ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನೆರೆಯಾಯ್ತು ಈಗ ಲಾಕ್‌ಡೌನ್ ‘ಬರೆ’

ಮಗ್ಗಗಳು ಸ್ತಬ್ಧ; ನೇಕಾರರ ಬದುಕು ದುಸ್ತರ
Last Updated 29 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಹೋದ ವರ್ಷ ಉಂಟಾಗಿದ್ದ ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ನೇಕಾರರಿಗೆ ಲಾಕ್‌ಡೌನ್‌ ‘ಬರೆ’ ಎಳೆದಿದೆ. ಇದರಿಂದಾಗಿ ಮಗ್ಗಗಳೊಂದಿಗೆ ಅವರ ಬದುಕು ಕೂಡ ‘ಸ್ತಬ್ಧ’ವಾಗಿದೆ.

ನಗರದ ಖಾಸಬಾಗ್, ಭಾರತನಗರ, ವಡಗಾವಿ, ಶಹಾಪುರ, ತಾಲ್ಲೂಕಿನ ಸುಳೇಭಾವಿ, ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ, ಸವದತ್ತಿ ತಾಲ್ಲೂಕಿನ ವಿವಿಧ ಹಳ್ಳಿಗಳು, ರಾಮದುರ್ಗ ತಾಲ್ಲೂಕು, ಕಿತ್ತೂರು, ರಾಯಬಾಗ ತಾಲ್ಲೂಕು ಸೇರಿದಂತೆ ವಿವಿಧೆಡೆ 25ಸಾವಿರಕ್ಕೂ ಹೆಚ್ಚು ಮಗ್ಗಗಳಿವೆ. ಈ ವೃತ್ತಿಯನ್ನು ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಅವಲಂಬಿಸಿವೆ. ಲಾಕ್‌ಡೌನ್‌ ಕಾರಣದಿಂದ ಮಾರುಕಟ್ಟೆ ಇಲ್ಲದೆ ಸೀರೆಗಳಿಗೆ ಬೇಡಿಕೆ ಕುಸಿದಿದೆ. ಪರಿಣಾಮ ಮಗ್ಗಗಳು ಸ್ಥಗಿತಗೊಂಡಿವೆ. ಹಳ್ಳಿಗಳಲ್ಲಿ ಮಗ್ಗಗಳ ಸದ್ದು ಕೇಳಿಬರುತ್ತಿಲ್ಲ. ಇದರಿಂದಾಗಿ ಆದಾಯವಿಲ್ಲದೆ ನೇಕಾರರ ಕುಟುಂಬದವರ ಜೀವನ ದುಸ್ತರವಾಗಿದೆ.

ಚೇತರಿಸಿಕೊಳ್ಳುವಷ್ಟರಲ್ಲಿ

ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ, ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜಿಲ್ಲೆಯ 1,763 ಮಗ್ಗಗಳಿಗೆ ಹಾನಿಯಾಗಿತ್ತು. ಹಲವರು ಮನೆಗಳನ್ನು ಕೂಡ ಕಳೆದುಕೊಂಡಿದ್ದರು. ಅವುಗಳನ್ನು ದುರಸ್ತಿಪಡಿಸಿಕೊಂಡು ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಎದುರಾಗಿದೆ. ಬೆಲೆ ಕುಸಿತದಿಂದ ಕಂಗಾಲಾಗಿದ್ದ ನಾವು ‘ಹೊಸ ಜೀವನ’ ಕಟ್ಟಿಕೊಳ್ಳಲು ಮದುವೆ ಸೀಸನ್‌ನಲ್ಲಿ ಕೊಂಚ ಸಹಾಯವಾಗಬಹುದು ಎಂಬ ಅವರ ನಿರೀಕ್ಷೆಯೂ ಹುಸಿಯಾಗಿದೆ. ಬೇಡಿಕೆ ಕಂಡುಬರುತ್ತಿದ್ದ ಸಂದರ್ಭದಲ್ಲೇ ಕೆಲಸ ಇಲ್ಲದಂತಾಗಿ ಕಂಗಾಲಾಗಿದ್ದಾರೆ.

ಕಚ್ಚಾ ಸಾಮಗ್ರಿಗಳ ಪೂರೈಕೆಯೂ ನಿಂತಿರುವುದರಿಂದ ಮಗ್ಗಗಳನ್ನು ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಶಹಾಪುರ ಸೀರೆಗಿಲ್ಲ ಬೇಡಿಕೆ

ಬೆಳಗಾವಿಯ ವಿಶೇಷವಾದ ಸಾಂಪ್ರದಾಯಿಕ ‘ಶಹಾಪುರ ಸೀರೆ’ಗಳಿಗೂ ಬೇಡಿಕೆ ಕುಸಿದಿದೆ. ಮದುವೆಯ ಈ ಸೀಸನ್‌ನಲ್ಲಿ ಒಂದಷ್ಟು ಸೀರೆಗಳು ಮಾರಾಟವಾಗಿ, ನೇಕಾರರು ವರಮಾನ ಕಾಣುತ್ತಿದ್ದರು.

‘ಹೋದ ವರ್ಷ ನೆರೆಯಿಂದಾಗಿ ನಾವು ಸಂಕಷ್ಟಕ್ಕೆ ಒಳಗಾಗಿದ್ದೆವು. ಈಗ, ಲಾಕ್‌ಡೌನ್‌ ಸಮಸ್ಯೆ ತಂದೊಡ್ಡಿದೆ. ಈಗಾಗಲೇ ಸಿದ್ಧಪಡಿಸಿದ ಸೀರೆಗಳು ಮಾರಾಟವಾಗಿಲ್ಲ. ಮಾರುಕಟ್ಟೆಯೂ ಇಲ್ಲ. ನೋಟು ಚಲಾವಣೆ ರದ್ದು, ನಂತರ ಜಿಎಸ್‌ಟಿ, ಬಳಿಕ ನೆರೆ ಹಾಗೂ ಅತಿವೃಷ್ಟಿ ಬಾಧಿಸಿತು. ಸರಣಿ ಸಮಸ್ಯೆಗಳಿಂದಾಗಿ ನೇಕಾರರು ಕುಗ್ಗಿ ಹೋಗಿದ್ದೇವೆ’ ಎಂದು ಜಿಲ್ಲಾ ನೇಕಾರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ಪ್ರತಿಕ್ರಿಯಿಸಿದರು.

‘ನೀರಿನಲ್ಲಿ ನಿಂತಿದ್ದ ಮಗ್ಗಗಳನ್ನು ಜೋಡಿಸಿಕೊಳ್ಳುವುದು ಹಾಗೂ ಮನೆಗಳನ್ನು ದುರಸ್ತಿ ಮಾಡಿಕೊಳ್ಳುವುದೇ ಕೆಲವು ಕಡೆ ಮುಗಿದಿಲ್ಲ. ಹೀಗಿರುವಾಗ ಮತ್ತೊಂದು ಬಲವಾದ ಹೊಡೆತ ಬಿದ್ದಿದೆ. ಸೀರೆಗಳನ್ನು ಖರೀದಿಸಲು ಯಾರೂ ಸಿದ್ಧವಿಲ್ಲ. ನೇಯ್ಗೆ ಮುಂದುವರಿಸೋಣ ಎಂದರೆ ಕಚ್ಚಾ ಸಾಮಗ್ರಿಗಳಿಲ್ಲ. ಗುಜರಾತ್‌ನ ಸೂರತ್‌ ಹಾಗೂ ತಮಿಳುನಾಡಿನ ಕೊಯಮತ್ತೂರಿನಿಂದ ಸಾಮಗ್ರಿಗಳ ಸಾಗಣೆಗೆ ನಿರ್ಬಂಧವಿದೆ. ಸಮಾಜದವರು ನೀಡಿರುವ ಮಾಹಿತಿ ಪ್ರಕಾರ 3 ಲಕ್ಷಕ್ಕೂ ಹೆಚ್ಚಿನ ಸೀರೆಗಳು ಮಾರಾಟವಾಗದೆ ಉಳಿದಿವೆ. ಈಗಾಗಲೇ ಖರೀದಿಸಿದವರಿಂದ ಬಿಲ್‌ಗಳು ಪಾವತಿಯಾಗಿಲ್ಲ’ ಎಂದು ಮಾಹಿತಿ ನೀಡಿದರು.

‘ನಮ್ಮ ಪರಿಸ್ಥಿತಿ ಸುಧಾರಿಸಲು ಅದೆಷ್ಟು ಸಮಯ ಬೇಕಾಗುವುದೋ ಗೊತ್ತಿಲ್ಲ. ಮುಂದಿನ ದಾರಿಯೇ ಕಾಣದಾಗಿದೆ. ನೆರೆ ಹಾವಳಿಯಿಂದಲೂ ನಾವು ಕಂಗೆಟ್ಟಿದ್ದೆವು. ಇದರಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ಸವದತ್ತಿ ತಾಲ್ಲೂಕಿನ ಮುನವಳ್ಳಿಯ ಮಾಗುಂಡಪ್ಪ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT