ಸೋಮವಾರ, ಅಕ್ಟೋಬರ್ 21, 2019
24 °C

‘ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಟ ಅಗತ್ಯ’

Published:
Updated:
Prajavani

ಗೋಕಾಕ: ‘ಸಂಘಟನೆ ಮೂಲಕ ರಾಜಕೀಯ ಶಕ್ತಿ ಪಡೆದಾಗ ಮಾತ್ರ ಮಾದಿಗ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದು ಮುಖಂಡ ಅಲ್ಕೋಡ್‌ ಹನುಮಂತಪ್ಪ ಹೇಳಿದರು.

ಇಲ್ಲಿ ಭಾನುವಾರ ನಡೆದ ತಾಲ್ಲೂಕಿನ ಮಾದಿಗ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಡಾ.ಬಿ.ಆರ್. ಅಂಬೇಡ್ಕರ್‌ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ, ಮಾದಿಗ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಮೀಸಲಾತಿ ತಲುಪದೇ ಇರುವುದರಿಂದ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟಿತ ಹೋರಾಟ ನಡೆಸದೇ ರಾಜಕೀಯ ಶಕ್ತಿ ಪಡೆಯುವುದು ಸಾಧ್ಯವೇ?’ ಎಂದು ಕೇಳಿದರು.

‘ಈ ಹಿಂದೆ ರಾಜ್ಯದಲ್ಲಿ ಸಮಾಜದ 26 ಮಂದಿ ಶಾಸಕರಿದ್ದ ಇತಿಹಾಸವಿದೆ. ನಮ್ಮಲ್ಲಿನ ಒಗ್ಗಟ್ಟಿನ ಕೊರೆತೆಯಿಂದಾಗಿ ಆ ಸಂಖ್ಯೆ 6ಕ್ಕೆ ಇಳಿದಿದೆ. ನಾವು ದನಿ ಎತ್ತಿದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ. ತಾಲ್ಲೂಕಿನಲ್ಲಿ 20ಸಾವಿರ ಮಾದಿಗ ಸಮಾಜದ ಮತದಾರರಿದ್ದೇವೆ. ರಾಜಕೀಯ ನಿರ್ಣಾಯಕ ಶಕ್ತಿ ನಮಗಿದೆ. ಸಮಾಜದ ಅಭಿವೃದ್ಧಿಗಾಗಿ ಬರುವ ದಿನಗಳಲ್ಲಿ  ಬೃಹತ್ ಸಮಾವೇಶ ಆಯೋಜಿಸಿ ನಮ್ಮ ಶಕ್ತಿ ಪ್ರದರ್ಶಿಸಬೇಕು. ಸಮಾಜದ ಏಳಿಗೆಗೆ ಶ್ರಮಿಸುವವರಿಗೆ ಮತ ಹಾಕಬೇಕು’ ಎಂದು ಸಲಹೆ ನೀಡಿದರು.

‘ಕೇಂದ್ರ ಸರ್ಕಾರ ಮೀಸಲಾತಿ ವ್ಯವಸ್ಥೆಯನ್ನೇ ಕಿತ್ತಿಹಾಕಲು ಮುಂದಾಗುತ್ತಿರುವುದು ನಿಜಕ್ಕೂ ಖಂಡನೀಯ. ರೈಲ್ವೆ ಇಲಾಖೆ, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗುತ್ತಿದೆ. ಇದು ಜನಸಾಮಾನ್ಯರಿಗೆ ಗಂಡಾಂತರ ತರಲಿದೆ. ಹಿಂದುಳಿದ ವರ್ಗಗಳ ಮುನ್ನಡೆಗೆ ಅಡ್ಡಿ ಉಂಟು ಮಾಡಲಿದೆ. ಹೀಗಾಗಿ, ಜಾಗೃತರಾಗಿ ಹೋರಾಡಬೇಕು’ ಎಂದು ತಿಳಿಸಿದರು.

ಮುಖಂಡರಾದ ಸತ್ತೆಪ್ಪ ಕರೇವಾಡಿ, ರಮೇಶ ಸಣ್ಣಕ್ಕಿ, ರಾಜೇಂದ್ರ ಐಹೊಳೆ, ಬಸವರಾಜ ಕಾಡಪ್ಪನವರ, ಪ್ರಶಾಂತ ಐಹೊಳೆ ಇದ್ದರು.

Post Comments (+)