ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಸುಧಾ ಮಂಗಲ ಮಹೋತ್ಸವ ಸಂಪನ್ನ

ಭಕ್ತರಿಂದ ಸಂಗ್ರಹಿಸಿದ ₹ 40 ಲಕ್ಷ ಉತ್ತರಾದಿಮಠಕ್ಕೆ ಸಮರ್ಪಣೆ
Last Updated 17 ನವೆಂಬರ್ 2019, 14:12 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬಿ.ಕೆ. ಮಾಡೆಲ್ ಪ್ರೌಢಶಾಲೆ ಆವರಣದಲ್ಲಿ ಪಾದುಕಾ ಮಹಾಸಮಾರಾಧನೆ ಸೇವಾ ಸಮಿತಿಯವರು ಆಯೋಜಿಸಿದ್ದ ‘ಅನುವ್ಯಾಖ್ಯಾನ ನ್ಯಾಯ ಸುಧಾಮಂಗಲ ಮಹೋತ್ಸವ’ ಮತ್ತು ಸತ್ಯಪ್ರಮೋದತೀರ್ಥ ಸ್ವಾಮೀಜಿ 23ನೇ ಪಾದುಕಾ ಮಹಾಸಮಾರಾಧನೆ’ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.

ವಿವಿಧ ವಿಷಯಗಳ ಕುರಿತು ಉಪನ್ಯಾಸ ಜರುಗಿತು. ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ರಾಮದೇವರ ಪೂಜೆ ನೆರವೇರಿಸಿ, ಭಕ್ತರಿಗೆ ಮುದ್ರಾಧಾರಣೆ ಮಾಡಿ ಅಕ್ಷತಾ ಪ್ರಸಾದ ನೀಡಿದರು.

ಸಾಲಿಗ್ರಾಮದ ಮಹತ್ವ ಕುರಿತು ಪಂ. ವರದಚಾರ್ಯ ಕರಣಂ ಮಾತನಾಡಿ, ‘ವಜ್ರಕಿರೀಟವೆಂಬ ಕೀಟಗಳು ತಮ್ಮ ಹಲ್ಲಿನಿಂದ ಸಾಲಿಗ್ರಾಮದಲ್ಲಿ ಚಕ್ರವನ್ನು ಬರೆಯುತ್ತವೆ. ಈ ಕೀಟ ಎರಡು ಚಕ್ರ ನಿರ್ಮಾಣ ಮಾಡಲು 60 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇಷ್ಟು ವರ್ಷಗಳ ವಿಶಿಷ್ಟ ಪ್ರಯತ್ನವನ್ನು ಒಂದು ಜೀವ ಮಾಡುತ್ತದೆಯಾದ್ದರಿಂದ ಸಾಲಿಗ್ರಾಮಕ್ಕೆ ಬಹಳಷ್ಟು ಮಹತ್ವವಿದೆ. ಪ್ರಯತ್ನವಿಲ್ಲದೇ ಯಾವುದನ್ನೂ ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಇದು ಸಾರುತ್ತದೆ’ ಎಂದು ತಿಳಿಸಿದರು.

‘ಬಲಿಹರಣ, ಮಹತಿ-ಮಾಹಿತಿ’ ಎಂಬ ವಿಷಯ ಕುರಿತು ಮಾತನಾಡಿದ ಪಂ. ಪುರಂದರಾಚಾರ್ಯ ಹಯಗ್ರೀವ, ‘ಜೀವನ ಸ್ವಾರ್ಥದಿಂದ ಕೂಡಿರಬಾರದು. ಗಿಡವು ತಾನೆಂದೂ ಹಣ್ಣು ತಿನ್ನುವುದಿಲ್ಲ. ನದಿಯು ನೀರು ತನಗೇ ಇರಲೆಂದು ಬಯಸುವುದಿಲ್ಲ. ಪ್ರಕೃತಿಯ ಸ್ವಾರ್ಥ ಮನೋಭಾವವನ್ನು ನಾವು ಕಲಿಯಬೇಕು’ ಎಂದರು.

‘ತೀರ್ಥಯಾತ್ರೆ: ಏಕೆ, ಹೇಗೆ?’ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಪಂ. ಗುರುರಾಜಾಚಾರ್ಯ ಕಮಲಾಪುರ, ‘ತೀರ್ಥಕ್ಷೇತ್ರಗಳನ್ನು ತಿರುಗುವುದು ಒಂದು ಸಾಧನೆ. ನಡೆದುಕೊಂಡು ಕ್ಷೇತ್ರಕ್ಕೆ ಹೋಗಿ ಅಲ್ಲಿ ನದಿಯಲ್ಲಿ ಸ್ನಾನ ಮಾಡಿ ಭಗವಂತನ ದರ್ಶನ ಮಾಡಬೇಕು. ಹೀಗೆ ಮೇಲಿಂದ ಮೇಲೆ ಮಾಡಿದಾಗ ಬಾಯಲ್ಲಿ ಭಗವಂತನ ನಾಮಸ್ಮರಣೆ ಬರುತ್ತದೆ. ತೀರ್ಥಕ್ಷೇತ್ರಗಳ ಯಾತ್ರೆಯಿಂದ ಪಾಪ ನಾಶವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ’ ಎಂದು ತಿಳಿಸಿದರು.

‘ಸಂಸ್ಕೃತ– ಸಂಸ್ಕೃತಿ’ ಗೋಷ್ಠಿಯಲ್ಲಿ ಮಾತನಾಡಿದ ಸತ್ಯಾತ್ಮತೀರ್ಥ ಸ್ವಾಮೀಜಿ, ‘ಭಗವಂತ ನಮ್ಮಿಂದ ಏನನ್ನೂ ಬಯಸಲಾರ ಎನ್ನುವುದನ್ನು ತಿಳಿದುಕೊಳ್ಳಬೇಕು. ಭಕ್ತಿಯು ಮುಕ್ತಿಗೆ ಸಾಧನ. ಜೀವನ ಸಾರ್ಥಕ ಮಾಡಿಕೊಳ್ಳಲು ಸಜ್ಜನರ ನಡುವೆ ಬಾಳಬೇಕು. ಧರ್ಮದಿಂದ ನಡೆಯಬೇಕು. ಭಗವಂತನನ್ನು ನೆನೆಯುತ್ತಿರಬೇಕು’ ಎಂದು ಸಲಹೆ ನೀಡಿದರು.

ಪಂ. ಅರುಣಾಚಾರ್ಯ ಕಾಖಂಡಕಿ, ‘ಭಾರತ ದೇಶದ ಕಣ ಕಣದಲ್ಲೂ ಸಂಸ್ಕೃತ ಭಾಷೆ ತುಂಬಿತ್ತು. ಎಲ್ಲ ಭಾಷೆಗಳಲ್ಲೂ ಸಭ್ಯ ಹಾಗೂ ಪರಿಣಾಮಕಾರಿ ಭಾಷೆ. ಹಿರಿಯರ ಭಾಷೆಯೇ ಕಿರಿಯರದ್ದೂ ಆಗಬೇಕಲ್ಲವೇ? ಸಂಸ್ಕೃತ ದೇವ ಭಾಷೆಯಾದ್ದರಿಂದ ಎಲ್ಲರ ಭಾಷೆಯಾಗಬೇಕು’ ಎಂದು ಹೇಳಿದರು.

ಪಂ. ಪ್ರದ್ಯುಮ್ನಾಚಾರ್ಯ ಮಾತನಾಡಿ, ‘ಸಂಸ್ಕೃತವನ್ನು ನಾವೂ ಕಲಿಯಬೇಕು, ಮಕ್ಕಳಿಗೂ ಕಲಿಸಬೇಕು’ ಎಂದು ಸಲಹೆ ನೀಡಿದರು.

ಸತ್ಯಧ್ಯಾನಾಚಾರ್ಯ ಕಟ್ಟಿ ‘ಗುರುವಿನ ಗುಲಾಮ’ ವಿಷಯದ ಬಗ್ಗೆ ಮಾತನಾಡಿದರು. ‘ನಮ್ಮನ್ನು ನಾವು ಸಂಪೂರ್ಣವಾಗಿ ಗುರುವಿಗೆ ಸಮರ್ಪಿಸಿಕೊಂಡರೆ ಏನನ್ನಾದರೂ ಸಾಧಿಸಲು ಸಾಧ್ಯ’ ಎಂದರು.

ಪಾದುಕಾ ಮಹಾಸಮಾರಾಧನಾ ಸಮಿತಿಯವರು ಭಕ್ತರಿಂದ ಸಂಗ್ರಹಿಸಿದ ₹ 40 ಲಕ್ಷ ರೂಪಾಯಿ ಚೆಕ್ ಅನ್ನು ಉತ್ತರಾದಿಮಠಕ್ಕೆ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT