ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹಾತ್ಮರ ಚರಿತಾಮೃತ' ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ

ಶಿವಬಸವ ಶ್ರೀ ಜಯಂತ್ಯುತ್ಸವಕ್ಕೆ ಚಾಲನೆ
Last Updated 5 ಡಿಸೆಂಬರ್ 2021, 15:57 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ನಾಗನೂರು ರುದ್ರಾಕ್ಷಿ ಮಠದಿಂದ ಶಿವಬಸವನಗರದ ಆರ್‌.ಎನ್‌. ಶೆಟ್ಟಿ ಪಾಲಿಟೆಕ್ನಿಕ್‌ ಆವರಣದಲ್ಲಿ ನಾಲ್ಕು ದಿನಗಳವರೆಗೆ ಹಮ್ಮಿಕೊಂಡಿರುವ ಲಿಂ.ಶಿವಬಸವ ಸ್ವಾಮೀಜಿ ಅವರ 132ನೇ ಜಯಂತಿ ಮಹೋತ್ಸವಕ್ಕೆ ಭಾನುವಾರ ಸಂಭ್ರಮದ ಚಾಲನೆ ನೀಡಲಾಯಿತು.

ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ರಚಿಸಿದ ‘ಮಹಾತ್ಮರ ಚರಿತಾಮೃತ’ ಕೃತಿ ಬಿಡುಗಡೆ ಮಾಡಲಾಯಿತು. ಕನ್ನಡ ಪರ ಹೋರಾಟಗಾರರಾದ ಸಾಗರ ಬೋರಗಲ್ಲ ಮತ್ತು ಶಂಕರ ಬಾಗೇವಾಡಿ ಅವರಿಗೆ ‘ಕನ್ನಡ ನುಡಿಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತಿ ಬಸವರಾಜ ಜಗಜಂಪಿ ಮಾತನಾಡಿ, ‘ಮಹಾತ್ಮರ ಚರಿತಾಮೃತ ಕೃತಿಯು ದೇಶ–ವಿದೇಶಗಳ ಸಂತರು ಹಾಗೂ ಮಹಾತ್ಮರ ಚರಿತ್ರೆ ಒಳಗೊಂಡಿರುವ ಶತಮಾನದ ಭವ್ಯ ಕೃತಿಯಾಗಿದೆ. ಒಂದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿರದ ಈ ಪುಸ್ತಕವನ್ನು ಪ್ರತಿಯೊಬ್ಬರೂ ಓದಿ, ಉತ್ತಮ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಾಹಿತಿ ಡಾ.ಸರಜೂ ಕಾಟ್ಕರ್‌ ಮಾತನಾಡಿ, ‘ಅನೇಕ ಮಹಾತ್ಮರು ಜನ್ಮತಾಳಿದ ಪುಣ್ಯಭೂಮಿ ಭಾರತ. ಆದರೆ, ಇಂದಿಗೂ ಜಾತಿಗಳ ನಡುವಿನ ಕಂದಕಗಳು, ಅಸ್ಪೃಶ್ಯತೆ ಹೋಗಿಲ್ಲ. ಜನರು ಸಕಾರಾತ್ಮಕವಾಗಿ ಆಲೋಚಿಸಲು ಇಂತಹ ಕೃತಿಗಳು ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಗ್ರಂಥದಲ್ಲಿರುವ ಚಿತ್ರಗಳ ಸಂಗ್ರಹ ಕೂಡ ಅದ್ಭುತವಾಗಿದೆ. ಕತ್ತಲೆ ಕಳೆಯುವ ದೀಪಗಳ ಮೆರವಣಿಗೆ ಇದಾಗಿದೆ. ಯಾವುದೇ ಪೂರ್ವಾಗ್ರಹಪೀಡಿತ ಇಲ್ಲದೆ ಸಮಚಿತ್ತವಾಗಿ ರಚಿತಗೊಂಡ ಸಹಸ್ರಮಾನದ ಕೃತಿ ಇದು’ ಎಂದು ಬಣ್ಣಿಸಿದರು.

ಕೃತಿ ಪರಿಚಯಿಸಿದರ ಸಾಹಿತಿ ಡಾ.ವಿ.ಎಸ್. ಮಾಳಿ, ‘ಈ ಕೃತಿಯು ಅಹಂಕಾರ ನಿರಸನದ ವಿನಮ್ರ ಅಭಿವ್ಯಕ್ತಿಯಾಗಿದೆ. ಕೈತೊಳೆದುಕೊಂಡು ಹಾಗೂ ಪಂಚೇಂದ್ರಿಯಗಳನ್ನೂ ಮಡಿ ಮಾಡಿಕೊಂಡು ಮುಟ್ಟುವ ಗ್ರಂಥವಾಗಿದೆ’ ಎಂದರು.

ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಭು ಚನ್ನಬಸವ ಸ್ವಾಮೀಜಿ, ಕುಮಾರ ದೇವರು, ಮಹಾಂತ ದೇವರು ಹಾಗೂ ಶಾಸಕ ಮಹಾಂತೇಶ ಕೌಜಲಗಿ ಇದ್ದರು.

ಪ್ರಭುದೇವ ಮಾತೃ ಮಂಡಳಿಯವರು ವಚನ ಪ್ರಾರ್ಥನೆ ಮಾಡಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT