ಮಂಗಳವಾರ, ನವೆಂಬರ್ 24, 2020
22 °C
ಕನ್ನಡ ಸಂಘಟನೆಗಳಿಂದ ತೀವ್ರ ಆಕ್ರೋಶ, ಕ್ರಮಕ್ಕೆ ಆಗ್ರಹ

ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಸರ್ಕಾರದಿಂದ ಕರಾಳ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿ ನ. 1ರಂದು ಆಚರಿಸುವ ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ಆಯೋಜಿಸುವ ಕರಾಳ ದಿನಾಚರಣೆ ಬೆಂಬಲಿಸಿ ನೆರೆಯ ಮಹಾರಾಷ್ಟ್ರದ ಸಚಿವರು ಅಂದು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾರೆ.

‘ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ. ಹೀಗಾಗಿ, ನೀವು ಅಲ್ಲಿ ನಮ್ಮ ಪರವಾಗಿ ಪ್ರತಿಭಟಿಸಬೇಕು’ ಎಂದು ಕೋರಿ ಇಲ್ಲಿನ ಎಂಇಎಸ್ ಮುಖಂಡರು ಮಹಾರಾಷ್ಟ್ರದ ಸಚಿವರಿಗೆ ಈಚೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಆ ರಾಜ್ಯದ ಸಚಿವರು ಎಂಇಎಸ್‌ ಬೆಂಬಲಕ್ಕೆ ನಿಂತಿದ್ದಾರೆ.

‘ಎಂಇಎಸ್ ಕರಾಳ ದಿನಾಚರಣೆ ಬೆಂಬಲಿಸಲು ನಿರ್ಧರಿಸಿದ್ದೇವೆ. ನ.1ರಂದು ನಮ್ಮೆಲ್ಲ ಸಚಿವರೆಲ್ಲರೂ ಕಪ್ಪು ಪಟ್ಟಿ ಧರಿಸಲು ನಿರ್ಧರಿಸಿದ್ದಾರೆ’ ಎಂದು ಮುಂಬೈನಲ್ಲಿ ‌ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

‘ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಮತ್ತು ದಬ್ಬಾಳಿಕೆ ನಡೆಸುತ್ತಿದೆ. ಮರಾಠಿ ಭಾಷಿಕರ ದನಿ ಹತ್ತಿಕ್ಕುತ್ತಿದೆ’ ಎಂದು ದೂರಿದ್ದಾರೆ.

ಸಚಿವರಿಂದ ಪತ್ರ:

‘ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ ಕಾನೂನು ಹೋರಾಟ ಮುಂದುವರಿಸಲಿದೆ. ಆದಷ್ಟು ಬೇಗ ಮರಾಠಿ ಭಾಷಿಕರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ’ ಎಂದಿದ್ದಾರೆ.

ಇದಲ್ಲದೇ, ಗಡಿಯಲ್ಲಿರುವ ಮರಾಠಿ ಭಾಷಿಕರನ್ನು ಉದ್ದೇಶಿಸಿ ಗಡಿ ಉಸ್ತುವಾರಿ ಸಚಿವರಾದ ಏಕನಾಥ ಶಿಂಧೆ ಮತ್ತು ಛಗನ್ ಭುಜಬಲ್ ಪತ್ರ ಬರೆದಿದ್ದಾರೆ. ‘ಬೆಳಗಾವಿಯ ಕೆಲವು ಭಾಗಗಳು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳನ್ನು ಆದಷ್ಟು ಬೇಗ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಅದು ಯಶಸ್ವಿಯಾದಂದು ಐತಿಹಾಸಿಕ ದಿನವಾಗಲಿದೆ. ಆ ಕ್ಷಣದವರೆಗೂ ನಾವು ನಿಮ್ಮೊಂದಿಗೆ ಇರುತ್ತೇವೆ. ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ಮಹಾರಾಷ್ಟ್ರ ರಚನೆಯಾದಾಗ ದಕ್ಷಿಣದ ಕೆಲವು ಗ್ರಾಮಗಳನ್ನು ಸೇರಿಸಿಕೊಳ್ಳಲು ಆಗಲಿಲ್ಲ. ಇದಕ್ಕಾಗಿ ಹಲವು ದಶಕಗಳಿಂದ ಹೋರಾಡುತ್ತಿದ್ದೇವೆ. ಶೀಘ್ರದಲ್ಲೇ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮೊದಲಾದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದು ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ:

ಮಹಾರಾಷ್ಟ್ರ ಸರ್ಕಾರದ ಧೋರಣೆ ಖಂಡಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ‘ಇಲ್ಲಿ ರಾಜೋತ್ಸವ ಆಚರಿಸುವ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರವು ಕರಾಳ ದಿನ ಆಚರಿಸುವ ನಿರ್ಧಾರ ಕೈಗೊಂಡಿರುವುದು ಅತ್ಯಂತ ಗಂಭೀರ ವಿಷಯವಾಗಿದ್ದು, ಒಕ್ಕೂಟ ವ್ಯವಸ್ಥೆಯ ವಿರೋಧಿ ಕ್ರಮವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎರಡೂ ರಾಜ್ಯಗಳ ನಡುವಿನ ಗಡಿ ವಿವಾದವು 2004ರಿಂದಲೂ ಸುಪ್ರೀಂ ಕೋರ್ಟ್ ಮುಂದಿದೆ. ಹೀಗಿರುವಾಗ, ಆ ರಾಜ್ಯದ ಸಚಿವರೆಲ್ಲರೂ ಕೈಗೆ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿರುವುದು ನ್ಯಾಯಾಂಗ ನಿಂದನೆಯಾಗಿದೆ. ಒಂದು ರಾಜ್ಯವು ರಾಜ್ಯೋತ್ಸವ ಆಚರಿಸುವಾಗ ಮತ್ತೊಂದು ರಾಜ್ಯವು ಈ ರೀತಿ ಅಧಿಕೃತವಾಗಿ ಕರಾಳ ದಿನ ಆಚರಿಸುವುದು ನಮ್ಮ ಮೇಲೆ ನಡೆಸುವ ಸರ್ಕಾರಿ ದಾಳಿಯೇ ಸರಿ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ  ಪರಿಗಣಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಶಿಂಧೆ ಅವರ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿದೆ. ಹೀಗಿರುವಾಗ ನಮ್ಮ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸದೆ ಅಥವಾ ಪ್ರತಿಭಟಿಸದೆ ಮೌನ ವಹಿಸಿದರೆ ಕನ್ನಡಿಗರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹೀಗಾಗಿ, ವಿಷಯದ ಗಂಭೀರತೆ ಅರಿಯಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು