ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಿವು–ನೋವುಣಿಸಿದ ಏಪ್ರಿಲ್‌ ಮಳೆ: ವಾಡಿಕೆಗಿಂತ ಹೆಚ್ಚಿನ ವರ್ಷಧಾರೆ

ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚಿನ ವರ್ಷಧಾರೆ
Last Updated 6 ಮೇ 2022, 23:15 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ವಾಡಿಕೆಗಿಂತ ಸರಾಸರಿ ಶೇ 155ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ನೋವು–ನಲಿವು ಎರಡನ್ನೂ ನೀಡಿದೆ. ಬೇಸಿಗೆಯ ಸಂದರ್ಭದಲ್ಲಿ ತಂಪನ್ನೆರೆಯುವ ಜೊತೆಗೆ ನಷ್ಟವನ್ನೂ ಉಂಟು ಮಾಡಿದೆ.

ಗಡಿ ಜಿಲ್ಲೆಯಲ್ಲಿ ವಾಡಿಕೆಯಂತೆ ಸರಾಸರಿ 25.5 ಮಿ.ಮೀ. ಮಳೆಯಾಗಬೇಕಿತ್ತು. ವಾಸ್ತವವಾಗಿ 64.9 ಮಿ.ಮೀ. ಮಳೆ ಸುರಿದಿದೆ. ಕೆಲವು ದಿನಗಳು ನಿತ್ಯ ಸಂಜೆ ಗುಡುಗು–ಸಿಡಿಸಲು ಸಹಿತ ವರುಣನ ಕೃಪೆಯಾಯಿತು. ಅಲ್ಲಲ್ಲಿ ಜೋರಾಗಿಯೇ ‘ಅಡ್ಡ ಮಳೆ’ಯಾಯಿತು. ಇದರಿಂದಾಗಿ ಬೇಸಿಗೆಯಲ್ಲೂ ಹಲವು ದಿನಗಳು ತಂಪಿನ ವಾತಾವರಣ ನಿರ್ಮಾಣವಾಗಿತ್ತು. ಮುಂಜಾನೆಗಳಲ್ಲಿ ಮಂಜು ಮುಸುಕಿದ ವಾತಾವರಣವೂ ಕಂಡುಬಂದಿತ್ತು;ಜನರಿಗೆ ಮುದವನ್ನೂ ನೀಡಿತ್ತು. ಅಲ್ಲಲ್ಲಿ ಆಲಿಕಲ್ಲುಸಹಿತ ಮಳೆಯಾಗಿದ್ದು ವರದಿಯಾಗಿದೆ.

ಮಳೆಯಿಂದಾಗಿ, ಮುಂಗಾರು ಹಂಗಾಮಿನಲ್ಲಿ ಕೃಷಿಗೆ ಜಮೀನು ಹದಗೊಳಿಸಲು ಮಳೆಯಿಂದ ನೆರವಾಯಿತು ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ಅಭಿಪ್ರಾಯವಾಗಿದೆ.

ಮಾರ್ಚ್‌ ನಂತರ ಚುರುಕು:

ಜನವರಿ, ಫ್ರೆಬ್ರುವರಿಯಲ್ಲಿ ಶೇ 100ರಷ್ಟು ಕೊರತೆ ಕಂಡುಬಂದಿತ್ತು. ಮಾರ್ಚ್‌ನಲ್ಲಿ ವಾಡಿಕೆಯಂತೆ 7 ಮಿ.ಮೀ. ಮಳೆಯಾಗಬೇಕಿತ್ತು. ವಾಸ್ತವವಾಗಿ 11.6 ಮಿ.ಮೀ. ಅಂದರೆ ಶೇ 66ರಷ್ಟು ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ ಚಿಕ್ಕೋಡಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 268, ಅಥಣಿ ತಾಲ್ಲೂಕಿನಲ್ಲಿ ಶೇ 260, ರಾಯಬಾಗ ತಾಲ್ಲೂಕಿನಲ್ಲಿ ಶೇ 245, ಕಾಗವಾಡ ತಾಲ್ಲೂಕಿನಲ್ಲಿ ಶೇ 221, ನಿಪ್ಪಾಣಿ ತಾಲ್ಲೂಕಿನಲ್ಲಿ ಶೇ 181, ಸವದತ್ತಿ ತಾಲ್ಲೂಕಿನಲ್ಲಿ 136, ಬೈಲಹೊಂಗಲ ತಾಲ್ಲೂಕಿನಲ್ಲಿ ಶೇ 112ರಷ್ಟು ಹೆಚ್ಚಾಗಿ ಮಳೆಯಾಗಿದೆ. ಯಾವ ತಾಲ್ಲೂಕಿನಲ್ಲೂ ಕೊರತೆ ಕಂಡುಬಂದಿಲ್ಲದಿರುವುದು ಮತ್ತು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಾಸ್ತಿ ಪ್ರಮಾಣದಲ್ಲಿಯೇ ಮಳೆಯಾಗಿರುವುದು ವಿಶೇಷವಾಗಿದೆ.

ವಿದ್ಯುತ್‌ ವ್ಯವಸ್ಥೆಗೆ ತೊಂದರೆ:

ಜೋರು ಗಾಳಿ–ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್‌ ಕಂಬಗಳು ಉರುಳಿಬಿದ್ದು ನಷ್ಟ ಸಂಭವಿಸಿದೆ. ಹೆಸ್ಕಾಂ ಬೆಳಗಾವಿ ವೃತ್ತದ ವ್ಯಾಪ್ತಿಯಲ್ಲಿರುವ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ರಾಮದುರ್ಗ ಹಾಗೂ ಘಟಪ್ರಭಾ ಭಾಗದಲ್ಲಿ 894 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. 544 ವಿದ್ಯುತ್‌ ಕಂಬಗಳನ್ನು ಬದಲಿಸಲಾಗಿದೆ. 134 ವಿದ್ಯುತ್‌ ಪರಿವರ್ತಕಗಳು (11 ಕೆ.ವಿ. ಸಾಮರ್ಥ್ಯದವು) ಹಾನಿಗೊಳಗಾಗಿದ್ದವು. ಅವುಗಳನ್ನು ದುರಸ್ತಿಪಡಿಸಲಾಗಿದೆ. 7.94 ಕಿ.ಮೀ.ನಷ್ಟು ವಿದ್ಯುತ್‌ ಮಾರ್ಗಕ್ಕೆ ತೊಂದರೆಯಾಗಿತ್ತು. ಒಟ್ಟು ₹2.95 ಕೋಟಿ ನಷ್ಟ ಸಂಭವಿಸಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಸಿಡಿಲು ಬಡಿದು ಐವರು ಸಾವಿಗೀಡಾಗಿದ್ದಾರೆ. ಅಥಣಿ ತಾಲ್ಲೂಕಿನಲ್ಲಿ ಏಪ್ರಿಲ್‌ ಮೊದಲ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಬರೋಬ್ಬರಿ 1,500 ಟನ್‌ಗೂ ಜಾಸ್ತಿ ದ್ರಾಕ್ಷಿ ಹಾಳಾಗಿದ್ದು, ಇದರಿಂದ ₹ 23ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ. ಜೋರು ಗಾಳಿ ಹಾಗೂ ಮಳೆಯು 200ಕ್ಕೂ ಹೆಚ್ಚು ಮಂದಿ ದ್ರಾಕ್ಷಿ ಬೆಳೆಗಾರರಿಗೆ ಕಹಿ ಉಣಿಸಿದೆ. ಪರಿಹಾರಕ್ಕಾಗಿ ಸರ್ಕಾರದ ಎದುರು ಮತ್ತೊಮ್ಮೆ ಕೈಚಾಚುವಂತೆ ಮಾಡಿದೆ. ಒಣ ದ್ರಾಕ್ಷಿ ಮಾಡುವುದಕ್ಕೆ ಒಣಗಲು ಹಾಕಿದ್ದ ಸಂದರ್ಭದಲ್ಲಿ ಮಳೆಯಾಗಿದ್ದರಿಂದ ದ್ರಾಕ್ಷಿ ನೀರು ಪಾಲಾಗಿದೆ.

ಕೃಷಿ ಇಲಾಖೆ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಏಪ್ರಿಲ್‌ ಮಳೆಯಿಂದ ನಾಗನೂರು ಮೊದಲಾದ ಕಡೆಗಳಲ್ಲಿ 230 ಹೆಕ್ಟೇರ್‌ಗೂ ಜಾಸ್ತಿ ಮೆಕ್ಕೆಜೋಳಕ್ಕೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಸಿದ್ಧತೆ ನಡೆದಿದೆ

ಏಪ್ರಿಲ್‌ನಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿಗೆ ಭೂಮಿ ಹದಗೊಳಿಸುವುದಕ್ಕೆ ಸಹಕಾರಿಯಾಗಿದೆ. ರೈತರು ತಯಾರಿಯಲ್ಲಿ ತೊಡಗಿದ್ದಾರೆ; ನಾವೂ ಸಿದ್ಧತೆ ನಡೆಸಿದ್ದೇವೆ.

–ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT