ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ–ಜಾನುವಾರು ರಕ್ಷಣೆಗೆ ಸಿದ್ಧವಾಗಿ: ಡಿ.ಸಿ ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಡಿ.ಸಿ ಸೂಚನೆ
Last Updated 5 ಮೇ 2022, 7:33 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರವಾಹದ ತುರ್ತು ಸಂದರ್ಭದಲ್ಲಿ ಜನರು‌ ಮತ್ತು ಜಾನುವಾರುಗಳ ರಕ್ಷಣೆ ಹಾಗೂ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೊ ಸಂವಾದದ ಮೂಲಕ ಗುರುವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಳೆದ ಬಾರಿ ಪ್ರವಾಹ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪರಿಸ್ಥಿತಿ ಉದ್ಭವಿಸಿದರೂ ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಸಮನ್ವಯವಿರಲಿ:

‘ನೆರೆ ಹಾವಳಿ, ಬರ, ಸಂಭವನೀಯ ಕೋವಿಡ್ ನಾಲ್ಕನೇ ಅಲೆ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಪತ್ತು ನಿರ್ವಹಣಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಯೋಜನೆ ರೂಪಿಸಬೇಕು. ತಹಶೀಲ್ದಾರರು ಕೂಡಲೇ ಆಯಾ ತಾಲ್ಲೂಕು ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳ ಸಭೆ ಕರೆದು ತಯಾರಿ ಪರಿಶೀಲಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಸಿದ್ಧವಾಗಬೇಕು’ ಎಂದು ತಾಕೀತು ಮಾಡಿದರು.

‘ಪ್ರವಾಹ ಸಂದರ್ಭದಲ್ಲಿ ನದಿತೀರದ ಗ್ರಾಮಗಳ ಜನರ ರಕ್ಷಣೆಗೆ ಅಗತ್ಯವಿರುವ ಬೋಟ್‌ಗಳ ಬಗ್ಗೆ ಮುಂಚಿತವಾಗಿಯೇ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು. ಲಭ್ಯವಿಲ್ಲದಿದ್ದರೆ ಕೂಡಲೇ ಒದಗಿಸಲಾಗುವುದು. ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ಆರೋಗ್ಯ, ಪೊಲೀಸ್, ಗೃಹರಕ್ಷಕ ದಳದವರು ಸಮನ್ವಯದೊಂದಿಗೆ ತಂಡವಾಗಿ ಕಾರ್ಯನಿರ್ವಹಿಸಬೇಕು’ ಎಂದರು.

ಮಾಹಿತಿ ವಿನಿಮಯಕ್ಕೆ ತಂಡ:

‘ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ಜಲಾಶಯಗಳ ಹಿರಿಯ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು. ನೆರೆಯ ಮಹಾರಾಷ್ಟ್ರದ ಮಳೆಯ ಪ್ರಮಾಣ ಮತ್ತು ಕೊಯ್ನಾ ಮೊದಲಾದ ಜಲಾಶಯಗಳಿಂದ ನೀರು ಬಿಡುಗಡೆ ಸಂದರ್ಭದಲ್ಲಿ ಮುಂಚಿತವಾಗಿ ಮಾಹಿತಿಯನ್ನು ಪರಸ್ಪರವಾಗಿ ವಿನಿಮಯ ಮಾಡಿಕೊಳ್ಳಬೇಕು. ಇದಕ್ಕಾಗಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮುಂಚಿತವಾಗಿ ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು’ ಎಂದು ಸೂಚಿಸಿದರು.

‘ಪ್ರತಿ ತಾಲ್ಲೂಕುವಾರು ಕಾಳಜಿ ಕೇಂದ್ರಗಳ ಪಟ್ಟಿ, ಎಷ್ಟು ಜನರಿಗೆ ಅಲ್ಲಿ ಅವಕಾಶ ಕಲ್ಪಿಸಬಹುದು ಎನ್ನುವುದು ಸೇರಿದಂತೆ ಎಲ್ಲ ಬಗೆಯ ಮಾಹಿತಿಯನ್ನು ಹೊಂದಿರುವ ಕಿರುಪುಸ್ತಿಕೆ ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಬೇಕು’ ಎಂದು ಜಿ.ಪಂ. ಸಿಇಒ ಎಚ್‌.ವಿ. ದರ್ಶನ್‌ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಎಸ್ಪಿ ಮಹಾನಿಂಗ ನಂದಗಾವಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ. ಇಒಗಳು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ನಿರ್ದೇಶನಗಳು...

* ತುರ್ತು ಸಂದರ್ಭದಲ್ಲಿ ತಕ್ಷಣವೇ ನಿಯಂತ್ರಣ ಕೊಠಡಿ ಆರಂಭಿಸಬೇಕು. ಅಗತ್ಯವಿರುವ ಅಧಿಕಾರಿ, ಸಿಬ್ಬಂದಿ ನಿಯೋಜನೆಯನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು.

* ಅಗತ್ಯ ಔಷಧ ಮೊದಲಾದ ಸಾಮಗ್ರಿಗಳ ದಾಸ್ತಾನು ಇಟ್ಟುಕೊಳ್ಳಬೇಕು.

* ತಕ್ಷಣವೆ ನಿಯೋಜಿಸಲು ಅನುಕೂಲವಾಗುವಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ತಂಡಗಳನ್ನು ರಚಿಸಬೇಕು.

* ಹಾವು ಮತ್ತಿತರ ವಿಷಜಂತುಗಳು ಕಡಿದಾಗ ಚಿಕಿತ್ಸೆಗೆ ಬೇಕಾದ ಔಷಧ ಸಾಮಗ್ರಿಗಳನ್ನು ಇಟ್ಟುಕೊಳ್ಳಬೇಕು.

* ವಿದ್ಯುತ್ ಸಂಪರ್ಕ ಕಡಿತಗೊಂಡಾಗ ತುರ್ತು ದುರಸ್ತಿಗೆ ತಂಡಗಳನ್ನು ರಚಿಸಬೇಕು. ಕಂಬಗಳು, ತಂತಿ, ವಾಹನ ಮೊದಲಾದವುಗಳ ವ್ಯವಸ್ಥೆ ಮಾಡಿಕೊಳ್ಳಬೇಕು.

ತಕ್ಷಣವೇ ನೀಡಬೇಕು

ಮಾನವ, ಜಾನುವಾರು ಜೀವ ಹಾನಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪರಿಹಾರವನ್ನು ತುರ್ತಾಗಿ ವಿತರಿಸಬೇಕು. ವಿನಾಕಾರಣ ವಿಳಂಬ ಮಾಡಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು.

–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ಗುರುತಿಸಬೇಕು

ತುರ್ತು ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುವಂತೆ ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್‌ಗಳನ್ನು ಗುರುತಿಸಬೇಕು.

–ಎಚ್‌.ವಿ. ದರ್ಶನ್‌, ಸಿಇಒ, ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT