ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಲಿಂಗಪುರ | ಭಾವೈಕ್ಯದ ನಾಡಲ್ಲಿ ಮಹಾಲಿಂಗೇಶ್ವರ ಜಾತ್ರೆ ಸಂಭ್ರಮ

ಅಂದು ‘ನರಗಟ್ಟಿ’ ಇಂದು`ಮಹಾಲಿಂಗಪುರ’
ಮಹೇಶ ಮನ್ನಯ್ಯನವರಮಠ
Published : 18 ಸೆಪ್ಟೆಂಬರ್ 2024, 5:17 IST
Last Updated : 18 ಸೆಪ್ಟೆಂಬರ್ 2024, 5:17 IST
ಫಾಲೋ ಮಾಡಿ
Comments

ಮಹಾಲಿಂಗಪುರ: ಹಿಂದು, ಮುಸ್ಲಿಂ ಭಾವೈಕ್ಯತೆಯ ತಾಣ ಮಹಾಲಿಂಗಪುರ ಪಟ್ಟಣದಲ್ಲಿ ಈಗ ಮಹಾಲಿಂಗೇಶ್ವರ ಜಾತ್ರೆಯ ಸಂಭ್ರಮ. ಮೊದಲು ‘ನರಗಟ್ಟಿ’ ಎಂಬ ಹೆಸರು ಪಡೆದಿದ್ದ ಗ್ರಾಮ ಅನಂತರ ಪವಾಡ ಪುರುಷ ಮಹಾಲಿಂಗೇಶ್ವರರ ಪಾದಸ್ಪರ್ಶದಿಂದ ‘ಮಹಾಲಿಂಗಪುರ’ ಎಂದು ಅಭಿದಾನ ಪಡೆಯಿತು.

ಹಿನ್ನೆಲೆ: ಶಿವನ ಅಣತಿಯಂತೆ ಧರೆಗೆ ಇಳಿದ ಮಹಾಲಿಂಗೇಶ್ವರರು ಅನೇಕ ಪುಣ್ಯಕ್ಷೇತ್ರಗಳನ್ನು ಸಂಚರಿಸುತ್ತ ಢಪಳಾಪುರಕ್ಕೆ ಕಾಲಿಟ್ಟು ಶಿವಯೋಗಿ ಗುರುಲಿಂಗ ಜಗದಾರ್ಯರನ್ನು ಭೇಟಿಯಾಗಿ ಅವರ ಶಿಷ್ಯರಾದರು.

ಬೀಳ್ಕೊಡುವಾಗ ಶಿಷ್ಯನನ್ನು ಕರೆದ ಗುರುಲಿಂಗರು, ‘ನೀನು ಸಂಚಾರಗೈಯುತ್ತ ಹೋಗುವಾಗ ಚೈತ್ರ ಶುದ್ಧ ಚತುರ್ದಶಿ ದಿನ ಎಲ್ಲಿ ನಿಲ್ಲುವೆಯೋ ಅಲ್ಲಿಯೇ ಓರ್ವ ಶಿವಭಕ್ತೆ ನಿನ್ನನ್ನು ಭಯಭಕ್ತಿಯಿಂದ ಬರಮಾಡಿಕೊಳ್ಳುವಳು. ಅದೇ ನಿನ್ನ ಕರ್ಮಭೂಮಿಯೆಂದೇ ತಿಳಿ. ಆ ಊರು ಯಾವುದೇ ಇರಲಿ. ಅದೇ ಮುಂದೆ ನಿನ್ನ ಪ್ರಭಾವದಿಂದ ನಿನ್ನ ಹೆಸರಿನಿಂದಲೇ ನಾಮಾಂಕಿತವಾಗುತ್ತದೆ' ಎಂದು ಆಶೀರ್ವದಿಸಿದರು.

ಗುರುಗಳ ಅಣತಿಯಂತೆ ಮಹಾಲಿಂಗೇಶ್ವರರು ನರಗಟ್ಟಿ ಗ್ರಾಮಕ್ಕೆ ಆಗಮಿಸಿದಾಗ ಶಿವಭಕ್ತೆ ಸಿದ್ದಾಯಿ ತಾಯಿ ಬರಮಾಡಿಕೊಳ್ಳುತ್ತಾಳೆ. ನಂತರ ಅಲ್ಲಿಯೇ ನೆಲೆ ನಿಂತು ಅನೇಕ ಪವಾಡಗಳನ್ನು ಮಹಾಲಿಂಗೇಶ್ವರರು ಮಾಡುತ್ತಾರೆ. ಮುಂದೆ ಅವರ ಹೆಸರಿನಿಂದಲೇ ಊರು ನಾಮಾಂಕಿತವಾಗುತ್ತದೆ.

ಶಿವಭಕ್ತೆ ಸಿದ್ದಾಯಿ ತಾಯಿಗೆ ಮಹಾಲಿಂಗೇಶ್ವರರು ತಮ್ಮ ಅಸ್ತಿತ್ವದ ಕುರುಹಾಗಿ ನೀಡಿದ ಜಡೆಯ ಮುಂಗುರುಳುಗಳು ಪ್ರತಿ ವರ್ಷ ಒಂದು ಸಾಸಿವೆಯಷ್ಟು ಬೆಳೆಯುತ್ತಿದ್ದು, ಇಂದು ಏಳು ಸಿಂಬೆಯಾಕಾರದಷ್ಟು ಬೆಳೆದಿದೆ. ಭಕ್ತರು ಇಂದಿಗೂ ಈ ಜಡೆಯಲ್ಲಿಯೇ ಮಹಾಲಿಂಗೇಶ್ವರರನ್ನು ಕಾಣುತ್ತಾರೆ. ಮಹಾಲಿಂಗೇಶ್ವರರು ತಪಗೈದ ಚನ್ನಗಿರಿಯಲ್ಲಿ ರಾಮಲಿಂಗ ಎಂಬ ಪವಿತ್ರ ಲಿಂಗದ ಗೌರವಾರ್ಥ ಚನ್ನಗಿರೇಶ್ವರ ದೇವಾಲಯ ನಿರ್ಮಾಣವಾಗಿದೆ.

ಮಹಾಲಿಂಗೇಶ್ವರರ ಪವಾಡಗಳು...

1. ನರವಾಲದ ನಾಗಾಖ್ಯ ಮುಪ್ಪಿನಾಂಬೆಯವರು ಕೈಕೊಂಡ ವೀರಮಾಹೇಶ್ವರ ವೃತವನ್ನು ಪೂರೈಸಿದುದು.

2. ರುದ್ರಮ್ಮನೆಂಬ ಶರಣೆಗೆ ನೇತ್ರವನ್ನಿತ್ತುದು.

3. ಮುನಿನಾಥನ ಕೀರ್ತಿಯನ್ನು ಕೇಳಿ ಮೋದಪುರದ ಮಾಲೋಜಿ ರಾಜನು ನರಗಟ್ಟಿಗೆ ವೈಭವದಿಂದ ಬರುತ್ತಿರಲು ಮಹಾಲಿಂಗನೆಂಬ ಬಾಲಕನು ಆ ಅರಸರ ಆನೆಯ ಸೊಂಡಿಗೆ ಸಿಲುಕಿ ಸಾಯಲು ಆ ಮಗುವನ್ನು ಪ್ರಾಣವನ್ನಿತ್ತುದು.

4. ಮಾಲೋಜಿಯು ದಾನವಾಗಿದ್ದ ನರಗಟ್ಟಿಯನ್ನು ನಿಷ್ಕಾಮ ಭಾವನೆಯಿಂದ ಸ್ವೀಕರಿಸಿ ಅದನ್ನು ವರಗಟ್ಟಿಯನ್ನಾಗಿ ಮಾಡಿದ್ದು

5. ಮಹಾಲಿಂಗಪುರ (ಚೆನ್ನಗಿರಿ)ದ ಪಶ್ಚಿಮ ಭಾಗದಲ್ಲಿ ಬಸವತೀರ್ಥವನ್ನು ನಿರ್ಮಿಸಿದುದು.

6. ಸುಟರಟ್ಟಿಯ ಶಿವಭಕ್ತ ಗಂಗಾಖ್ಯನು ನೆರವೇರಿಸಿದ ಗಣಾರಾಧನೆಯಲ್ಲಿ ಶಾಕ-ಪಾಕಾದಿಗಳನ್ನು ವೃದ್ಧಿಗೊಳಿಸಿದುದು.

7. ಮುಂಡಾಸದ ಸಂಗನಬಸವನಿಗೆ ನೇತ್ರವನ್ನಿತ್ತುದು. 8. ಮಾಲೋಜಿಯ ಸಹಜಾತನಾದ ಸಕರೋಜಿ ರಾಜನಿಗೆ ಶ್ರೀಹರಿಯ ರೂಪವನ್ನು ತೋರಿದುದು.

9. ಮಾಲೋಜಿಯ ಮಗನಾದ ಗೋವಿಂದರಾಜನ ಮಲರೋಗ ನಿವಾರಣೆ ಮಾಡಿದುದು.

10. ಮಾಲೋಜಿಯ ಮತ್ತೋರ್ವ ಮಗನಾದ ಕೇದಾರಭಾವನಿಗೆ ರಾಣಿಯರು ದಾಯಾದ್ಯತನದಿಂದ ವಿಷಪ್ರಾಸನ ಮಾಡಿಸಲು ಆತನನ್ನು ಆ ವಿಷದ ಬಾಧೆಯಿಂದ ಉಳಿಸಿ ಉದ್ಧಿರಿಸುದುದು.

11. ಗೋವಿಂದರಾಜನ ಮಗನಾದ ನಾರಾಯಣನು ಬಾಲಗ್ರಹ ಪೀಡಿತನಾಗಿರಲು ಆತನನ್ನು ಉದ್ಧರಿಸಿದುದು.

12. ಮಾಲೋಜಿರಾಜನ ಸ್ವರ್ಗಗಾಮಿನಿ ಎಂಬ ಕುದುರೆ ಸಾಯಲು ಅದನ್ನು ಉಳಿಸಿದುದು.

13. ಪ್ರತಿಪರಗಣೆಗಾಗಿ ನಡೆದ ಯುದ್ಧದಲ್ಲಿ ಮಾಲೋಜಿ ರಾಜನಿಗೆ ದರ್ಶನವಿತ್ತುದು.

14. ಆನೆಕಾಲ ಭೂಪತಿಯ ರಾಜ್ಯದಿಂದ ಬ್ರಹ್ಮಹತ್ಯೆ ದ್ರೋಹವನ್ನು ನೆಲೆಗೆಡಿಸಿದುದು.

15. ಆನೆಕಾಲ ಭೂಪತಿಯ ರಾಜ್ಯದಲ್ಲಿ ಬಸವಪುರವನ್ನು ಸ್ಥಾಪಿಸಿ ಆ ಬಸವಪುರ ಶರಣಬಸವೇಶನ ಧರ್ಮಪತ್ನಿಯು ಬಾವಿಯಲ್ಲಿ ಬಿದ್ದಾಗ ತಾನೇ ಬಂದು ಆಕೆಯ ಪ್ರಾಣವನ್ನು ಉಳಿಸಿದುದು.

16. ಚನ್ನಗಿರಿ ಲಿಂಗದ ಮೇಲೆ ಧರಿಸಿದ ವಸ್ತ್ರಗಳನ್ನು ಕದ್ದೊಯ್ಯುತ್ತಿರುವ ಕಳ್ಳನಿಗೆ ಕೃಪೆದೋರಿದುದು.

17. ಮಕ್ಕಳಿಲ್ಲದ ಅರವತ್ತು ವರ್ಷದ ವೃದ್ಧೆ ಮಹಾಲಿಂಗ ಮುನಿನಾಥನನ್ನು ಕುರಿತು ವೃತವನ್ನಾಚರಿಸಿ ಮಗನನ್ನು ಪಡೆದುದು.

18. ಸಿದ್ಧಾಯಿಯೆಂಬ ಶರಣೆಗೆ ಜಡೆಯನ್ನಿತ್ತುದು.

19. ಚನ್ನಗಿರಿಲಿಂಗದಲ್ಲಿ ಸಮಾಧಿನಿಂದುದು.

ಶೋಭಾಯಮಾನ ಅಷ್ಟಲಿಂಗ ಮುದ್ರೆಗಳು

ಮಹಾಲಿಂಗೇಶ್ವರರ ಸ್ಮರಣೆಗೆ ನರಗಟ್ಟಿ (ಮಹಾಲಿಂಗಪುರ) ಕ್ಷೇತ್ರ ಮಹಾಲಿಂಗಮಯವಾಗಿ ಮೆರೆಯಲು ಮೋದಪುರ (ಮುಧೋಳ)ದ ಮಾಲೋಜಿ ಘೋರ್ಪಡೆ ರಾಜ ಪಟ್ಟಣದ ಎಂಟೂ ದಿಕ್ಕಿಗೆ ಸ್ಥಾಪಿಸಿದ್ದ ಲಿಂಗಮುದ್ರೆಗಳು ಇಂದಿಗೂ ಶೋಭಾಯಮಾನವಾಗಿ ಕಂಗೊಳಿಸುತ್ತಿವೆ.

ಮಹಾಲಿಂಗೇಶ್ವರರ ಸನ್ನಿಧಾನದಲ್ಲಿ ಅವರ ಆದೇಶದ ಮೇರೆಗೆ ಎಂಟು ದಿಕ್ಕುಗಳಲ್ಲಿ ಸ್ಥಾಪಿತವಾಗಿರುವ ಈ ಲಿಂಗಮುದ್ರೆಗಳಿಗೆ ಆಯಾ ಭಾಗದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಲಿಂಗಮುದ್ರೆಗಳು ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿದ್ದರೂ ಇವು ಇರುವಿಕೆಯ ಕುರುಹು ಮಾತ್ರ ನಗರದ ಜನರಿಗೆ ತಿಳಿಯದಿರುವುದು ಸೋಜಿಗದ ಸಂಗತಿಯಾಗಿದೆ.

ಶಿವನ ಅಪ್ಪಣೆ ಮೇರೆಗೆ ಶರೀರರಾಗಿ ಭೂಮಿಗೆ ಬಂದ ಮಹಾಲಿಂಗ ಜಂಗಮರು ವಿವಿಧ ಪುಣ್ಯಕ್ಷೇತ್ರ ಸಂಚರಿಸಿ ಶಿವಸ್ವಪ್ನದ ವಾಣಿಯಂತೆ ಇಂದಿನ ಮಹಾರಾಷ್ಟ್ರದ ಢಪಳಾಪುರದಲ್ಲಿರುವ ಶಿವಯೋಗಿ ಗುರುಲಿಂಗ ಜಗದಾರ್ಯರಲ್ಲಿಗೆ ಬಂದು ಅವರ ಶಿಷ್ಯರಾಗಿ, ಅವರಿಂದ ಆಷ್ಠಾವರಣ ಮಹಿಮೆಯನ್ನು ತಿಳಿಯುತ್ತಾರೆ. ಇದು ಮಹಾಲಿಂಗೇಶ್ವರರು ರಾಜನಿಗೆ ಲಿಂಗಮುದ್ರೆ ಸ್ಥಾಪನೆಗೆ ಅನುಮತಿ ನೀಡಲು ಪ್ರೇರಣೆಯಾಗಿರಬಹುದು ಎಂದು ಅಂದಾಜಿಸಬಹುದಾಗಿದೆ.

ಉದ್ದೇಶ:

ಪಾರ್ವತಿ ಪರಮೇಶ್ವರರಿಗೆ ಅರ್ಪಿಸಲು ಪೂರ್ವ ದಿಕ್ಕಿಗೆ, ಮಹಾಲಿಂಗ ಮುನಿಗಳಿಗೆ ರಾಜನು ತಾನಿತ್ತ ಭಾಷೆಗಳ ಉತ್ತರಗಳು ನಿಜವೆಂದು ಸಾರಲು ಉತ್ತರ ದಿಕ್ಕಿಗೆ, ಮಹಾಲಿಂಗರಿಗೆ ಭಕ್ತಿಯಿಂದ ಕಂಚಿನ ಪಟದಲ್ಲಿ ಬರೆಸಿಕೊಟ್ಟ (ದತ್ತಿ) ದಾನಪತ್ರವು ಸತ್ಯವಾದರೆ ಈ ಲಿಂಗಮುದ್ರೆಯು ಸತ್ಯ ಎನ್ನುವುದಕ್ಕೆ ಪಶ್ಚಿಮ ದಿಕ್ಕಿಗೆ, ರಾಜನು ತಾನು ಭಕ್ತಿಯಿಂದ ದಕ್ಷ್ಷಿಣೆಯಾಗಿತ್ತ ಭೂಮಿಯ ಕೀರ್ತಿಯು ಶಾಶ್ವತವಾಗಿ ಉಳಿಯಲು ದಕ್ಷಿಣ ದಿಕ್ಕಿಗೆ ಲಿಂಗಮುದ್ರೆಗಳನ್ನು ಸ್ಥಾಪಿಸಲಾಗಿದೆ. ಅಷ್ಟ ಲಿಂಗಗಳ ಪ್ರತಿಷ್ಠಾಪನೆಯ ಅಂಗವಾಗಿ ಅಂದು ನರಗಟ್ಟಿಯ ಎಲ್ಲ ದೇವಾಲಗಳಲ್ಲಿ ಸಂಭ್ರಮದ ಪೂಜೆ ಪುನಸ್ಕಾರಗಳು ನಡೆದರೆ ಅರಸನು ಧಾನ್ಯ, ಫಲಪುಷ್ಪಾದಿಗಳನ್ನು ಶಿವಲಿಂಗ ಜಂಗಮ ದಾಸೋಹಕ್ಕೆ ಭಕ್ತಿಯಿಂದ ನೀಡಿದನೆಂದು ಇತಿಹಾಸ ಅರಹುತ್ತದೆ.

ಲಿಂಗಮುದ್ರೆಗಳು: 

ನಗರದ ರೇವಡಿಗಿಡದ ಹಿಂದೆ, ಕೆಂಗೇರಿಮಡ್ಡಿಯ ಕಲ್ಕರ್ಣಿಯಲ್ಲಿ, ವಿದ್ಯಾನಗರ, ಅಕ್ಕಿಮರಡಿ ರಸ್ತೆಯ ಬೂತ ಈಶ್ವರಪ್ಪನವರ ತೋಟದಲ್ಲಿ, ಢವಳೇಶ್ವರ-ಮಹಾಲಿಂಗಪುರ ಒಳ ರಸ್ತೆಯಲ್ಲಿ ಆದೆಪ್ಪನವರ ತೋಟದಲ್ಲಿ, ಕಲ್ಪಡ, ಹೊಸಬಾವಿ, ಬುದ್ನಿ-ಕೆಸರಗೊಪ್ಪ ಒಳ ರಸ್ತೆಯಲ್ಲಿ ಅಡಿವೆಪ್ಪಗೌಡ ಅವರ ತೋಟದಲ್ಲಿ ಲಿಂಗಮುದ್ರೆಗಳಿವೆ.

ಕಲ್ಕರ್ಣಿಯ ಲಿಂಗಮುದ್ರೆಗೆ, ವಿದ್ಯಾನಗರದ ಲಿಂಗಮುದ್ರೆಗೆ ದೇವಾಲಯ ನಿರ್ಮಿಸಲಾಗಿದೆ. ಬೂತ ಈಶ್ವರಪ್ಪನವರ ತೋಟದಲ್ಲಿರುವ ಲಿಂಗಮುದ್ರೆಗೆ ದೇವಾಲಯ ನಿರ್ಮಿಸಲಾಗಿದ್ದು, ಈ ದೇವಾಲಯದ ಮೇಲೆ ಭಕ್ತೆ ಸಿದ್ದಾಯಿಗೆ ಮಹಾಲಿಂಗೇಶ್ವರರು ತಮ್ಮ ಐದು ಎಳೆ ಜಡೆಯನ್ನು ನೀಡುತ್ತಿರುವ ದೃಶ್ಯವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.

ಮಹಾಲಿಂಗೇಶ್ವರರ ಇತಿಹಾಸದಲ್ಲಿ ಅಷ್ಟ ದಿಕ್ಕುಗಳ ಕುರಿತು ಮಾಹಿತಿ ಲಭ್ಯವಿದ್ದರೆ ಒಟ್ಟಾರೆ ಪಟ್ಟಣದ ಸುತ್ತಮುತ್ತಲು ಹದಿನಾರು ಲಿಂಗಮುದ್ರೆಗಳಿದ್ದು, ಈ ಪೈಕಿ ಹನ್ನೆರಡು ಲಿಂಗಮುದ್ರೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಬುದ್ನಿ ಪಿಡಿಯ ಕೇಸಪ್ಪನ ಬಾವಿ ಬಳಿಯ ವೆಂಕಣ್ಣನವರ ತೋಟ, ಕಲ್ಪಡ, ಟೊಣಪಿನಾಥ ದೇವಸ್ಥಾನ ಹಾಗೂ ಬುದ್ನಿ ಕೆಸರಗೊಪ್ಪ ಒಳ ರಸ್ತೆಯಲ್ಲಿಯೂ ಲಿಂಗಮುದ್ರೆಗಳು ಕಂಡುಬರುತ್ತವೆ.   ಸನದುಗಳು: ವಿಜಯಪುರದ ಇಬ್ರಾಹಿಂ ಬಾದಶಾಹನು ಕ್ರಿ.ಶ.1750ರಲ್ಲಿ ಮಹಲಿಂಗ ಮುನಿನಾಥನಿಗೆ ಹಾಕಿಕೊಟ್ಟ ಸನದೊಂದಿದೆ. ಕ್ರಿ.ಶ.1793 ರಲ್ಲಿ ಮುಧೋಳ ಘೋರ್ಪಡೆ ಮನೆತನದ ರಾಜನಾದ ನಾರಾಯಣರಾಯನು ಕೊಟ್ಟ ಸನದಿನಲ್ಲಿ ಕೆಲವು ಮಹತ್ವದ ಸಂಗತಿಗಳ ಉಲ್ಲೇಖವಿದೆ.

ಮಹಾಲಿಂಗಪುರದ ಸರ್ವಹಕ್ಕು, ವೀರಶೈವರ ಲಿಂಗಧಾರಣೆ ಮೊದಲು ಮಾಡಿ ಅಂತ್ಯದವರೆಗೆ ಆಗುವ ಎಲ್ಲ ಸಂಸ್ಕಾರಗಳನ್ನು ಮಾಡುವ ಹಕ್ಕು, ಸರ್ವರ ದೀಕ್ಷಾ ಮೋಕ್ಷ ಕಾರ್ಯದ ಹಕ್ಕು, ತಪ್ಪು ಮಾಡಿದವರಿಂದ ಅಪರಾಧದ ಕಾಣಿಕೆಯನ್ನು ಪಡೆಯುವ ಹಕ್ಕು, ನಷ್ಟ ಸಂತತಿಯಾದವರ ಆಸ್ತಿಯನ್ನು ಪಡೆಯುವ ಹಕ್ಕು ಇವೆಲ್ಲ ಮಹಾಲಿಂಗಪುರದ ಮಹಾಲಿಂಗೇಶ್ವರ ಮಠಕ್ಕಿದೆ ಎಂಬುದನ್ನು ಸನದಿನಲ್ಲಿ ಉಲ್ಲೇಖಿಸಲಾಗಿದೆ.

ದೇವತಾ ಅರ್ಚನೆಗೆ ಮಾತ್ರ ನೀರು ಬಳಕೆ

ಮಹಾಲಿಂಗೇಶ್ವರ ಕೃಪಾಶೀರ್ವಾದಿಂದ ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದ ಹಿಂದೆ ನಿರ್ಮಿತಗೊಂಡಿರುವ ‘ಬಸವತೀರ್ಥ’ ಬಾವಿಗೆ ತನ್ನದೇ ಆದ ಇತಿಹಾಸವಿದೆ. ಲಿಂಗಪೂಜೆ, ದೇವತಾ ಅರ್ಚನೆಗೆ ಮಾತ್ರ ಈ ಬಾವಿಯ ನೀರು ಬಳಕೆ ಮಾಡುವ ಹಿಂದೆಯೂ ಒಂದು ಕಾರಣವಿದೆ. ದೇವಸ್ಥಾನಗಳಂತೆ ಈ ಬಾವಿಯೂ ಪುಣ್ಯಕ್ಷೇತ್ರವಾಗಿ ಕಂಗೊಳಿಸುತ್ತಿದೆ.

ಈ ಬಾವಿಗೆ ‘ಅಪ್ಪನಾರ ಬಾವಿ’ ಎಂತಲೂ ಕರೆಯುತ್ತಾರೆ. ಇತಿಹಾಸದ ಪ್ರಕಾರ ಇದಕ್ಕೆ ‘ಬಸವ ತೀರ್ಥ’ ಎಂದು ಹೆಸರಿದೆ. ಬೇಸಿಗೆಯಲ್ಲಿಯೂ ಈ ಬಾವಿ ನೀರು ತುಂಬಿರುವುದು ವಿಶೇಷ. ಶತಮಾನಗಳಷ್ಟು ಹಳೆಯದಾದ ಈ ಬಾವಿಯನ್ನು ಕಂಡರೆ ವಾಸ್ತವ ಅರಿವಾಗುತ್ತದೆ.

ಭಕ್ತಿಯ ತಾಣ ಸಿದ್ಧಾಯಿ ತಾಯಿ ದೇಗುಲ

ಮಹಾಲಿಂಗೇಶ್ವರರ ಇರುವಿಕೆಯ ಗುರುತಿಗಾಗಿ ಜಟೆಗಳನ್ನು ಪಡೆದು ಅದರ ಮಹಿಮೆಯನ್ನು ಸಾರಿದ ಭಕ್ತೆ ಸಿದ್ಧಾಯಿ ತಾಯಿ ದೇವಸ್ಥಾನ ಭಕ್ತಿಯ ತಾಣವಾಗಿದೆ. ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲೇ ಸಿದ್ಧಾಯಿ ತಾಯಿ ದೇವಸ್ಥಾನ ಇದ್ದು, ಆಕೆಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಮೂರ್ತಿಯ ಪೂಜೆ ನೆರವೇರುತ್ತದೆ. ದೇವಸ್ಥಾನದ ಸುತ್ತ ಬಸವಣ್ಣ, ಅಕ್ಕಮಹಾದೇವಿ, ಗುರುಲಿಂಗ ಜಂಗಮರ ಚಿತ್ರಗಳನ್ನು ಬಿಡಿಸಲಾಗಿದೆ.

ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲ ಸಿದ್ಧಾಯಿ ತಾಯಿ ದೇವಸ್ಥಾನಕ್ಕೂ ನಮಸ್ಕರಿಸುತ್ತಾರೆ. ಮಹಾಲಿಂಗೇಶ್ವರರ ಭಕ್ತೆಯಾಗಿ ಜನಜನಿತವಾದ ಸಿದ್ಧಾಯಿ ತಾಯಿಯ ಐತಿಹ್ಯ ವಿಶಿಷ್ಟವಾದುದು.

ಮಹಾಲಿಂಗೇಶ್ವರರು ನಾಡಿಗೆ ಬಂದ ದಿನದಿಂದಲೂ ಶರಣೆ ಸಿದ್ಧಾಯಿ ತಾಯಿಯು ಅವರಿಗೆ ನಿತ್ಯವೂ ಮಡಿಯಿಂದ ಅಡುಗೆ ಮಾಡಿ ಪ್ರಸಾದ ಅರ್ಪಿಸುವ ಪವಿತ್ರ ಕಾಯಕವನ್ನು ವ್ರತದಂತೆ ನಡೆಸಿಕೊಂಡು ಬಂದಿದ್ದಳು. ಒಂದು ದಿನ ಪರಶಿವನ ಅಪ್ಪಣೆಯಂತೆ ಮಹಾಲಿಂಗೇಶ್ವರರು ಈ ಭೂಮಿ ಬಿಟ್ಟು ಹೊರಡಲು ಅಣಿಯಾದರು.

ಸಿದ್ಧಾಯಿ ತಾಯಿಗೆ ನೆಲವೇ ಕುಸಿದಂತಾಗಿ, ಸಾಕಾರ ರೂಪವಾಗಿಯೇ ನಮ್ಮ ಕಣ್ಣೆದುರಿಗೆ ಕಾಣಬೇಕು ಎಂಬ ಬಯಕೆ ಮುಂದಿಟ್ಟಳು. ಇದಕ್ಕೆ ಮಹಾಲಿಂಗೇಶ್ವರರು, ತಮ್ಮ ಇರುವಿಕೆಯ ಗುರುತಿಗಾಗಿ ಶಿರದಲ್ಲಿನ ಐದೆಳೆಯ ಜಟೆಗಳನ್ನು ಸಿದ್ಧಾಯಿಗೆ ವರವಾಗಿ ನೀಡಿ, ‘ಜಟೆಗಳು ಪ್ರತಿ ವರ್ಷ ಒಂದು ಕಡಲೆಕಾಳಿನಷ್ಟು ಬೆಳೆಯುತ್ತದೆ. ಇದೇ ನಾನು ಸಾಕಾರ ರೂಪದಲ್ಲಿ ಇರುವ ಕುರುಹು. ಈ ಜಟೆಗಳಲ್ಲಿಯೇ ನನ್ನನ್ನು ಕಂಡು, ಭಕ್ತಿಯಿಂದ ಯಾರು ಜಟಾಭಿಷೇಕ ಮಾಡಿಸುವರೋ ಅಂಥ ಭಕ್ತರ ಇಷ್ಟಾರ್ಥ ಪೂರೈಸುತ್ತೇನೆ’ ಎಂದು ಹೇಳಿ ಇಹಲೋಕ ತ್ಯಜಿಸಿದರು.

ಮಹಾಲಿಂಗೇಶ್ವರರ ವಾಣಿಯಂತೆ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿ ಜಟೆಗಳು ಪ್ರತಿ ವರ್ಷ ಬೆಳೆಯುತ್ತ ಇಂದು ಏಳು ಸುತ್ತಿನ ಸಿಂಬೆಯಾಗಿದೆ. ಜಟೆಗಳ ಮಹಿಮೆಯಿಂದ ತಮ್ಮ ಕಷ್ಟಗಳನ್ನು ಪಾರಾಗಿ ಇಷ್ಟಾರ್ಥಗಳನ್ನು ಪಡೆದ ಅನೇಕ ಭಕ್ತರು ಪ್ರತಿವರ್ಷ ಅದರಲ್ಲೂ ಶ್ರಾವಣ ಮಾಸದಲ್ಲಿ ಜಟಾಭಿಷೇಕ ಮಾಡಿಸುತ್ತಾರೆ. ಮಹಾಲಿಂಗೇಶ್ವರರ ಇರುವಿಕೆಯನ್ನು ಗುರುತಿಸುವಂತೆ ಮಾಡಿದ ಶರಣೆ ಸಿದ್ಧಾಯಿ ತಾಯಿಯನ್ನು ಭಕ್ತಿಯಿಂದ ನಮಿಸುತ್ತಾರೆ.

ಮಹಾಲಿಂಗೇಶ್ವರ ಆವರಣದಲ್ಲಿ ಸಿದ್ಧಾಯಿ ತಾಯಿ ದೇವಸ್ಥಾನವಿದ್ದರೂ ದೇವಸ್ಥಾನದ ಅಣತಿ ದೂರದಲ್ಲಿ ಆಕೆ ಬಾಳಿದ ಮನೆಯಲ್ಲಿ ಲಿಂಗೈಕ್ಯವಾದ ಸ್ಥಳದಲ್ಲಿ ಗದ್ದುಗೆ ನಿರ್ಮಿಸಲಾಗುತ್ತಿದೆ. ಸಿದ್ಧಾಯಿ ತಾಯಿಯು ಪಟ್ಟಣದ ವಜ್ಜರಮಟ್ಟಿ ವಂಶಸ್ಥಳು. ಹೀಗಾಗಿ, ಆ ಮನೆತನದ ಸದಸ್ಯರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಮುಂಚೂಣಿಯಲ್ಲಿ ಇರುತ್ತಾರೆ ಎಂಬುದು ವಿಶೇಷ. ಮಹಾಲಿಂಗೇಶ್ವರರು ಸಿದ್ಧಾಯಿ ತಾಯಿಗೆ ಐದೆಳೆ ಜಟೆಗಳನ್ನು ನೀಡುತ್ತಿರುವ ಚಿತ್ರವನ್ನು ದೇವಸ್ಥಾನದ ಅನುಭವ ಮಂಟಪದಲ್ಲಿ ಕೆತ್ತಲಾಗಿದೆ. ಅಲ್ಲದೆ, ಪಟ್ಟಣದ ಎಲ್ಲ ಭಕ್ತರ ಮನೆಯಲ್ಲಿ ಇದೇ ಚಿತ್ರವೂ ಇರುವುದು ಅಭಿಮಾನ, ಪ್ರೀತಿ ತೋರಿಸುತ್ತದೆ. ಮಹಾಲಿಂಗೇಶ್ವರರೊಂದಿಗೆ ಸಿದ್ಧಾಯಿ ತಾಯಿಯೂ ಪೂಜಿತಗೊಳ್ಳುತ್ತಾಳೆ ಎಂಬುದು ಗಮನಾರ್ಹವಾದುದು.

ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ 
ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ 
ಚನ್ನಗಿರೇಶ್ವರ ದೇವಸ್ಥಾನ
ಚನ್ನಗಿರೇಶ್ವರ ದೇವಸ್ಥಾನ
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಮೂರ್ತಿಯನ್ನು ಮಂಗಳವಾರ ಅಲಂಕರಿಸಿರುವುದು 
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಮೂರ್ತಿಯನ್ನು ಮಂಗಳವಾರ ಅಲಂಕರಿಸಿರುವುದು 
ಭಕ್ತೆ ಸಿದ್ದಾಯಿ ತಾಯಿ ದೇವಸ್ಥಾನ
ಭಕ್ತೆ ಸಿದ್ದಾಯಿ ತಾಯಿ ದೇವಸ್ಥಾನ
ಬಸವ ತೀರ್ಥ ಬಾವಿ
ಬಸವ ತೀರ್ಥ ಬಾವಿ
ಅಷ್ಟ ದಿಕ್ಕುಗಳಲ್ಲಿ ಸ್ಥಾಪಿತ ಲಿಂಗಮುದ್ರೆಗಳು
ಅಷ್ಟ ದಿಕ್ಕುಗಳಲ್ಲಿ ಸ್ಥಾಪಿತ ಲಿಂಗಮುದ್ರೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT