ಶುಕ್ರವಾರ, ಜೂನ್ 5, 2020
27 °C

ಬೆಳಗಾವಿ | ರೇಣುಕಾದೇವಿ ದೇವಸ್ಥಾನಕ್ಕೂ ತಟ್ಟಿದ ಲಾಕ್‌ಡೌನ್‌ ಬಿಸಿ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಜಿಲ್ಲೆಯ ಸವದತ್ತಿಯ ಯಲ್ಲಮ್ಮನಗುಡ್ಡದ ರೇಣುಕಾದೇವಿ ದೇವಸ್ಥಾನಕ್ಕೂ ಲಾಕ್‌ಡೌನ್‌ ಬಿಸಿ ತಟ್ಟಿದೆ. ಲಕ್ಷಾಂತರ ಭಕ್ತರಿಗೆ ದೇವಿಯ ದರ್ಶನ ಭಾಗ್ಯ ದೊರೆತಿಲ್ಲ. ಮತ್ತೊಂದೆಡೆ, ದೇವಸ್ಥಾನಕ್ಕೆ ಹರಿದು ಬರುತ್ತಿದ್ದ ಕೋಟ್ಯಾಂತರ ರೂಪಾಯಿ ದೇಣಿಗೆ ಖೋತಾ ಆಗಿದೆ.

ರೇಣುಕಾ ದೇವಿಗೆ ಬೆಳಗಾವಿ, ಅಕ್ಕಪಕ್ಕದ ಜಿಲ್ಲೆಗಳ ಜೊತೆ ನೆರೆಯ ಮಹಾರಾಷ್ಟ್ರದಲ್ಲಿಯೂ ಲಕ್ಷಾಂತರ ಜನ ಭಕ್ತರಿದ್ದಾರೆ. ಹುಣ್ಣಿಮೆ ದಿನ ಸೇರಿದಂತೆ ಆಗಾಗ ದೇವಿಯ ದರ್ಶನಕ್ಕೆ ಬರುತ್ತಾರೆ. ಆದರೆ, ಕಳೆದ ಎರಡು ತಿಂಗಳ ಅವಧಿಯಲ್ಲಿ ಲಾಕ್‌ಡೌನ್‌ದಿಂದಾಗಿ ದೇವಿಯ ದರ್ಶನ ಸಾಧ್ಯವಾಗಿಲ್ಲ. ಮಾರಕ ರೋಗ ಕೋವಿಡ್‌–19 ವಿರುದ್ಧ ಸೆಣಸಾಡಲು ದೇಶದಾದ್ಯಂತ ಲೌಕ್‌ಡೌನ್‌ ಘೋಷಿಸಿ, ಜನರ ಓಡಾಟದ ಮೇಲೆ ನಿರ್ಬಂಧ ಹೇರಲಾಗಿತ್ತು. ಇದರ ಭಾಗವಾಗಿ ದೇವಸ್ಥಾನಗಳಿಗೆ ಭೇಟಿ ನೀಡದಂತೆ ಭಕ್ತರನ್ನು ತಡೆಹಿಡಿಯಲಾಗಿದೆ.

₹ 6 ಕೋಟಿಗೂ ಹೆಚ್ಚು ನಷ್ಟ: ಪ್ರತಿ ಸೋಮವಾರ, ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ, ಅಮವಾಸ್ಯೆ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿದ್ದರು. ಒಂದು ಅಂದಾಜಿನ ಪ್ರಕಾರ, ಪ್ರತಿ ತಿಂಗಳು 80 ಸಾವಿರದಿಂದ 1 ಲಕ್ಷದವರೆಗೆ ಬರುತ್ತಿದ್ದರು. ಎರಡು ತಿಂಗಳ ಅವಧಿಯಲ್ಲಿ ಅಂದಾಜು 1.60 ಲಕ್ಷದಿಂದ 2 ಲಕ್ಷದವರೆಗೆ ಬರುತ್ತಿದ್ದರು. ಲಾಕ್‌ಡೌನ್‌ದಿಂದಾಗಿ ಇವರಿಗೆ ಬರಲು ಸಾಧ್ಯವಾಗಿಲ್ಲ.

ಈ ಅವಧಿಯಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದ ಕೋಟ್ಯಾಂತರ ರೂಪಾಯಿ ಆದಾಯವೂ ಖೋತಾ ಆಗಿದೆ. ಕಳೆದ ವರ್ಷ ಮಾರ್ಚ್‌– ಏಪ್ರಿಲ್‌– ಮೇ ತಿಂಗಳಲ್ಲಿ ₹ 6 ಕೋಟಿ ಆದಾಯ ದೇವಸ್ಥಾನಕ್ಕೆ ಬಂದಿತ್ತು. ಅದೇ ಲೆಕ್ಕ ಹಾಕಿದರೆ ಈ ಸಲವೂ ಬಹುತೇಕ ಅಷ್ಟೇ ಪ್ರಮಾಣದ ನಷ್ಟ ಉಂಟಾಗಿದೆ.

ಜನಜೀವನ ಸಾಮಾನ್ಯಗೊಳಿಸಲು ಸರ್ಕಾರವು ಹಂತಹಂತವಾಗಿ ಲಾಕ್‌ಡೌನ್‌ ಸಡಿಲಿಕೆಗೊಳಿಸುತ್ತಿದೆ. ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಹಾಗೂ ಸ್ಯಾನಿಟೈಸರ್‌ ಬಳಸುವಂತೆ ಸರ್ಕಾರ ಎಚ್ಚರಿಕೆ ನೀಡಿದ್ದರೂ ಬಹಳಷ್ಟು ಜನರು ಪಾಲಿಸುತ್ತಿಲ್ಲ. ಗುಂಪು ಗುಂಪಾಗಿ ಸಂಚರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕೋವಿಡ್‌–19 ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ದೇವಸ್ಥಾನಗಳ ಬಾಗಿಲು ತೆರೆಯಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.

ಶೀಘ್ರ ಆನ್‌ಲೈನ್‌ ಸೇವೆ: ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಿರುವುದನ್ನು ಮನಗಂಡಿರುವ ಸರ್ಕಾರವು, ಆನ್‌ಲೈನ್‌ ಮೂಲಕ ದೇವಿಯ ದರ್ಶನ ಹಾಗೂ ದೇವಸ್ಥಾನಗಳ ಸೇವೆಗೆ ಅವಕಾಶ ಕಲ್ಪಿಸಲು ಯೋಚಿಸಿದೆ. ರೇಣುಕಾದೇವಿ ಭಕ್ತರಿಗೂ ಈ ಅವಕಾಶ ದೊರೆಯಲಿದೆ. ಅರ್ಚನೆ, ಪಂಚಾಮೃತ, ಅಭಿಷೇಕ, ಪಡ್ಡಲಗಿ (5 ಜೋಗತಿಯರಿಗೆ ಕರಿಗಡುಬು ನೀಡುವುದು), ಹೋಳಿಗೆ ಸೇವೆ, ಅನ್ನದಾಸೋಹ, ಪಾಲಿಕೆ ಸೇವೆಯೂ ಆನ್‌ಲೈನ್‌ ಮೂಲಕ ದೊರೆಯಲಿದೆ. ಭಕ್ತರು ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿ, ದೇವ ಕಾರ್ಯ ಕೈಗೊಳ್ಳಬಹುದಾಗಿದೆ. ಆನ್‌ಲೈನ್‌ ಮೂಲಕ ದೇವಿಯ ದರ್ಶನ, ಪೂಜೆ ವೀಕ್ಷಿಸಬಹುದಾಗಿದೆ.

ದೇವಸ್ಥಾನ ಸಮಿತಿಯಿಂದ ಎಲ್ಲ ಅಗತ್ಯ ಮಾಹಿತಿಗಳನ್ನು ಮುಜರಾಯಿ ಇಲಾಖೆ ತರಿಸಿಕೊಂಡಿದ್ದು, ಸದ್ಯದಲ್ಲಿಯೇ ಆನ್‌ಲೈನ್‌ ಸೇವೆ ಆರಂಭವಾಗುವ ನಿರೀಕ್ಷೆ ಇದೆ.

*
ಪ್ರತಿ ತಿಂಗಳು ಅಂದಾಜು 80 ಸಾವಿರದಿಂದ 1 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಭಕ್ತರ ಪ್ರವೇಶ ನಿರ್ಬಂಧದಿಂದ ಆದಾಯವೂ ಖೋತಾ ಆಗಿದೆ.
-ರವಿ ಕೋಟಗಾರಗಸ್ತಿ, ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು