ಗುರುವಾರ , ಸೆಪ್ಟೆಂಬರ್ 29, 2022
26 °C

ತವರು ಸೇರಿದ ಪತ್ನಿ ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಪತಿ ಈಗ ಪೊಲೀಸರ ಅತಿಥಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ ಜಿಲ್ಲೆ): ತವರು ಸೇರಿಕೊಂಡಿದ್ದ ಪತ್ನಿಯನ್ನು ಹೆದರಿಸಲು ರಿವಾಲ್ವರಿನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ವಿಜಯಪುರ ಜಿಲ್ಲೆಯ ಸಿಂಧಗಿ ನಿವಾಸಿ ಶಿವಾನಂದ ಕಾಲೆಬಾಗ ಬಂಧಿತ. ಸೋಮವಾರ ಸಂಜೆ ಪತ್ನಿಯ ತವರು ಮನೆ ಅಥಣಿಗೆ ಬಂದಿದ್ದ ಅವರು, ಗಾಳಿಯಲ್ಲಿ ಗುಂಡು ಹಾರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪತ್ನಿ ಪ್ರೀತಿ ಹಾಗೂ ಅವರ ಪಾಲಕರು ದೂರು ನೀಡಿದ್ದಾರೆ.

ನಡೆದಿದ್ದೇನು?
ಅಥಣಿಯವರಾದ ಪ್ರೀತಿ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿಯ ಶಿವಾನಂದ ಅವರ ಮದುವೆ ನಾಲ್ಕು ವರ್ಷಗಳ ಹಿಂದೆ ಆಗಿದೆ. ಇವರಿಗೆ ಮೂರು ವರ್ಷದ ಗಂಡುಮಗು ಕೂಡ ಇದೆ.
 
ಕೆಲವು ತಿಂಗಳಿನಿಂದ ಸಂಸಾರದಲ್ಲಿ ಬಿರುಕು ಮೂಡಿತ್ತು. ಪತಿ ಇನ್ನೊಬ್ಬ ಮಹಿಳೆ ಜತೆಗೆ ಸಂಬಂಧ ಹೊಂದಿದ್ದಾರೆ ಎಂದು ಸಂಶಯಗೊಂಡ ಪ್ರೀತಿ ಅವರು ಕೆಲವು ತಿಂಗಳಿಂದ ಅಥಣಿಗೆ ಬಂದು ತವರು ಸೇರಿಕೊಂಡಿದ್ದರು.

ಸೋಮವಾರ ಪತ್ನಿಯನ್ನು ಮರಳಿ ತನ್ನೊಂದಿಗೆ ಕರೆದುಕೊಂಡು ಹೋಗಲು ಶಿವಾನಂದ ಅಥಣಿಗೆ ಬಂದಿದ್ದರು. ಪ್ರೀತಿ ಅವರೊಂದಿಗೆ ಹೋಗಲು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಶಿವಾನಂದ ತಮ್ಮ ರಿವಾಲ್ವರ್ ತೆಗೆದು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.

"ನನ್ನೊಂದಿಗೆ ಬರದೇ ಇದ್ದರೆ ಉಳಿದ ಗುಂಡಿಗಳನ್ನು ನಿನ್ನ ತಲೆಗೆ ಹಾರಿಸಿ ನಾನು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಬೆದರಿಕೆ ಹಾಕಿದ. ಇದರಿಂದ ಬೆಚ್ಚಿಬಿದ್ದ ಪ್ರೀತಿ ಹಾಗೂ ಅವರ ಪಾಲಕರು ಅಥಣಿ ಠಾಣೆಗೆ ಧಾವಿಸಿ ದೂರು ನೀಡಿದರು.

ಆರೋಪಿಯನ್ನು ಬಂಧಿಸಿದ ಪೊಲೀಸರು ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.

"ಶಿವಾನಂದ ಅವರು ರಿವಾಲ್ವರ್ ಹೊಂದಲು ಪರವಾನಗಿ ಪಡೆದಿದ್ದಾರೆ. ಆದರೆ, ಅವರಿಗೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಅನುಮತಿ ಇದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು