ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತ ಬಿಎಸ್‌ವೈ ; ಇನ್ನು ‘ಕುಮಾರ’ ಪಥ

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಮೂರು ದಿನಗಳ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ‘ವಿಶ್ವಾಸ’ಮತದ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳದೆ ಪತನಗೊಂಡಿದೆ.

ಇದರ ಬೆನ್ನಲ್ಲೆ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅಣಿಯಾಗಿದ್ದಾರೆ.

ಚುನಾವಣೆ ನಡೆದ 222 ಕ್ಷೇತ್ರಗಳಲ್ಲಿ 78ರಲ್ಲಿ ಗೆಲುವು ಕಂಡಿರುವ ಕಾಂಗ್ರೆಸ್‌ ಮತ್ತು ಬಿಎಸ್‌ಪಿಯ ಒಂದು ಸ್ಥಾನ ಸೇರಿ 37 ಕ್ಷೇತ್ರಗಳಲ್ಲಿ ಗೆದ್ದಿರುವ ಜೆಡಿಎಸ್‌, ಇಬ್ಬರು ಪಕ್ಷೇತರ ಶಾಸಕರ ‘ಮೈತ್ರಿ ಸರ್ಕಾರ’ ಅಸ್ತಿತ್ವಕ್ಕೆ ಬರಲಿದೆ.

ರಾಜ್ಯಪಾಲರ ಆಹ್ವಾನದಂತೆ ಶನಿವಾರ ರಾತ್ರಿ 7 ಗಂಟೆಗೆ ರಾಜಭವನಕ್ಕೆ ತೆರಳಿದ ಕುಮಾರಸ್ವಾಮಿ, ಕಾಂಗ್ರೆಸ್‌ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿ ಬುಧವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸು
ತ್ತೇನೆ. ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸುವ ಉದ್ದೇಶವಿದೆ’ ಎಂದರು.

‘ಹದಿನೈದು ದಿನಗಳ ಒಳಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಿದ್ದಾರೆ. ಆದರೆ, ನಮಗೆ ಅಷ್ಟು ದಿನ ಬೇಕಾಗಿಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನೂ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿ
ಸುತ್ತೇನೆ’ ಎಂದೂ ತಿಳಿಸಿದರು.

ಚುನಾವಣೆಯಲ್ಲಿ 104 ಸ್ಥಾನ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಇದೇ 16ರಂದು ಆಹ್ವಾನ ನೀಡಿದ್ದರು. ಮರುದಿನ ಪ್ರಮಾಣ ವಚನ ಸ್ವೀಕರಿಸಿ, ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿದ್ದ ಯಡಿಯೂರಪ್ಪ, ಕಾಂಗ್ರೆಸ್‌–ಜೆಡಿಎಸ್‌ ಶಾಸಕರನ್ನು ಸೆಳೆದುಕೊಂಡು ವಿಶ್ವಾಸ ಮತ ಗೆಲ್ಲಬಹುದೆಂಬ ‘ಲೆಕ್ಕಾಚಾರ’ದಲ್ಲಿದ್ದರು.

ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್‌–ಜೆಡಿಎಸ್‌ ನಾಯಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಬಹುಮತ ಸಾಬೀತುಪಡಿಸಲು ರಾಜ್ಯ‍ಪಾಲರು ನೀಡಿದ್ದ 15 ದಿನಗಳ ಕಾಲಾವಕಾಶದ ಬದಲು ಶನಿವಾರ ಸಂಜೆ 4 ಗಂಟೆಗೇ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಬೆಳಿಗ್ಗೆ ಆದೇಶ ನೀಡಿತ್ತು.

ಕೋರ್ಟ್ ಆದೇಶದಂತೆ, ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಆರಂಭಗೊಂಡಿತು. ಹಂಗಾಮಿ ಸ್ಪೀಕರ್‌ ಕೆ.ಜಿ. ಬೋಪಯ್ಯ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ಸಂಜೆ 4 ಗಂಟೆಗೆ ‘ವಿಶ್ವಾಸ ಮತ’ ಸಾಬೀತುಪಡಿಸಲು ಕೋರ್ಟ್‌ ಸೂಚನೆ ನೀಡಿತ್ತಾದರೂ 3.40ಕ್ಕೆ ಈ ಪ್ರಸ್ತಾವ ಮಂಡಿಸಿದ ಯಡಿಯೂರಪ್ಪ, ಅದುಮಿಟ್ಟ ಆಕ್ರೋಶ, ತೋರಿಸಿಕೊಳ್ಳಲಾಗದ ದುಗುಡ, ಒತ್ತರಿಸಿ ಬರುತ್ತಿದ್ದ ಭಾವೋದ್ವೇಗದ ಮಧ್ಯೆ 22 ನಿಮಿಷ ವಿದಾಯ ಮಾತುಗಳನ್ನಾಡಿದರು.

‘ಪ್ರಸ್ತಾವ ವಾಪಸು ಪಡೆಯುತ್ತಿದ್ದೇನೆ’ ಎಂದು ಘೋಷಿಸಿ, ರಾಜ್ಯಪಾಲರಿಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಅಷ್ಟೇ ಅಲ್ಲ, ರಾಷ್ಟ್ರಗೀತೆ ಮೊಳಗುವ ಮುನ್ನವೇ ಸದನದಿಂದ ಹೊರಟರು. ಮೂರನೇ ಬಾರಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದ ಅವರ ಅಧಿಕಾರಾವಧಿ ಕೇವಲ 55 ಗಂಟೆಯಲ್ಲಿ ಕೊನೆಗೊಂಡಿತು.

ಆತಂಕದಲ್ಲೇ ನಡೆದ ಸದನ: ಶಾಸಕರ ಖರೀದಿಗೆ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಬಹುದೆಂಬ ಭೀತಿಯಿಂದ ಗುರುವಾರ ರಾತ್ರಿ ಶಾಸಕರನ್ನು ಹೈದರಾಬಾದ್‌ಗೆ ಕರೆದೊಯ್ದಿದ್ದ ಕಾಂಗ್ರೆಸ್‌– ಜೆಡಿಎಸ್‌ ಮುಖಂಡರು, ಶನಿವಾರ ಬೆಳಿಗ್ಗೆ ವಾಪಸು ಕರೆದುಕೊಂಡು ಬಂದಿದ್ದರು. ಶಾಸಕ ಕೆ.ಜೆ. ಜಾರ್ಜ್‌ ಮಾಲೀಕತ್ವದ ಹೋಟೆಲ್‌ ಹಿಲ್ಟನ್‌ಗೆ ಕರೆದೊಯ್ದು, ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದರು. ಬಿಜೆಪಿ ಕೂಡಾ ತನ್ನ ಶಾಸಕ
ರನ್ನು ಶಾಂಗ್ರಿಲಾ ಹೋಟೆಲ್‌ನಿಂದ ಕರೆದುಕೊಂಡು ಬಂದಿತ್ತು.

ಅಧಿವೇಶನ ಆರಂಭಗೊಂಡು ಮುಕ್ತಾಯಗೊಳ್ಳುವವರೆಗೂ ಕ್ಷಣಕ್ಷಣಕ್ಕೂ ಕುತೂಹಲಕಾರಿಯಾಗಿತ್ತು. ಕಾಂಗ್ರೆಸ್‌ ಶಾಸಕರ ಮೇಲೆ ಡಿ.ಕೆ. ಶಿವಕುಮಾರ್‌ ನಿಗಾ ಇಟ್ಟಿದ್ದರು. ಅತ್ತ, ಬಿಜೆಪಿಗೆ ಅಗತ್ಯ ಸಂಖ್ಯಾ ಬಲ ಹೊಂದಿಸುವ ಹೊಣೆ ಹೊತ್ತಿದ್ದ ಶ್ರೀರಾಮಲು ಕಣ್ಣು, ಕಾಂಗ್ರೆಸ್‌– ಜೆಡಿಎಸ್‌ ಶಾಸಕರ ಮೇಲಿತ್ತು. ಪ್ರಮಾಣ ವಚನಕ್ಕೆ ಹೆಸರು ಕರೆಯುವ ವೇಳೆ ವಿಜಯನಗರ (ಬಳ್ಳಾರಿ) ಶಾಸಕ ಆನಂದ್‌ ಸಿಂಗ್‌ ಮತ್ತು ಮಸ್ಕಿ ಶಾಸಕ ಪ್ರತಾಪ್‌ ಗೌಡ ಪಾಟೀಲ ಗೈರಾಗಿರುವುದು ಕಾಂಗ್ರೆಸ್‌ ಪಾಳಯದಲ್ಲಿ ಗುಸುಗುಸು ಚರ್ಚೆಗೂ ಕಾರಣವಾಗಿತ್ತು. ಈ ಇಬ್ಬರೂ ಬಿಜೆಪಿ ತೆಕ್ಕೆಯಲ್ಲಿದ್ದಾರೆಂಬ ಸುದ್ದಿ
ಹರಿದಾಡುತ್ತಿತ್ತು.

ಕೆಲವೇ ಶಾಸಕರಿಗೆ ಪ್ರಮಾಣ ವಚನ ಬೋಧಿಸಲು ಬಾಕಿ ಇರುವಾಗ (ಮಧ್ಯಾಹದ್ನ 1.20ಕ್ಕೆ) ಕಲಾಪವನ್ನು ಸ್ಪೀಕರ್‌ ಸಂಜೆ 3.30ಕ್ಕೆ ಮುಂದೂಡಿದರು.

ಮತ್ತೆ ಕಲಾಪ ಆರಂಭಗೊಳ್ಳುತ್ತಿದ್ದಂತೆ, ಶಿವಕುಮಾರ್‌ ಜೊತೆ ಸದನದೊಳಗೆ ಬಂದ ಆನಂದ್‌ ಸಿಂಗ್‌ ಮತ್ತು ಪ್ರತಾಪ್‌ ಗೌಡ ಪಾಟೀಲ, ಕೊನೆಯವರಾಗಿ ಪ್ರಮಾಣ ಸ್ವೀಕರಿಸಿದರು. ವಿಶ್ವಾಸ ಮತ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ ಈ ಇಬ್ಬರೂ ಕಾಂಗ್ರೆಸ್‌ಗೆ ಕೈ ಕೊಡಬಹುದೇ, ಅಲ್ಲದೆ, ಬಿಜೆಪಿ ಪರ ಅಡ್ಡಮತದಾನ ಮಾಡಬಹುದೇ ಎಂಬ ಅನುಮಾನ ಮೂಡಿತ್ತು. ಆದರೆ, ಮಾತು ಆರಂಭಿಸಿದ ಯಡಿಯೂರಪ್ಪ ಅವರ ಮುಖಚರ್ಯೆ, ‘ಸೋತಿದ್ದೇನೆ, ವಿಶ್ವಾಸ ಹುಸಿಯಾಯಿತು’ ಎಂಬ ಒಡಲಾಳದ ಭಾವವನ್ನು ಹೊರಹೊಮ್ಮಿಸುವಂತಿತ್ತು.

ಸಮ್ಮಿಶ್ರ ಸರ್ಕಾರ’ಕ್ಕೆ ಸಮನ್ವಯ ಸಮಿತಿ

ಕಾಂಗ್ರೆಸ್‌– ಜೆಡಿಎಸ್‌ ’ಸಮ್ಮಿಶ್ರ ಸರ್ಕಾರ’ದ ರೂಪರೇಷೆಯ ಬಗ್ಗೆ ಎರಡೂ ಪಕ್ಷಗಳ ಹಿರಿಯ ನಾಯಕರ ಮಧ್ಯೆ ಚರ್ಚೆ ಆರಂಭಗೊಂಡಿದೆ. ಸರ್ಕಾರದ ಸುಗಮ ನಡೆಗೆ ಮತ್ತು ಕನಿಷ್ಠ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ‘ಸಮನ್ವಯ ಸಮಿತಿ’ ರಚಿಸಲು ತೀರ್ಮಾನವಾಗಿದೆ.

ಮುಖ್ಯಮಂತ್ರಿ ಪಟ್ಟದ ಜೊತೆಗೆ 14 ಸಚಿವ ಸ್ಥಾನಗಳಿಗೆ ಜೆಡಿಎಸ್‌, ಒಂದು ಉಪ ಮುಖ್ಯಮಂತ್ರಿ ಸ್ಥಾನ ಸೇರಿ 20 ಸಚಿವ ಸ್ಥಾನ ಕಾಂಗ್ರೆಸ್‌ ಹಂಚಿ
ಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ. ಈ ಮಧ್ಯೆ, ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತೆ ಕಾಂಗ್ರೆಸ್‌ ಒತ್ತಡ ‌ಹೇರುತ್ತಿದೆ ಎಂದೂ ಹೇಳಲಾಗಿದೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಚುನಾವಣೆ ಸಂದರ್ಭದಲ್ಲಿ ಹೊರಡಿಸಿದ್ದ ‘ಪ್ರಣಾಳಿಕೆ’ಯಲ್ಲಿರುವ ಅಂಶಗಳನ್ನು ಒಗ್ಗೂಡಿಸಿ ಎರಡೂ ಪಕ್ಷಗಳಿಗೆ ಒಪ್ಪಿಗೆಯಾಗುವ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ಗಳನ್ನು ಅನುಷ್ಠಾನಗೊಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಅದಕ್ಕಾಗಿ ಪ್ರಭಾವಿ ಸಚಿವ ಸ್ಥಾನಗಳ ಹಂಚಿಕೆ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮುಂದಾಗಿದ್ದಾರೆ.

ಆದರೆ, ಎರಡೂವರೆ ವರ್ಷ ಅಧಿಕಾರ ಹಂಚಿಕೆಯಾಗಬೇಕು ಎಂಬ ಬೇಡಿಕೆ ಮಂಡಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ದೇವೇಗೌಡ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದೂ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT