ಶ್ರೀನಗರ ವಸತಿ ಯೋಜನೆ: ಫಲಾನುಭವಿಗಳ ಹೊಸ ಪಟ್ಟಿ ತಯಾರಿಸಲು ಶಾಸಕರ ಸೂಚನೆ

ಭಾನುವಾರ, ಮೇ 26, 2019
32 °C

ಶ್ರೀನಗರ ವಸತಿ ಯೋಜನೆ: ಫಲಾನುಭವಿಗಳ ಹೊಸ ಪಟ್ಟಿ ತಯಾರಿಸಲು ಶಾಸಕರ ಸೂಚನೆ

Published:
Updated:

ಬೆಳಗಾವಿ: ವಸತಿ ಯೋಜನೆಯಡಿ ಇಲ್ಲಿನ ಶ್ರೀನಗರದಲ್ಲಿ ನಿರ್ಮಿಸಲಾಗಿರುವ ಮನೆಗಳ ಹಸ್ತಾಂತರ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದ್ದು, ಅರ್ಹ ಫಲಾನುಭವಿಗಳ ಹೊಸ ಪಟ್ಟಿಯನ್ನು ಸದ್ಯದಲ್ಲಿಯೇ ಸಿದ್ಧ ಪಡಿಸಲಾಗುವುದು ಎಂದು ಶಾಸಕ ಅನಿಲ ಬೆನಕೆ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ತಯಾರಿಸಲಾಗಿದ್ದ ಫಲಾನುಭವಿಗಳ ಮೂರೂ ಪಟ್ಟಿಯಲ್ಲಿ ಶ್ರೀಮಂತರು, ಅನರ್ಹರು ಸೇರಿಕೊಂಡಿದ್ದಾರೆ. ಇವರನ್ನೆಲ್ಲ ತೆಗೆದುಹಾಕಿ, ಅರ್ಹ ಫಲಾನುಭವಿಗಳ ಹೊಸ ಪಟ್ಟಿ ತಯಾರಿಸಲಾಗುವುದು. ವಸತಿ ಯೋಜನೆಗಳಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಇವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕನಾದ ನನ್ನನ್ನೂ ಒಳಗೊಂಡಂತೆ ಸಮಿತಿಯ ಸದಸ್ಯರೆಲ್ಲರೂ ಸೇರಿಕೊಂಡು ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇವೆ’ ಎಂದು ತಿಳಿಸಿದರು.

‘ನನ್ನ ಬಳಿ ವ್ಯಕ್ತಿಯೊಬ್ಬರು ₹ 50 ಲಕ್ಷ ನೀಡಿ ಸೈಟ್‌ ಖರೀದಿಸಿದ್ದರು. ಆ ವ್ಯಕ್ತಿಯ ಹೆಸರೂ ಈ ಫಲಾನುಭವಿಗಳ ಪಟ್ಟಿಯಲ್ಲಿದೆ. ಈ ಪಟ್ಟಿ ಸರಿಯಾಗಿಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?’ ಎಂದು ಪ್ರಶ್ನಿಸಿದರು.

ನಾನೇ ತಡೆದೆ:

‘ಜಿಲ್ಲಾಧಿಕಾರಿಯವರು ಈ ಮನೆಗಳನ್ನು ಹಸ್ತಾಂತರಿಸಲು ಮುಂದಾಗಿದ್ದರು. ಆದರೆ, ಫಲಾನುಭವಿಗಳ ಆಯ್ಕೆಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂದು ಹಸ್ತಾಂತರಿಸದಂತೆ ತಡೆಹಿಡಿದೆ. ಜಿಲ್ಲಾಧಿಕಾರಿಯವರು ಮಾತು ಕೇಳದಿದ್ದಾಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ನೀತಿ ಸಂಹಿತೆ ಸಮಯದಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಬಾರದೆಂದು ಒತ್ತಾಯಿಸಿದೆ. ನನ್ನ ಮನವಿಯನ್ನು ಪುರಸ್ಕರಿಸಿದ ಚುನಾವಣಾ ಆಯೋಗ ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತು’ ಎಂದು ಅವರು ವಿವರಿಸಿದರು.

ಕೋಮು ಗಲಭೆ ನಡೆದಿಲ್ಲ:

‘ಶಾಸಕನಾಗಿ ಒಂದು ವರ್ಷ ಕಳೆಯಿತು. ಈ ಸಮಯದಲ್ಲಿ ಒಂದೂ ಕೋಮು ಗಲಭೆ ಉಂಟಾಗಲು ಅವಕಾಶ ನೀಡಿಲ್ಲ. ಕ್ಷೇತ್ರದ ಜನರು ಶಾಂತಿ ನೆಮ್ಮದಿಯಿಂದ ಇದ್ದಾರೆ’ ಎಂದರು.

‘ಪಾಂಗುಳ ಗಲ್ಲಿ ಸೇರಿದಂತೆ ಹಲವು ಕಡೆ ರಸ್ತೆ ವಿಸ್ತರಣೆ ಮಾಡಲಾಗಿದೆ. ನೀತಿ ಸಂಹಿತೆ ಮುಗಿದ ತಕ್ಷಣ ಭೇಂಡಿ ಬಜಾರ್‌ದಲ್ಲಿಯೂ ರಸ್ತೆ ವಿಸ್ತರಣೆ ಕೈಗೊಳ್ಳಲಾಗುವುದು. ಸ್ಮಾರ್ಟ್‌ ಸಿಟಿ ಯೋಜನೆಯಡಿ ವಿವಿಧೆಡೆ ಕಾಮಗಾರಿಗಳು ನಡೆಯುತ್ತಿವೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೋಟೆ ಕೆರೆಯನ್ನು ಅಭಿವೃದ್ಧಿಪಡಿಸಲು ನೀಲ ನಕ್ಷೆ ತಯಾರಿಸಲಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಉತ್ತರ ಕ್ಷೇತ್ರದ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ₹ 285 ಲಕ್ಷ ಅನುದಾನ ಮಂಜೂರಾಗಿದ್ದು, ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

‘ರಾಕ್ಕಸಕೊಪ್ಪ ಹಾಗೂ ಹಿಡಕಲ್‌ ಜಲಾಶಯದಲ್ಲಿ ನೀರಿದ್ದು, ಈ ತಿಂಗಳ ಅಂತ್ಯದವರೆಗೆ ಸಮಸ್ಯೆ ಇಲ್ಲ. ಇರುವ ನೀರನ್ನೇ ಸಮರ್ಪಕವಾಗಿ ಪೂರೈಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಮುಂಗಾರು ಮಳೆ ಆರಂಭವಾಗುವವರೆಗೆ ಇದೇ ನೀರನ್ನು ಸರಿದೂಗಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !