ಶುಕ್ರವಾರ, ಆಗಸ್ಟ್ 19, 2022
25 °C

ಬೆಳೆ ವಿಮೆ ಪಾವತಿ ಕಡ್ಡಾಯಗೊಳಿಸಿ: ಅಧಿಕಾರಿಗಳಿಗೆ ಸಚಿವ ಬಿ.ಸಿ. ಪಾಟೀಲ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ರೈತರು ಶೇ 2ರಷ್ಟು ಮಾತ್ರ ವಿಮೆ ಹಣ ಪಾವತಿಸಬೇಕು. ‌ಉಳಿದ ಶೇ 98ರಷ್ಟನ್ನು ಸರ್ಕಾರವೇ ಭರಿಸುತ್ತದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕೃಷಿಕರೆಲ್ಲರೂ ಕಡ್ಡಾಯವಾಗಿ ಬೆಳೆ ವಿಮೆ ಕಟ್ಟುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಣ್ಣಿನ ಗುಣಮಟ್ಟ ಅರಿತರೆ ಕೃಷಿ ಸಮಸ್ಯೆಗಳನ್ನು ಪರಿಹರಿಸಬಹುದು. ಆದ್ದರಿಂದ ಮಣ್ಣು ಪರೀಕ್ಷೆಗೆ ಆದ್ಯತೆ ನೀಡಬೇಕು. ರೈತರ ಆದಾಯ ದ್ವಿಗುಣಗೊಳಿಸಲು ಬಹು ಬೆಳೆ ಪದ್ಧತಿಗೆ ಪ್ರೋತ್ಸಾಹಿಸಬೇಕು‌. ವೈಜ್ಞಾನಿಕ ಮನೋಭಾವ ಬೆಳೆಸಬೇಕು’ ಎಂದು ತಿಳಿಸಿದರು.

ಮುಂದಿನ ವರ್ಷದಿಂದ ನೇಮಕ: ‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಮುಂದಿನ ವರ್ಷದಿಂದ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದರು.

‘ವಾರದೊಳಗೆ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ರೈತರೇ ಸ್ವಯಂ ನಡೆಸುವ ಬೆಳೆ ಸಮೀಕ್ಷೆ ಕಾರ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಅತ್ಯುತ್ತಮ ಸ್ಪಂದನೆ ದೊರೆತಿದೆ. ರಾಜ್ಯದಾದ್ಯಂತ 78 ಲಕ್ಷ ರೈತರು ಈಗಾಗಲೇ ಸ್ವತಃ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಕೆಲವೆಡೆ ನೆಟ್‌ವರ್ಕ್‌ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಉಳಿದ ಬೆಳೆಗಳ ಸಮೀಕ್ಷೆಯನ್ನು ಪಿಆರ್ (ಖಾಸಗಿ ನಿವಾಸಿ)ಗಳ ಮೂಲಕ ನಡೆಸಲಾಗುವುದು’ ಎಂದು ತಿಳಿಸಿದರು.

‘ರಾಜ್ಯದ ಈ ಕ್ರಮವನ್ನು ದೇಶದಾದ್ಯಂತ ವಿಸ್ತರಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವರು ಭರವಸೆ ನೀಡಿದ್ದಾರೆ’ ಎಂದರು.

ವ್ಯತ್ಯಾಸ ಸರಿಪಡಿಸಿ: ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ‘ಧಾರವಾಡ ಹಾಗೂ  ಬೆಳಗಾವಿ ಜಿಲ್ಲೆಯ ನಡುವೆ ಬೆಳೆ ವಿಮೆ ವ್ಯತ್ಯಾಸ ಸರಿಪಡಿಸಬೇಕು’ ಎಂದು ಕೋರಿದರು.

‘ಹವಾಮಾನ ಆಧಾರಿತವಾಗಿ ಪರಿಹಾರ ಮೊತ್ತ ನಿಗದಿಪಡಿಸಿ ವ್ಯತ್ಯಾಸ ಸರಿಪಡಿಸಬಹುದು. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.

ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ‘ಕಿತ್ತೂರು ತಾಲ್ಲೂಕಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆ ಹಾಗೂ ಅಗತ್ಯ ಅನುದಾನವನ್ನು ತಕ್ಷಣವೇ ಮಂಜೂರು ಮಾಡಬೇಕು’ ಎಂದು ಕೋರಿದರು.

ಭಾಷಾ ಸಮಸ್ಯೆ ಪರಿಹರಿಸಿ: ವಿಧಾನ ಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಬೆಳೆ ಸಮೀಕ್ಷೆಗೆ ಭಾಷೆ ಸಮಸ್ಯೆಯು ತೊಂದರೆಯಾಗಬಾರದು. ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಭಾಷಾ ಸಮಸ್ಯೆ ಬಗೆಹರಿಸಿ ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಬೇಕು. ಸರ್ಕಾರದ ಕಣ್ಣಿಗೆ ಮಣ್ಣೆರೆಚಿ ರೈತರನ್ನು ವಂಚಿಸುವ ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಶಾಸಕ ಅನಿಲ್ ಬೆನಕೆ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್ ಮಾತನಾಡಿದರು.

ಕೃಷಿ ವಿಶ್ವವಿದ್ಯಾಲಯ ಕುಲಪತಿ ಎಂ.ಬಿ. ಚಿಟ್ಟಿ, ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ದಿವಾಕರ ಇದ್ದರು.

ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು