ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೇಷನರಿ ಅಂಗಡಿ ಕೆಲಸಗಾರರು ಅತಂತ್ರ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಸಾವಿರಾರು ಮಂದಿ
Last Updated 30 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಸ್‌ ಹರಡುವ ಭೀತಿಯಿಂದಾಗಿ ಲಾಕ್‌ಡೌನ್‌ ಅನುಷ್ಠಾನಗೊಳಿಸಿರುವುದರಿಂದಾಗಿ ವಿವಿಧ ಅಂಗಡಿಗಳ ಮಾಲೀಕರು ಹಾಗೂ ಅದನ್ನೇ ಅವಲಂಬಿಸಿದ್ದ ಸಾವಿರಾರು ಕೆಲಸದವರ ಬದುಕು ಅತಂತ್ರವಾಗಿದೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ನಕಲುಪ್ರತಿ ಮಾಡಿಕೊಡುವ (ಜೆರಾಕ್ಸ್‌), ಬೈಂಡಿಂಗ್‌ ಸಿದ್ಧಪಡಿಸುವ, ಲೇಖನ ಸಾಮಗ್ರಿಗಳು ಮೊದಲಾದ ಸ್ಟೇಷನರಿಗಳನ್ನು ಮಾರುವ, ಮೊಬೈಲ್‌ ಕರೆನ್ಸಿ ರೀಚಾರ್ಜ್‌ ಮಾಡುವ, ಕಂಪ್ಯೂಟರ್‌ ಸೇವೆಗಳನ್ನು ನೀಡುವ ಸಾವಿರಾರು ಅಂಗಡಿಗಳಿವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವುಗಳೆಲ್ಲವನ್ನೂ ಮುಚ್ಚಿಸಲಾಗಿದೆ. ತಿಂಗಳಿಗೂ ಹೆಚ್ಚು ಸಮಯದಿಂದ ಇವೆಲ್ಲವೂ ಸ್ತಬ್ಧವಾಗಿದ್ದು ಅಲ್ಲಿದ್ದವರು ಕೆಲಸ ಕಳೆದುಕೊಂಡಿದ್ದಾರೆ.

ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾಂಪೌಂಡ್ ಸುತ್ತಮುತ್ತ ಇಂತಹ ಹತ್ತಾರು ಅಂಗಡಿಗಳು ಇವೆ. ಸರ್ಕಾರದ ವಿವಿಧ ಕಚೇರಿಗಳಿಗೆ ಅರ್ಜಿ ಸಲ್ಲಿಕೆ, ಮನವಿ ನೀಡುವುದು, ನೋಂದಣಿ ಸೇರಿದಂತೆ ಹತ್ತಾರು ಕೆಲಸಗಳಿಗೆ ಬರುವವರು ನಕಲುಪ್ರತಿ ಮಾಡಿಸುವುದು ಮೊದಲಾದ ಕೆಲಸಗಳಿಗಾಗಿ ಮುಗಿಬೀಳುತ್ತಿದ್ದರು. ಇವುಗಳು ಬೆಳಿಗ್ಗೆಯಿಂದ ಸಂಜೆವರೆಗೆ ಗ್ರಾಹಕರಿಂದ ತುಂಬಿ ಹೋಗಿರುತ್ತಿದ್ದವು.

ಯುವಕ, ಯುವತಿಯರು ಹೆಚ್ಚು:

ಒಂದೊಂದು ಅಂಗಡಿಯಲ್ಲೂ ನಾಲ್ಕೈದು ಯಂತ್ರಗಳನ್ನು ಇಟ್ಟುಕೊಂಡು ಫೋಟೊ ಕಾಪಿ (ನಕಲು ಪ್ರತಿ) ಮಾಡಿಕೊಡುತ್ತಿದ್ದುದು ಕಂಡುಬರುತ್ತಿತ್ತು. ಇವುಗಳಲ್ಲಿ ಕನಿಷ್ಠ 4ರಿಂದ 5 ಮಂದಿ ವಿಶೇಷವಾಗಿ ಯುವಕ, ಯುವತಿಯರು, ಮಹಿಳೆಯರು ಈ ಕೆಲಸ ಮಾಡುತ್ತಿದ್ದರು. ಕೆಲವರು ಮಾಲೀಕರಾಗಿದ್ದರೆ, ಬಹುತೇಕರು ಕೆಲಸಗಾರರಾಗಿದ್ದರು. ಅವರೆಲ್ಲರೂ ತಿಂಗಳಿಂದ ವರಮಾನವಿಲ್ಲದೆ ಮತ್ತು ವೇತನವಿಲ್ಲದೆ ಪರದಾಡುತ್ತಿದ್ದಾರೆ. ಕೊರೊನಾ ಉಂಟು ಮಾಡಿರುವ ತಲ್ಲಣ ಈ ಅಸಂಘಟಿತ ವಲಯದ ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ಇದೇ ರೀತಿ, ತಾಲ್ಲೂಕು, ಪಟ್ಟಣ ಹಾಗೂ ದೊಡ್ಡ ಗ್ರಾಮಗಳ ಮಟ್ಟದಲ್ಲೂ ಆಗಿದೆ.

ಮುಂದಿನ ಶೈಕ್ಷಣಿಕ ವರ್ಷಕ್ಕೋಸ್ಕರ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಖರೀದಿಸುವುದಕ್ಕೋಸ್ಕರ ಪುಸ್ತಕದ ಅಂಗಡಿಗಳ ಬಳಿ ಗ್ರಾಹಕರ ಸಾಲು ಸಾಲು ಕಂಡುಬರುತ್ತಿತ್ತು. ಆದರೆ, ಈಗ ಈ ಅಂಗಡಿಗಳು ಕೂಡ ಮುಚ್ಚಿವೆ.

ಸ್ವಯಂ ಉದ್ಯೋಗ ಕಂಡುಕೊಂಡವರು: ಸ್ವಯಂ ಉದ್ಯೋಗ ಕಂಡುಕೊಂಡಿರುವ ಅವರಲ್ಲಿ ಬಹುತೇಕರು, ಸ್ವಯಂ ಉದ್ಯೋಗ ಯೋಜನೆ ಹಾಗೂ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಈಗ ನಿತ್ಯದ ಆದಾಯವಿಲ್ಲದೆ ಅವರ ಜೀವನ ದುಸ್ತರವಾಗಿದೆ.

‘ಫೋಟೊ ಕಾಪಿ ಮಾಡಿಕೊಡುವುದು ಹಾಗೂ ಇತರ ಸ್ಟೇಷನರಿಗಳ ವ್ಯಾಪಾರದಿಂದ ದಿನಕ್ಕೆ ₹ 400ರಿಂದ ₹ 500 ದುಡಿಯುತ್ತಿದ್ದೆ. ಇದರಿಂದಲೇ ಜೀವನ ನಿರ್ವಹಣೆ ನಡೆಯುತ್ತಿತ್ತು ಹಾಗೂ ಬಾಡಿಗೆ ಕಟ್ಟುವುದನ್ನು ನಿರ್ವಹಿಸುತ್ತಿದ್ದೆ. ಆದರೆ, ತಿಂಗಳಿಂದಲೂ ಕೆಲಸ ಇಲ್ಲದಂತಾಗಿದೆ. ಸಾಲ ಮಾಡಿಕೊಂಡಿದ್ದೇನೆ. ಅಂಗಡಿಯ ಬಾಡಿಗೆ ಕಟ್ಟುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ಲಾಕ್‌ಡೌನ್‌ ತೆರವಾಗಿ, ಜನಜೀವನ ಎಂದಿನಂತೆ ನಡೆದರೆ ಪರಿಸ್ಥಿತಿ ಸುಧಾರಿಸಬಹುದು. ಮೇ 3 ಬರುವುದನ್ನೇ ಕಾಯುತ್ತಿದ್ದೇನೆ’ ಎಂದು ಜಿಲ್ಲಾಧಿಕಾರಿ ಕಚೇರಿ ಸಮೀಪದ ಫೋಟೊಕಾಪಿ ಅಂಗಡಿಯೊಂದರ ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾನು ಫೋಟೊಕಾಪಿ ಜೊತೆಗೆ ನೋಟ್‌ಬುಕ್‌ಗಳು, ಫೈಲ್‌ಗಳು, ಪೆನ್‌ಗಳನ್ನು ಮಾರುತ್ತಿದ್ದೆ. ಮೊಬೈಲ್ ಕರೆನ್ಸಿ ರೀಚಾರ್ಜ್‌ ಮಾಡುತ್ತಿದ್ದೆ. ಲಾಕ್‌ಡೌನ್‌ನಿಂದಾಗಿ ವರಮಾನ ಇಲ್ಲದಂತಾಗಿದೆ. ಅಂಗಡಿಗಾಗಿ ಮಾಡಿದ್ದ ಸಾಲದ ಕಂತು ತುಂಬುವುದಕ್ಕೆ ಪರದಾಡುತ್ತಿದ್ದೇನೆ. ಸರ್ಕಾರವು ನಮ್ಮಂತಹ ಅಂಗಡಿಕಾರರ ನೆರವಿಗೂ ಬರಬೇಕಿತ್ತು. ಜನಪ್ರತಿನಿಧಿಗಳು ನಮಗೂ ದಿನಸಿ ಮೊದಲಾದ ಅವಶ್ಯಕ ಸಾಮಗ್ರಿ ನೀಡಿದರೆ ಅನುಕೂಲವಾಗುತ್ತದೆ’ ಎಂದು ಇನ್ನೊಂದು ಅಂಗಡಿಯ ರಮೇಶ ಪಾಟೀಲ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT