ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

77 ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌ 27ರಂದು

Last Updated 3 ಮಾರ್ಚ್ 2021, 12:21 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾರ್ಚ್ 27ರಂದು ಜಿಲ್ಲೆಯ 77 ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದರು.

‘ಜಿಲ್ಲೆಯಲ್ಲಿ 1.24 ಲಕ್ಷ ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಈ ಪೈಕಿ ಭೂಸ್ವಾಧೀನ ಪರಿಹಾರ, ಚೆಕ್ ಬೌನ್ಸ್, ಕೌಟುಂಬಿಕ ಸಮಸ್ಯೆ ಮತ್ತಿತರ ಪ್ರಕರಣಗಳನ್ನು ಅದಾಲತ್‍ನಲ್ಲಿ ಇತ್ಯರ್ಥಪಡಿಸಲು ಅವಕಾಶವಿದೆ. ಅಂತಹ 40ಸಾವಿರ ಪ್ರಕರಣಗಳನ್ನು ಗುರುತಿಸಲಾಗಿದೆ. ಹೆಚ್ಚಿನ ಪ್ರಕರಣಗಳನ್ನು ರಾಜಿ–ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಯತ್ನಿಸಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಪ್ರತಿ ವರ್ಷ ಇತ್ಯರ್ಥಗೊಳ್ಳುವ ಒಟ್ಟು ಪ್ರಕರಣಗಳ ಪೈಕಿ, ಶೇ.20ರಷ್ಟು ಪ್ರಕರಣಗಳು ಲೋಕ ಅದಾಲತ್‍ನಲ್ಲಿ ಆಗುತ್ತವೆ. ಕೋವಿಡ್–19 ಹಿನ್ನೆಲೆಯಲ್ಲಿ ಹೋದ ವರ್ಷ ಡಿಸೆಂಬರ್‌ನಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅದಾಲತ್ ನಡೆಸಿ, 10ಸಾವಿರಕ್ಕಿಂತ ಹೆಚ್ಚು ಪ್ರಕರಣ ಇತ್ಯರ್ಥಪಡಿಸಿದ್ದೇವೆ’ ಎಂದು ಹೇಳಿದರು.

‘ಅದಾಲತ್‍ಗೆ ಪೂರ್ವಭಾವಿಯಾಗಿ, ಎಲ್ಲ ನ್ಯಾಯಾಲಯಗಳಲ್ಲೂ ನಿತ್ಯ ಸಂಜೆ 4ರಿಂದ 6.30ರವರೆಗೆ ಕಕ್ಷಿದಾರರ ವಿಚಾರಣೆ ನಡೆಸಲಾಗುತ್ತಿದೆ. ಮಾರ್ಚ್‌ 27ರಂದು ಅದಾಲತ್‍ಗೆ ಖುದ್ದಾಗಿ ಬರಲಾಗದಿದ್ದರೆ ಕಕ್ಷಿದಾರರು ಆನ್‍ಲೈನ್‍ನಲ್ಲೇ ವಿಚಾರಣೆಗೆ ಹಾಜರಾಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕೋರಿದರು.

‘ಹಿರಿಯ ನ್ಯಾಯಾಧೀಶರು ಹಾಗೂ ಅನುಭವಿ ವಕೀಲರು ಅದಾಲತ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಕಕ್ಷಿದಾರರ ಅಭಿಪ್ರಾಯ ಆಲಿಸಿ, ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಯತ್ನಿಸುವರು. ಈ ಪ್ರಕ್ರಿಯೆಗೆ ವೇಗ ನೀಡಲು ಜಿಲ್ಲೆಯಲ್ಲಿ ನಾಲ್ವರು ನಿವೃತ್ತ ನ್ಯಾಯಾಧೀಶರನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇಲ್ಲಿ ಹೆಚ್ಚಿನ ಪ್ರಕರಣ ಇತ್ಯರ್ಥವಾದರೆ, ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಲಿದೆ’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ ಅರಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT