ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಲಾಕ್‌ಡೌನ್‌ಗೆ ಜನಸಂಚಾರ ವಿರಳ

Last Updated 27 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್‌ ನಿಮಿತ್ತ ಶುಕ್ರವಾರವೂ ನಗರದ ಬಹುತೇಕ ಕಡೆ ಜನ ಸಂಚಾರ ವಿರಳವಾಗಿತ್ತು.

ಜನಸಂಚಾರವನ್ನು ನಿಯಂತ್ರಿಸುವ ದೃಷ್ಟಿಯಿಂದ ಮನೆಮನೆಗೆ ತೆರಳಿ ತರಕಾರಿ ಮಾರಾಟ ಮಾಡಲು ಜಿಲ್ಲಾಡಳಿತವು ವ್ಯಾಪಾರಸ್ಥರಿಗೆ ಅನುವು ಮಾಡಿಕೊಟ್ಟಿತು. ಇದರ ಪರಿಣಾಮವಾಗಿ ವ್ಯಾಪಾರಸ್ಥರು ತಳ್ಳು ಗಾಡಿ ಹಾಗೂ ಟಾಂಟಾಂನಲ್ಲಿ ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ತೆರಳಿ ತರಕಾರಿ ಮಾರಾಟ ಮಾಡಿದರು. ಇದರಿಂದ ಜನರು ಮಾರುಕಟ್ಟೆಗೆ ಬರುವುದು ಬಹಳಷ್ಟರ ಮಟ್ಟಿಗೆ ನಿಂತುಹೋಯಿತು.

ಹಾಲು ವಿತರಣೆ ಹಾಗೂ ದಿನಸಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಡಾವಣೆ ಪ್ರದೇಶಗಳಲ್ಲಿ ಅಂಗಡಿಗಳು ತೆರೆದು, ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸಿದವು. ಆಸ್ಪತ್ರೆ (ತುರ್ತು ಸೇವೆ), ಔಷಧಿ ಅಂಗಡಿಗಳು ತೆರೆದಿದ್ದವು.

ಬೆಳಗಿನಜಾವ ಎಪಿಎಂಸಿ ಆವರಣದಲ್ಲಿ ರೈತರು ಹಾಗೂ ವ್ಯಾಪಾರಸ್ಥರು ಒಟ್ಟಿಗೆ ಜಮಾಯಿಸಿದ್ದರಿಂದ ಕೆಲಕಾಲ ಜನಸಂದಣಿ ಉಂಟಾಗಿತ್ತು. ನಂತರ ಪೊಲೀಸರು ಮಧ್ಯಪ್ರವೇಶಿಸಿ, ಜನದಟ್ಟಣೆ ನಿಯಂತ್ರಿಸಿದರು.

ಪ್ರತಿ ವಾಹನಗಳ ಮೇಲೆ ನಿಗಾ:ವೈದ್ಯಕೀಯ, ಟೆಲಿಕಾಂ, ವಿದ್ಯುತ್‌, ಜಲಮಂಡಳಿ, ಸರ್ಕಾರಿ ಅಧಿಕಾರಿಗಳು, ಮಾಧ್ಯಮ ಸೇರಿದಂತೆ ಅಗತ್ಯ ಸೇವೆಗಳನ್ನು ನೀಡುವವರನ್ನು ಹೊರತುಪಡಿಸಿ ಇನ್ನಿತರರ ಸಂಚಾರದ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದರು.

ನಗರದ ಪ್ರತಿಯೊಂದು ವೃತ್ತ, ಮುಖ್ಯ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗಿ, ಜನಸಂಚಾರವನ್ನು ತಡೆದರು. ಸುಖಾಸುಮ್ಮನೆ ತಿರುಗಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು.

ಬಸ್ಕಿ ಹೊಡೆಸಿದರು:ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವರು ಸುಖಾಸುಮ್ಮನೇ ಬೈಕ್‌ ಮೇಲೆ ತಿರುಗಾಡುತ್ತಿದ್ದ ಕೆಲವರನ್ನು ಬಿಮ್ಸ್‌ ಸರ್ಕಲ್‌ ಬಳಿ ತಡೆಹಿಡಿದ ಪೊಲೀಸರು, ಅವರಿಂದ ಬಸ್ಕಿ ಹೊಡೆಸಿದರು. ಮತ್ತೆ ತಿರುಗಾಡಿದರೆ ಕೇಸ್‌ ದಾಖಲಿಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಕಳುಹಿಸಿದರು.

ಕೇಸ್‌– ಎಚ್ಚರಿಕೆ:‘ನಗರದಲ್ಲಿ ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗಿದೆ. ಸುಖಾಸುಮ್ಮನೆ ತಿರುಗಾಡುವವರು ಕಂಡುಬಂದರೆ ವಾಹನಗಳನ್ನು ವಶಪಡಿಸಿಕೊಂಡು, ಕೇಸ್‌ ಹಾಕಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT