ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಬೆಳಗಾವಿ ಬಹುತೇಕ ಸ್ತಬ್ಧ

ಐವರ ಮಾದರಿಗಳ ವರದಿ ಬರುವುದು ಬಾಕಿ
Last Updated 29 ಮಾರ್ಚ್ 2020, 13:39 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಘೋಷಿಸಲಾಗಿರುವ ‘ಲಾಕ್‌ಡೌನ್‌’ಗೆ ಭಾನುವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇಡೀ ನಗರ ಬಹುತೇಕ ಸ್ತಬ್ಧವಾಗಿತ್ತು.

ವಾರಾಂತ್ಯವಾದ್ದರಿಂದ ಅನಗತ್ಯವಾಗಿ ರಸ್ತೆಗಿಳಿಯುವವರ ಸಂಖ್ಯೆ ಕಡಿಮೆ ಇತ್ತು. ಅಲ್ಲಲ್ಲಿ ಕೆಲವು ದ್ವಿಚಕ್ರವಾಹನಗಳು, ಕಾರುಗಳು ಸಂಚರಿಸಿದ್ದು ಹೊರತುಪಡಿಸಿದರೆ ಬಿಟ್ಟು ಜನಸಂಚಾರ ವಿರಳವಾಗಿತ್ತು. ಅವಶ್ಯ ವಸ್ತುಗಳ ಖರೀದಿಗಾಗಿ ಅಂಡಿಗಳಿಗೆ ಹೋಗುವವರು ಅಲ್ಲಲ್ಲಿ ಕಂಡುಬಂದರು. ಮಾರುಕಟ್ಟೆಯಲ್ಲಿ ತೆರೆದಿದ್ದ ಕೆಲವೇ ಅಂಗಡಿಗಳ ಬಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮಾರ್ಕಿಂಗ್ ಮಾಡಲಾಗಿತ್ತು.

ಹಾಲು ಹಾಕುವವರು, ಪತ್ರಿಕೆಗಳನ್ನು ವಿತರಿಸುವವರು, ಪೊಲೀಸರು, ಪೌರಕಾರ್ಮಿಕರು, ಮೆಡಿಕಲ್ ಸ್ಟೋರ್‌ಗಳವರು, ವೈದ್ಯಕೀಯ ಸಿಬ್ಬಂದಿ ಎಂದಿನಂತೆ ಕಾರ್ಯನಿರ್ವಹಿಸಿ ಕೊರೊನಾ ಭೀತಿಯ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದರು.

ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆಗಳು ವರದಿಯಾಗಿಲ್ಲ.

ಈ ನಡುವೆ, ಜಿಲ್ಲೆಯಲ್ಲಿ ‘ನಿಗಾ’ ವ್ಯವಸ್ಥೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ‘ಈವರೆಗೆ 376 ಮಂದಿ ವಿದೇಶ ಹಾಗೂ ಹೊರಗಿನಿಂದ ಜಿಲ್ಲೆಗೆ ಬಂದಿದ್ದಾರೆ. ಈ ಪೈಕಿ 226 ಮಂದಿಗೆ ಮನೆಗಳಲ್ಲಿ ಐಸೋಲೇಷನ್ ವ್ಯವಸ್ಥೆಯಲ್ಲಿರುವಂತೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಅವರ ಮೇಲೆ ನಿಗಾ ವಹಿಸಿದ್ದಾರೆ. ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 122 ಮಂದಿ 14 ದಿನಗಳ ನಿಗಾ ವ್ಯವಸ್ಥೆ (ಐಸೋಲೇಷನ್) ಪೂರ್ಣಗೊಳಿಸಿದ್ದಾರೆ. 23 ಮಂದಿ 28 ದಿನಗಳ ನಿಗಾ ಪೂರೈಸಿದ್ದಾರೆ. 18 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಈವರೆಗೆ 13 ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್ ಆಗಿವೆ. ಐವರ ವರದಿಗಳು ಬರುವುದು ಬಾಕಿ ಇವೆ. ಈವರೆಗೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT