ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಯೋಜನೆ: ‘ಡಬಲ್‌ ಎಂಜಿನ್‌’ ಸರ್ಕಾರದಲ್ಲೂ ಸಿಗದ ನೀರು

Last Updated 13 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಮಹದಾಯಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿಯ ‘ಡಬಲ್‌ ಎಂಜಿನ್‌’ ಸರ್ಕಾರಗಳು ಕ್ರಮ ವಹಿಸಿಲ್ಲ.

ಪರಿಣಾಮ, ಮಹತ್ವದ ಯೋಜನೆಯೊಂದು ನನೆಗುದಿಗೆ ಬಿದ್ದಿದೆ. ತಾಂತ್ರಿಕ ಕಾರಣಗಳ ನೆಪವನ್ನೊಡ್ಡಿ ಸಮಯ ಕಳೆಯಲಾಗುತ್ತಿದೆಯೇ ಹೊರತು, ನಮ್ಮ ಪಾಲಿನ ನೀರು ಪಡೆಯುವ ನಿಟ್ಟಿನಲ್ಲೂ ಕಾಳಜಿ ವಹಿಸಲಾಗಿಲ್ಲ.

‘ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ₹ 1,677 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2021–22ರ ಬಜೆಟ್‌ನಲ್ಲಿ ಹೇಳಿದ್ದರು. 2020–21ನೇ ಬಜೆಟ್‌ನಲ್ಲೂ ಈ ಬಗ್ಗೆ ಘೋಷಿಸಲಾಗಿತ್ತು. ಆಗ ₹ 500 ಕೋಟಿ ಮೀಸಲಿಡಲಾಗಿತ್ತು. ಆ ಹಣ ಕೂಡ ಬಳಕೆಯೇ ಆಗಿಲ್ಲ. ಕಾಮಗಾರಿ ಆರಂಭಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವ ಪ್ರಕ್ರಿಯೆಯನ್ನೇ ರಾಜ್ಯ ನಡೆಸಿಲ್ಲ.

ಹೋರಾಟಕ್ಕೆ ಸಜ್ಜು:ಕಳೆದ ಬಜೆಟ್‌ನಲ್ಲಿ ಅನುದಾನದ ಪ್ರಮಾಣ ಹೆಚ್ಚಿಸಿದ್ದು ಬಿಟ್ಟರೆ, ಕಾಮಗಾರಿಗೆ ಚಾಲನೆ ನೀಡಬೇಕು ಎಂಬ ಜನರ ಆಶೋತ್ತರ ಈಡೇರಿಲ್ಲ. ಇದು ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದು ಸುತ್ತಿನ ಚಳವಳಿಗೆ ಅವರು ಸಜ್ಜಾಗುತ್ತಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದಲೂ ಹೋರಾಟಕ್ಕೆ ಯೋಜಿಸಲಾಗುತ್ತಿದೆ.

ವಿಶೇಷವೆಂದರೆ, ಜಲಸಂಪನ್ಮೂಲ ಖಾತೆ ಹೊಂದಿರುವ ಗೋವಿಂದ ಕಾರಜೋಳ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅದಕ್ಕಿಂತಲೂ ಹಿಂದೆ ಈ ಖಾತೆ ಹೊಂದಿದ್ದವರು ಇದೇ ಜಿಲ್ಲೆಯ ಗೋಕಾಕ ಮತಕ್ಷೇತ್ರ ಪ್ರತಿನಿಧಿಸುವ ರಮೇಶ ಜಾರಕಿಹೊಳಿ.

ಪೂರಕ ವಾತಾವರಣವಿದ್ದರೂ:ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಹದಾಯಿ–ಕಳಸಾ–ಬಂಡೂರಿ ನದಿ ತಿರುವ ಯೋಜನೆಯ ಹೋರಾಟ ಸಮಿತಿಯ ರಾಜ್ಯ ಸಂಚಾಲಕರೂ ಆಗಿದ್ದರು. ಜಲಸಂಪನ್ಮೂಲ ಸಚಿವರೂ ಆಗಿದ್ದರಿಂದ ಯೋಜನೆಯ ಮಹತ್ವದ ಬಗ್ಗೆ ಅವರಿಗೆ ಅರಿವಿದೆ. ಮಹದಾಯಿ ನ್ಯಾಯಮಂಡಳಿಯ ಐತೀರ್ಪಿನಂತೆ ನಮ್ಮ ಪಾಲಿನ (13.42 ಟಿಎಂಸಿ ಅಡಿ) ನೀರನ್ನು ನಾವು ಪಡೆದುಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಅನುಷ್ಠಾನದ ವಿಷಯದಲ್ಲಿ ಮುಖ್ಯಮಂತ್ರಿ ಬದ್ಧತೆ ತೋರುತ್ತಾರೆಯೇ ಎನ್ನುವ ಕುತೂಹಲ ಜನರಲ್ಲಿದೆ. ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಆದರೆ, ಯೋಜನೆ ಅನುಷ್ಠಾನಕ್ಕೆ ಪೂರಕ ವಾತಾವರಣವಿದ್ದರೂ ಕಾಮಗಾರಿಗೆ ಮುಹೂರ್ತ ಕೂಡಿ ಬಂದಿಲ್ಲದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಗೆಜೆಟ್‌ನಲ್ಲಿ ಪ್ರಕಟ:ಕೇಂದ್ರ ಸರ್ಕಾರವು ನ್ಯಾಯಮಂಡಳಿ ತೀರ್ಪನ್ನು 2020ರ ಫೆ.27ರಂದು ಗೆಜೆಟ್‌ನಲ್ಲಿ ಪ್ರಕಟಿಸಿದೆ. ಕಳಸಾ–ಬಂಡೂರಿ ನಾಲೆಗಳ ತಿರುವು ಯೋಜನೆಯ ಕಾಮಗಾರಿ ವಿಳಂಬಕ್ಕೆ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇ ಕಾರಣ. ಪ್ರಕರಣ ಇತ್ಯರ್ಥವಾಗದ್ದರಿದ ವಿಳಂಬವಾಗಿದೆ ಎನ್ನುವುದು ಬಿಜೆಪಿ ನಾಯಕರ ಸಮರ್ಥನೆಯಾಗಿದೆ.

ಕಾರಣಗಳೇನೇ ಇದ್ದರೂ ಯೋಜನೆ ಅನುಷ್ಠಾನ ಯಾವಾಗ ಎನ್ನುವುದು ಜನರ ಪ್ರಶ್ನೆಯಾಗಿದೆ.

ನೀರು ಬಳಕೆಗೆ ಕ್ರಮ: ಕಾರಜೋಳ

‘ಮಹದಾಯಿ ನದಿಯಲ್ಲಿನ ನಮ್ಮ ಪಾಲಿನ ನೀರು ಉಪಯೋಗಿಸಿಕೊಳ್ಳಲು ಬದ್ಧವಿದ್ದೇವೆ. ಇದಕ್ಕಾಗಿ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ನ್ಯಾಯಾಲಯದಲ್ಲಿರುವ ವ್ಯಾಜ್ಯ ಇತ್ಯರ್ಥವಾದ ಮರು ದಿನವೇ ಕೆಲಸ ಆರಂಭಿಸುತ್ತೇವೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭರವಸೆ ನೀಡುತ್ತಾರೆ.

‘ಮಹದಾಯಿ ವಿಚಾರ ನ್ಯಾಯಾಲಯದಲ್ಲಿದೆ. 13.4 ಟಿಎಂಸಿ ಅಡಿ ನೀರು ನಮಗೆ ಹಂಚಿಕೆಯಾಗಿದೆ. ಇದರಲ್ಲಿ 5 ಟಿಎಂಸಿ ನೀರು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಲಾಗುವುದು. 8 ಟಿಎಂಸಿಯನ್ನು ವಿದ್ಯುತ್ ಉತ್ಪಾದನೆಗೆ ನದಿಗೆ ಬಿಡಲಾಗುತ್ತದೆ. 2015ರಲ್ಲಿ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಅದನ್ನೇ ಅಂತಿಮಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ’ ಎಂದೂ ಹೇಳುತ್ತಾರೆ ಅವರು.

ಪ್ರಯೋಜನವೇನು?

‘ಕಳಸಾ–ಬಂಡೂರಿ ತಿರುವಿನಿಂದ ರಾಜ್ಯಕ್ಕೆ 32.5 ಟಿಎಂಸಿ ಅಡಿ ನೀರಿಗಾಗಿ ರಾಜ್ಯ ಸರ್ಕಾರ ವಾದಿಸಿತ್ತು. ನ್ಯಾಯ ಮಂಡಳಿಯು ಕಳಸಾದಿಂದ 1.72 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ, ಮಹದಾಯಿ ಕಣಿವೆ ಪ್ರದೇಶದ ಜನರಿಗೆ ಕುಡಿಯುವ ಉದ್ದೇಶಕ್ಕಾಗಿ 1.50 ಟಿಎಂಸಿ ಅಡಿ ಹಾಗೂ ಜಲ ವಿದ್ಯುತ್‌ಗೆ 8.02 ಟಿಎಂಸಿ ಅಡಿ ಬಳಸಿಕೊಳ್ಳಬಹುದಾಗಿದೆ. ಯೋಜನೆ ಅನುಷ್ಠಾನದಿಂದ ಬೆಳಗಾವಿ, ಗದಗ, ಧಾರವಾಡ, ಬಾಗಲಕೋಟೆ ಜಿಲ್ಲೆಗಳ ನೂರಾರು ಹಳ್ಳಿಗಳ ಜನರ ಕುಡಿಯುವ ನೀರಿನ ಬವಣೆ ನೀಗಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರ ಮಾಹಿತಿ ನೀಡಿದರು.

ಹೋರಾಟಕ್ಕೆ ಚರ್ಚೆ

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಕ್ಷದಿಂದ ಮೇಕೆದಾಟು ಪಾದಯಾತ್ರೆ ಮಾದರಿಯಲ್ಲಿಯೇ ಹೋರಾಟ ಹಮ್ಮಿಕೊಳ್ಳುವುದಕ್ಕಾಗಿ ಚರ್ಚಿಸಲಾಗುತ್ತಿದೆ.

– ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ಜಾರಿಗೊಳಿಸಿದರೆ ಅಭಿನಂದನೆ, ಇಲ್ಲದಿದ್ದರೆ ಹೋರಾಟ

ಯೋಜನೆ ಅನುಷ್ಠಾನ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿದರೆ ಅಭಿನಂದನೆ; ನಿರ್ಲಕ್ಷ್ಯ ವಹಿಸಿದರೆ ಹೋರಾಟ ಖಚಿತ.

–ವಿಜಯ ಕುಲಕರ್ಣಿ, ಕಳಸಾ ಬಂಡೂರಿ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT