ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕೈಗಾರಿಕೆ ಸರಾಗಕ್ಕೆ ಹಲವು ತೊಡಕು

ಕೈಗಾರಿಕಾ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಹಲವು ಸಮಸ್ಯೆ
Last Updated 20 ಮೇ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಉಸ್ತುವಾರಿ ವಹಿಸಿರುವ ಜಿಲ್ಲೆಯಲ್ಲೇ ಬಹಳಷ್ಟು ಕೈಗಾರಿಕೆಗಳು ಪುನರಾರಂಭ ಮಾಡಿಲ್ಲ.

ಕೋವಿಡ್–19 ಲಾಕ್‌ಡೌನ್‌ ಪರಿಣಾಮ ಕೈಗಾರಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇತ್ತೀಚೆಗೆ ಅವುಗಳನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಆರಂಭಿಸಬಹುದು ಎಂದು ಅನುಮತಿ ನೀಡಲಾಗಿದೆ. ಆದರೆ, ಲಾಕ್‌ಡೌನ್‌ ನೀಡಿದ ಬಲವಾದ ಹೊಡೆತದಿಂದ ಜರ್ಜರಿತವಾಗಿರುವ ಹಲವರು ಕಾರ್ಖಾನೆಗಳನ್ನು ಪುನರಾರಂಭಿಸಿಲ್ಲ. ಜೊತೆಗೆ, ಆರಂಭವಾಗಿರುವ ಕೈಗಾರಿಕೆಗಳಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಇದು ಉತ್ಪಾದನೆ, ಕಾರ್ಮಿಕರು ಹಾಗೂ ಗಳಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಅಷ್ಟಕ್ಕಷ್ಟೆ:‘ಜಿಲ್ಲೆಯಲ್ಲಿ ಸಣ್ಣ ಪ್ರಮಾಣದವೆಲ್ಲವೂ ಸೇರಿ 60ಸಾವಿರ ಕೈಗಾರಿಕೆಗಳಿವೆ. ಇವುಗಳಲ್ಲಿ 13ಸಾವಿರ ಪ್ರಮುಖ ಕೈಗಾರಿಕೆಗಳಿವೆ. ಈ ಪೈಕಿ ಶೇ 25ರಷ್ಟು ಕಾರ್ಯಾರಂಭ ಮಾಡಿಲ್ಲ. ಪುನರಾರಂಭ ಮಾಡಿರುವ ಶೇ 75ರಷ್ಟು ಕೈಗಾರಿಕೆಗಳಲ್ಲಿ ಶೇ 25ರಷ್ಟು ಮಾತ್ರ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಆರ್ಡರ್‌ ಆಶಾದಾಯಕ ಪ್ರಮಾಣದಲ್ಲಿಲ್ಲ. ಕಚ್ಚಾ ಸಾಮಗ್ರಿಗಳಿಗೆ ಕೊರತೆ, ಮಾರುಕಟ್ಟೆ ಹಾಗೂ ಸಾಗಣೆಗೆ ಸಮಸ್ಯೆ ಇದೆ. ಹೀಗಾಗಿ, ಕೈಗಾರಿಕೆಗಳು ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗಿಲ್ಲ. ಕೊರೊನಾ ಕೈಗಾರಿಕಾ ವಲಯದ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಾರ್ಮಿಕರ ಕೊರತೆ:‘ಮುಖ್ಯವಾಗಿ ಕಾರ್ಮಿಕರ ಕೊರತೆ ಎದುರಾಗಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಕಾರ್ಮಿಕರಿಗೆ, ಗ್ರಾಮದವರು ಮತ್ತೆ ಸೇರಿಸಿಕೊಳ್ಳಲು ತಕರಾರು ತೆಗೆಯುತ್ತಿದ್ದಾರೆ. ನಗರಕ್ಕೆ ಹೋಗಿ ಬರುವ ಅವರಿಂದ ಸೋಂಕು ಹರಡಬಹುದು ಎಂಬ ಭೀತಿ ಅವರದು. ಹೀಗಾಗಿ, ಪ್ರತಿರೋಧ ತೋರುತ್ತಿದ್ದಾರೆ. ಪರಿಣಾಮ ಹಲವು ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ದ್ವಿಚಕ್ರವಾಹನದಲ್ಲಿ ಒಬ್ಬರಿಗಷ್ಟೇ ಅವಕಾಶ ನೀಡಲಾಗಿದೆ. ಇಬ್ಬರು ಸವಾರಿ ಮಾಡಿದರೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ‘ಡ್ರಾಪ್‌’ ತೆಗೆದುಕೊಳ್ಳುತ್ತಿದ್ದ ಮಹಿಳಾ ಕಾರ್ಮಿಕರಿಗೆ ಇದರಿಂದ ತೊಂದರೆಯಾಗಿದೆ. ಸಂಜೆ 7ರ ನಂತರ ಜನರ ಸಂಚಾರಕ್ಕೆ ಅವಕಾಶ ಇಲ್ಲದಿರುವುದು ಕೂಡ ತೊಡಕಾಗಿದೆ’.

‘ಬಿಹಾರ, ರಾಜಸ್ಥಾನ ಹಾಗೂ ಉತ್ತರಪ್ರದೇಶದ 3ಸಾವಿರಕ್ಕೂ ಹೆಚ್ಚು ಕಾರ್ಮಿಕರು ನಗರ ತೊರೆಯುತ್ತಿದ್ದಾರೆ. ಇದರಿಂದಲೂ ಕಾರ್ಮಿಕರ ಕೊರತೆ ಎದುರಾಗಿದೆ’. ಉದ್ಯಮಬಾಗ್ ಪ್ರದೇಶ ಸೊರಗಿದೆ.’

ಕಚ್ಚಾ ಸಾಮಗ್ರಿ ಲಭ್ಯವಿಲ್ಲ:‘ಮಹಾರಾಷ್ಟ್ರದ ಮುಂಬೈ, ಪುಣೆ, ತಮಿಳುನಾಡಿನ ಚೆನ್ನೈನಲ್ಲಿ ಕೈಗಾರಿಕೆಗಳು ಬಂದ್ ಆಗಿವೆ. ಇದರಿಂದಾಗಿ ಇಲ್ಲಿನ ಆಟೊಮೊಬೈಲ್ ಬಿಡಿಭಾಗಗಳಿಗೆ ಬೇಡಿಕೆ ಇಲ್ಲ. ಕಚ್ಚಾ ಸಾಮಗ್ರಿಗಳನ್ನು ಕೊಡುವುದು–ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿಲ್ಲ. ರಫ್ತು ಚಟುವಟಿಕೆ ಹೊಸದಾಗಿ ನಡೆಯುತ್ತಿಲ್ಲ. ಲಾಕ್‌ಡೌನ್‌ಗೆ ಮುನ್ನ ಆರ್ಡರ್‌ ಇದ್ದವನ್ನು ಮಾತ್ರವೇ ಕಳುಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಕೈಗಾರಿಕೋದ್ಯಮಿಗಳು.

‘ಈಗಾಗಲೇ ಆರ್ಥಿಕವಾಗಿ ನೊಂದಿದ್ದೇವೆ. ಹೀಗಿರುವಾಗ ನಿರ್ಬಂಧಗಳ ನಡುವೆ ಕೆಲಸ ಮಾಡುವುದರಿಂದ ಹೆಚ್ಚಿನ ಉತ್ಪಾದನೆ ಸಾಧ್ಯವಿಲ್ಲ. ಅಲ್ಲದೇ, ಬಿಡಿಭಾಗಗಳಿಗೆ ಬೇಡಿಕೆಯೂ ಕುಸಿದಿದೆ. ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು 14 ದಿನಗಳವರೆಗೆ ಕ್ವಾರಂಟೈನ್ ಮಾಡಬೇಕಾಗುತ್ತದೆ. ಹೀಗಾಗಿ, ಕಾರ್ಮಿಕರು ಭಯ ಪಡುತ್ತಿದ್ದಾರೆ. ಮಾರ್ಕೆಟಿಂಗ್‌ ಹಾಗೂ ಸಾಗಣೆಗೆ ತೊಂದರೆಯಾಗುತ್ತಿದೆ’ ಎಂದು ತಿಳಿಸಿದರು.

ಫೌಂಡ್ರಿ ಉದ್ಯಮಕ್ಕೂ ‘ಬರೆ’
ನಗರವು ಫೌಂಡ್ರಿ (ಎರಕ) ಉದ್ದಿಮೆಗೆ ಹೆಸರುವಾಸಿ. ಇಲ್ಲಿ 122 ನೋಂದಾಯಿತ ಫೌಂಡ್ರಿಗಳಿವೆ. ಇವುಗಳಲ್ಲಿ 82 ಆರಂಭವಾಗಿದ್ದವು. ಈ ಪೈಕಿ ಹಲವು ಫೌಂಡ್ರಿಗಳು ಕಚ್ಚಾ ಸಾಮಗ್ರಿಗಳ ಕೊರತೆಯಿಂದ ತೊಂದರೆಗೆ ಒಳಗಾಗಿವೆ. ಹೀಗಾಗಿ, ಈ ರಂಗವೂ ಕ್ರಿಯಾಶೀಲವಾಗಿ ನಡೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

*
ಕೈಗಾರಿಕೆಗಳಿಗೆ ಆಗುತ್ತಿರುವ ತೊಂದರೆ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಕ್ರಮೇಣ ಸುಧಾರಿಸುವ ಸಾಧ್ಯತೆ ಇದೆ.
ದೊಡ್ಡಬಸವರಾಜ,ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ

*
ಕೈಗಾರಿಕೆಗಳು ಆಪತ್ಕಾಲದಲ್ಲಿವೆ. ಸರ್ಕಾರದಿಂದ ಯಾವುದೇ ರೀತಿಯ ನೆರವು ಬಂದಿಲ್ಲ. ಆರ್ಡರ್ ಇಲ್ಲ. ಖರೀದಿಸಿದವರಿಂದ ಪೇಮೆಂಟ್ ಆಗುತ್ತಿಲ್ಲ. ಹಲವು ತೊಂದರೆ ಎದುರಿಸುತ್ತಿದ್ದೇವೆ.
-ಉಮೇಶ್ ಶರ್ಮ, ಕೈಗಾರಿಕೋದ್ಯಮಿ

*
ರಾಜ್ಯದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ಇನ್ನೂ ಹಲವು ಸಮಸ್ಯೆಗಳಿವೆ. ಕಾರ್ಮಿಕರು ನಗರ ಬಿಟ್ಟು ಹೋಗಿದ್ದಾರೆ. ಅವರು ಮರಳುವಂತಾಗಲು ಹಾಗೂ ಒಳ್ಳೆಯ ವಾತಾವರಣ ನಿರ್ಮಾಣವಾಗಲು ಪ್ರಯತ್ನಿಸುತ್ತಿದ್ದೇವೆ.
-ಜಗದೀಶ ಶೆಟ್ಟರ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT