರು.

‘ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾಹಿತ್ಯ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಲೇಖನ ಹಾಗೂ ಕೃತಿಗಳ ಮೂಲಕ ಜನರಿಗೆ ತಿಳಿಸುವ ಕಾರ್ಯವನ್ನು ಸಾಹಿತಿಗಳು ಮಾಡುತ್ತಿದ್ದಾರೆ. ಸಾಹಿತಿಗಳಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಎಂ.ಆರ್. ಉಳ್ಳಾಗಡ್ಡಿ ಅವರು ಮಾತನಾಡಿ, ‘ಸಾಹಿತ್ಯಕ್ಕೆ ಸಮಾಜ ಬದಲಿಸುವ ಶಕ್ತಿ ಇದೆ. ಭಾವನೆಗಳನ್ನು ಅರಳಿಸುವ ಹಾಗೂ ಕೆರಳಿಸುವ ಶಕ್ತಿಯನ್ನು ಸಾಹಿತ್ಯ ಹೊಂದಿದೆ’ ಎಂದು ಹೇಳಿದರು.

‘ಅಂಟಿನ್ ಅವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು ಕೂಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅವರು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಕೂಡ ಕ್ರಿಯಾಶೀಲತೆ ಹೊಂದಿದ್ದು, ಇತರರಿಗೆ ಮಾದರಿಯಾಗಿದ್ದಾರೆ’ ಎಂದರು.

ಸಾಹಿತಿ ಬಸವರಾಜ ಜಗಜಂಪಿ ಮಾತನಾಡಿ, ‘ಒಂದು ಗ್ರಂಥ ರಚನೆ ಮಾಡುವುದು ಸುಲಭದ ಕೆಲಸವಲ್ಲ. ಒಬ್ಬ ಸಾಹಿತಿ ಸತತ ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿ ಖಾತ್ರಿಯಾದ ಬಳಿಕ ಗ್ರಂಥ ಹಾಗೂ ಕೃತಿಗಳನ್ನು ರಚನೆ ಮಾಡುತ್ತಾನೆ. ಅಲ್ಲಿಯವರೆಗೆ ಸಾಹಿತಿ ತಾಳ್ಮೆಯಿಂದ ಕೆಲಸ ಮಾಡುತ್ತಾ ಗುರಿ ಸಾಧಿಸುತ್ತಾನೆ. ಅಂಟಿನ ಅವರು 80ರ ಇಳಿವಯಸ್ಸಿನಲ್ಲಿಯೂ ಕೃತಿಗಳನ್ನು ರಚಿಸುತ್ತಿರುವುದು ಹೆಮ್ಮೆಯ ವಿಷಯ’ ಎಂದರು.

ಇದೇ ಸಂದರ್ಭದಲ್ಲಿ ಆ್ಯಂಟಿನ್ ಅವರು ರಚಿಸಿದ ‘ಜಗಜ್ಯೋತಿ’ ಹಾಗೂ ‘ಆಶಾ ಆಸ್ಪತ್ರೆ’ ಎಂಬ ಕಿರು ಕಾದಂಬರಿಗಳನ್ನು ಬಿಡುಗಡೆಗೊಳಿಸಲಾಯಿತು.

ಅಭಿನಂದನಾ ಗ್ರಂಥದ ಸಂಪಾದಕರಾದ ಪತ್ರಕರ್ತ ಎಲ್.ಎಸ್. ಶಾಸ್ತ್ರಿ ಹಾಗೂ ನಿವೃತ್ತ ಪ್ರಾಧ್ಯಾಪಕ ಬಾಳಣ್ಣ ಶೀಗಿಹಳ್ಳಿ ಮಾತನಾಡಿದರು.

ಸಾಹಿತಿಗಳಾದಅಶೋಕ ಮಳಗಲಿ, ಕೆ.ಎಸ್. ಕೌಜಲಗಿ, ನಿರ್ಮಲ ಬಟ್ಟಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT