ಕ್ರೀಡೆಯಲ್ಲಿ ಮಿಂಚುತ್ತಿರುವ ಲೋಕಾಪುರ ಕಾಲೇಜು

7
ಕ್ರೀಡೆಯಲ್ಲಿ ಉತ್ತಮ ತರಬೇತಿ; ಹಲವು ಪ್ರಶಸ್ತಿ

ಕ್ರೀಡೆಯಲ್ಲಿ ಮಿಂಚುತ್ತಿರುವ ಲೋಕಾಪುರ ಕಾಲೇಜು

Published:
Updated:
Deccan Herald

ಅಥಣಿ: ಇಲ್ಲಿನ ಕೆ.ಎ. ಲೋಕಾಪುರ ಪದವಿ ಕಾಲೇಜು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮಿಂಚುತ್ತಿದ್ದಾರೆ.

ಕ್ರೀಡೆಯಲ್ಲಿ ತಾಲ್ಲೂಕಿನ ಹೆಸರು ಬೆಳಗಿಸಲು ಈ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ನರಗಟ್ಟಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದಾರೆ. ರಾಯಬಾಗ ತಾಲ್ಲೂಕು ಕೋಳಿಗುಡ್ಡದ ಅವರು, ಹ್ಯಾಂಡ್‌ಬಾಲ್‌ ಕ್ರೀಡೆಯಲ್ಲಿ ಹೆಸರು ಮಾಡಿದವರು. ಬೆಳಗಾವಿ ಜಿಲ್ಲಾ ಹ್ಯಾಂಡ್‌ಬಾಲ್‌ ಸಂಸ್ಥೆಯ ಕಾರ್ಯದರ್ಶಿ, ರಾಜ್ಯ ಸಂಸ್ಥೆಯ ಆಜೀವ ಸದಸ್ಯ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ಹಂಚುವ ಮೂಲಕ, ಅವರನ್ನು ತರಬೇತುಗೊಳಿಸುತ್ತಿದ್ದಾರೆ.

ಉತ್ತಮ ತರಬೇತಿಯ ಫಲವಾಗಿ, ಈ ಕಾಲೇಜಿನ 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೆಲವೇ ವರ್ಷಗಳಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ  ಬ್ಲೂಗಳಾಗಿ ಹೊರಹೊಮ್ಮಿದ್ದಾರೆ. ಹ್ಯಾಂಡ್‌ಬಾಲ್‌ನಲ್ಲಿ ನಾಲ್ಕು ಬಾರಿ ರಾಜ್ಯಮಟ್ಟದಲ್ಲಿ (ಪದವಿ ಪೂರ್ವ ಕಾಲೇಜು ಮಟ್ಟದಲ್ಲಿ) ಮತ್ತು ಮುಕ್ತ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ಸ್‌ ಆದ ಕೀರ್ತಿಯೂ ಇವರದು.

ಹಲವು ಕಡೆಗಳಲ್ಲಿ: ಪದವಿ ಪೂರ್ವ ಕಾಲೇಜುಗಳ ಮಟ್ಟದ ತಂಡವು 2 ಬಾರಿ ಮತ್ತು ಮಹಿಳೆಯರ ತಂಡವು 4 ಬಾರಿ ಚಾಂಪಿಯನ್ ಆಗಿದೆ. ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಐದು ಬಾರಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಚಾಂಪಿಯನ್ಸ್‌ ಎನಿಸಿದ್ದಾರೆ ಈ ಕಾಲೇಜಿನ ತಂಡದವರು. ಮಹಿಳೆಯರ ಕಬ್ಬಡಿಯಲ್ಲಿ 2 ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

2017–18ರಲ್ಲಿ ರಾಣೆಬೆನ್ನೂರಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಪ್ರಕಾಶ ನೇತೃತ್ವದ ಜೆ.ಇ. ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿಯರಾದ ಮೇಘಾ ಚಮಕೇರಿ, ಐಶ್ವರ್ಯಾ ಕಾಗಲೆ, ಸುಹಾನಾ ಜಂಬಗಿ, ತ್ರಿಶಲಾ ನಾಶಿ, ದೀಪಾ ಬಾಡಗಿ ಕರ್ನಾಟಕ ಹ್ಯಾಂಡ್‌ಬಾಲ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲಿ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

2015–16ರಲ್ಲಿ ಕೆ.ಎ. ಲೋಕಾಪುರ ಕಾಲೇಜಿನಲ್ಲಿ ಪುರುಷರ ಹ್ಯಾಂಡ್‌ಬಾಲ್‌ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಮತ್ತು ತರಬೇತಿ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಅದೇ ರೀತಿ 2018–19ನೇ ಸಾಲಿನ 20 ವರ್ಷ ವಯೋಮಿತಿಯವರ ತಂಡಕ್ಕೆ ಮಹಿಳಾ ತಂಡದ ಆಯ್ಕೆಗೆ ಶಿಬಿರ ನಡೆದಿದೆ. ಆಯ್ಕೆಯಾದ ತಂಡವು ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಹ್ಯಾಂಡ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದೆ. ಈ ತಂಡವನ್ನು ಪ್ರಕಾಶ ತರಬೇತುದಾರಾಗಿ ಮುನ್ನಡೆಸಲಿದ್ದಾರೆ.

‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧೀನದಲ್ಲಿ ಹಲವು ಕಾಲೇಜುಗಳು ಬರುತ್ತವೆ. ಆ ಯಾವುದೇ ಅನುದಾನಿತ ಕಾಲೇಜುಗಳೂ ಕ್ರೀಡೆಯಲ್ಲಿ ತೋರದಷ್ಟು ಸಾಧನೆಯನ್ನು ನಮ್ಮ ಕಾಲೇಜು ಮಾಡಿದೆ. ಇದಕ್ಕೆ ಉತ್ತಮ ತರಬೇತಿ ದೊರೆಯುತ್ತಿರುವುದು ಕಾರಣವಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಹಳಷ್ಟು ಶ್ರಮ ಹಾಕುತ್ತಿದ್ದಾರೆ’ ಎಂದು ಪ್ರಾಚಾರ್ಯ ಆರ್.ಎಂ. ದೇವರಡ್ಡಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !