ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ಲಾಕ್‌ಡೌನ್‌ ಸಡಿಲ; ಆತಂಕ ಉಲ್ಬಣ!

‘ಅಂತರ’ ಮರೆಯುತ್ತಿರುವ ಜನರು; ನಿರ್ವಹಣೆಯೇ ಸವಾಲು
Last Updated 6 ಮೇ 2020, 3:36 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಸಡಿಲಗೊಳ್ಳುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಜನರು ‘ಸಾಮಾನ್ಯ ದಿನ’ಗಳಂತೆಯೇ ವ್ಯಾಪಾರ– ವಹಿವಾಟುಗಳಲ್ಲಿ ತೊಡಗುತ್ತಿರುವುದು, ವಾಹನಗಳಲ್ಲಿ ಸಂಚರಿಸುತ್ತಿರುವುದು ಹಾಗೂ ‘ಅಂತರ’ ಮರೆಯುತ್ತಿರುವುದು ‘ಕೊರೊನಾ ತಲ್ಲಣ’ ಹೆಚ್ಚಾಗುವ ಆತಂಕ ಉಲ್ಬಣಗೊಳ್ಳುವಂತೆ ಮಾಡಿದೆ.

ಮಾರಕ ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಮೇ 17ರವರೆಗೂ ಲಾಕ್‌ಡೌನ್‌ ಮುಂದುವರಿಸಲಾಗಿದೆ. ನಿರ್ಬಂಧಗಳ ನಡುವೆಯೇ ವಿನಾಯಿತಿಯನ್ನೂ ನೀಡಲಾಗಿದೆ. ಆದರೆ, 40 ದಿನಗಳಿಂದಲೂ ದಿಗ್ಬಂಧನಕ್ಕೆ ಒಳಗಾಗಿದ್ದ ತಮಗೆ ದೊರೆತಿರುವ ವಿನಾಯಿತಿಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬದಲಿಗೆ ಬಹುತೇಕರು ಉಲ್ಲಂಘಿಸುತ್ತಿರುವುದು ಕಳವಳ ಮೂಡಿಸುತ್ತಿದೆ.

ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಸಿಕ್ಕಿರುವ ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ. ಲಾಕ್‌ಡೌನ್‌ ಉಲ್ಲಂಘನೆ ಆಗುವುದನ್ನು ತಡೆಯಲು ಎಲ್ಲ ಕಡೆಗಳಲ್ಲೂ ಪೊಲೀಸರು ಕಣ್ಣಿಡುವುದು ಸವಾಲಾಗಿ ಪರಿಣಮಿಸಿದೆ.

ಮಾಸ್ಕ್‌ ಹಾಕದೆ ಓಡಾಟ:

ಹೊರಗಡೆ ಬರುವಾಗ ಮಾಸ್ಕ್‌ ಧರಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆಯನ್ನೂ ಹಲವರು ತೋರುತ್ತಿಲ್ಲ. ದ್ವಿಚಕ್ರವಾಹನಗಳಲ್ಲಿ ಒಬ್ಬರಿಗಷ್ಟೇ ಅವಕಾಶ ಕೊಡಲಾಗಿದೆ. ಆದರೆ, ಇಬ್ಬರು ಅಥವಾ ಮೂವರು ಸಂಚರಿಸುತ್ತಿದ್ದಾರೆ. ಕಾರಿನಲ್ಲಿ ಚಾಲಕ ಹಾಗೂ ಮತ್ತಿಬ್ಬರು ಪ್ರಯಾಣಿಸಲು ಅನುಮತಿ ಇದೆ. ಇದನ್ನೂ ಉಲ್ಲಂಘಿಸಿದ ಉದಾಹರಣೆಗಳು ಬಹಳಷ್ಟು ಕಾಣಿಸಿದವು. ಎಲ್ಲೆಂದರಲ್ಲಿ ಉಗುಳುತ್ತಿರುವುದು ಕೂಡ ಸಾಮಾನ್ಯವಾಗಿದೆ. ಇದರಿಂದಾಗಿ, ಸೋಂಕು ಪಸರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವುದಕ್ಕೆ ಬರುವುದಿಲ್ಲ!

ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 70ರ ಗಡಿ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯ ಪಟ್ಟಿಯಲ್ಲಿ ಬೆಂಗಳೂರು ಹೊರತುಪಡಿಸಿದರೆ ನಂತರದ ಸ್ಥಾನದಲ್ಲಿ ಅಂದರೆ 2ನೇ ಸ್ಥಾನದಲ್ಲಿ ಬೆಳಗಾವಿ ಇದೆ. ಜಿಲ್ಲೆಯನ್ನು ಸದ್ಯ ‘ಕಿತ್ತಳೆ ವಲಯ’ ಎಂದು ಪರಿಗಣಿಸಲಾಗಿದೆ. ಆದರೆ, ಜನರು ಸಾರ್ವಜನಿಕ ಸ್ಥಳಗಳಲ್ಲಿ ‘ಅಂತರ’ ಮರೆಯುತ್ತಿರುವುದು ಮಾರಕ ಸೋಂಕು ಹರಡುವುದಕ್ಕೆ ಮತ್ತು ‘ಕೆಂಪು ವಲಯ’ಕ್ಕೆ ಸೇರ್ಪಡೆ ಆಗುವುದಕ್ಕೆ ಅವಕಾಶ ಕೊಟ್ಟಂತಾಗುತ್ತಿದೆ ಎನ್ನುವ ಆತಂಕ ಪ್ರಜ್ಞಾವಂತರನ್ನು ಕಾಡುತ್ತಿದೆ.

ಜಿಲ್ಲಾಡಳಿತಕ್ಕೆ ಸವಾಲು

ಸೋಂಕಿನ ಭೀತಿ ಲೆಕ್ಕಿಸದೆ ಜನರು ‘ನೆರೆ’ಯುತ್ತಿರುವುದನ್ನು ನಿರ್ವಹಿಸಲು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಅಂತರ ಜಿಲ್ಲೆಗಳ ನಡುವೆ ಒಮ್ಮೆ ಸಂಚರಿಸಲು ಪಾಸ್ ನೀಡಲಾಗುವುದು ಹಾಗೂ ವಲಸೆ ಕಾರ್ಮಿಕರಿಗೂ ಪಾಸ್ ಕೊಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಪಾಸ್ ಪಡೆಯಲು ಸಂಬಂಧಿಸಿದ ಕಚೇರಿಗಳಿಗೆ ನೂರಾರು ಮಂದಿ ಜಮಾಯಿಸುತ್ತಿದ್ದಾರೆ. ಅಂತರ ಲೆಕ್ಕಿಸದೆ ನಿಲ್ಲುತ್ತಿದ್ದಾರೆ. ಪಾಸ್‌ಗಾಗಿ ಹಲವರು ಅಕ್ಷರಶಃ ಮುಗಿಬೀಳುತ್ತಿರುವುದು ಡಿಸಿಪಿ ಕಚೇರಿ ಆವರಣದಲ್ಲಿ ಕಂಡುಬರುತ್ತಿದೆ.

ಸಂಜೆ 7ರ ನಂತರ ಕರ್ಫ್ಯೂ ಮಾದರಿಯ ಲಾಕ್‌ಡೌನ್‌ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ. ಇದು, ಪ್ರಮುಖ ರಸ್ತೆಗಳಲ್ಲಷ್ಟೇ ಸೀಮಿತವಾಗಿದೆ. ಬಡಾವಣೆಗಳ ಒಳಗೆ, ಹೊರವಲಯದಲ್ಲಿ ಕತ್ತಲಾದ ನಂತರವೂ ಅಂಗಡಿಗಳು ತೆರೆದಿರುವುದು, ಜನರ ಓಡಾಟ, ಗುಂಪು–ಗುಂಪಾಗಿ ವಾಯುವಿಹಾರ ಮಾಡುವುದು ಸಾಮಾನ್ಯವಾಗಿದೆ. ಮಾಸ್ಕ್‌ ಧರಿಸಿದೆ ಓಡಾಡುವವರೂ ಸೋಮವಾರ ರಾತ್ರಿ ಕಾಣಸಿಕ್ಕರು. ಮಾಸ್ಕ್ ಧರಿಸದವರಿಗೆ ನಗರಪಾಲಿಕೆಯಿಂದ ದಂಡ ವಿಧಿಸಲಾಗುತ್ತಿದೆ.

ಜಿಲ್ಲಾ ಪೊಲೀಸ್ ವತಿಯಿಂದ, ಸಾರ್ವಜನಿಕ ಸ್ಥಳದಲ್ಲಿ ಉಗುಳುವವರು ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯಾಚರಣೆಯನ್ನು ಹಲವು ದಿನಗಳಿಂದಲೂ ನಡೆಸಲಾಗುತ್ತಿದೆ. ಇದಕ್ಕೆ ಜನರು ಬಗ್ಗುತ್ತಿಲ್ಲ.

‘ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜನರು ಸಹಕರಿಸಬೇಕು. ಲಾ‌ಕ್‌ಡೌನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT