‘ಜನರ ಗಮನ ಬೇರೆಡೆ ಸೆಳೆಯಲು ಮನುವಾದಿಗಳ ಯತ್ನ’

7
ಬಸವ ಪಂಚಮಿ ಆಚರಣೆ;

‘ಜನರ ಗಮನ ಬೇರೆಡೆ ಸೆಳೆಯಲು ಮನುವಾದಿಗಳ ಯತ್ನ’

Published:
Updated:
Deccan Herald

ಬೆಳಗಾವಿ:  ತಳ ಸಮುದಾಯದ ಮಹಾನ್‌ ನಾಯಕರ ಜನನ ಹಾಗೂ ಮರಣದ ದಿನಗಳನ್ನು ಜನಮಾನಸದಿಂದ ಮರೆಮಾಡಬೇಕೆನ್ನುವ ದುರುದ್ದೇಶದಿಂದಲೇ ಮನುವಾದಿಗಳು ಅವತ್ತೇ ಜಾತ್ರೆ, ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದರು.

ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ನಾಗಪಂಚಮಿಯ ದಿನವನ್ನು ಬಸವ ಪಂಚಮಿ ದಿನವಾಗಿ ಆಚರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ಲಿಂಗೈಕ್ಯ ದಿನವನ್ನು ಜನಮಾನಸದಿಂದ ಮರೆಸುವ ಸಲುವಾಗಿ ಆ ದಿನವನ್ನು ನಾಗ ಪಂಚಮಿ ದಿನವನ್ನಾಗಿ ಆಚರಿಸಲು ಆರಂಭಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನವನ್ನು (ಡಿಸೆಂಬರ್‌ 6) ಮರೆಮಾಚಲು ಬಾಬರಿ ಮಸೀದಿಯನ್ನು ಅವತ್ತೇ ಕೆಡವಲಾಯಿತು. ಅಂಬೇಡ್ಕರ್‌ ಅವರ ಸಂವಿಧಾನವನ್ನು ಸರ್ಕಾರ ಅಂಗೀಕರಿಸಿದ ದಿನವಾದ ಜನವರಿ 26ರ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

‘ಇದೇ ರೀತಿ ಕಥೆ, ಪುರಾಣಗಳಲ್ಲೂ ಮಾಡಲಾಗುತ್ತಿದೆ. ತಳ ವರ್ಗದ ರಾಜನಾದ ಬಲಿ ಚಕ್ರವರ್ತಿಯನ್ನು ನಾಶಪಡಿಸಿದ ದಿನವನ್ನು ಬಲಿಪಾಡ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಯಾರು ನಮ್ಮ ಏಳಿಗೆಗಾಗಿ ಹೋರಾಟ ಮಾಡಿದರೋ ಅಂತಹವರ ಅವಸಾನದ ದಿನವನ್ನು ನಾವೇ ಸಂಭ್ರಮದಿಂದ ಆಚರಿಸುವಂತೆ ಈ ಮನುವಾದಿಗಳು ಮಾಡಿದ್ದಾರೆ’ ಎಂದು ತಿಳಿಸಿದರು.

ಖಡ್ಗ ಹಿಡಿದು ಹೋರಾಡದವರನ್ನು ನಾಯಕರೆಂದು ಎತ್ತಿ ಆಡಿಸುತ್ತಿದ್ದೇವೆ. ಯಾರು ನಿಜವಾಗಿಯೂ ಹೋರಾಟ ಮಾಡಿದ್ದಾರೋ ಅಂತವರನ್ನು ಮೂಲೆಗೆ ತಳ್ಳಿದ್ದೇವೆ. ಬುದ್ಧ, ಬಸವ ಅಂಬೇಡ್ಕರ್‌ ಜೊತೆಗೂ ಇದೇ ರೀತಿ ನಡೆದುಕೊಳ್ಳಲಾಗಿದೆ. ಇದು ಈ ದೇಶದ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

‘ನಮಗೆ ಮಹಾನ್‌ ಪುರುಷರು ಮಾದರಿಯಾಗಿಲ್ಲ. ಚಿತ್ರ ನಟ ಕಿಚ್ಚ ಸುದೀಪ್‌, ಕ್ರಿಕೆಟಿಗ ಸಚಿನ್‌ ತೆಂಡೋಲ್ಕರ್‌, ಚಿತ್ರನಟಿ ಐಶ್ವರ್ಯ ರೈ ಅವರಂತಹ ದುಡ್ಡಿಗಾಗಿ ನಟನೆ ಮಾಡುವ ನಟರು, ಕ್ರಿಕೆಟ್‌ ಆಡುವವರು ನಮಗೆ ಆದರ್ಶವಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅತಿಥಿಗಳಾಗಿ ಆಗಮಿಸಿದ ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಎಲ್ಲ ಧರ್ಮ, ಜಾತಿಯವರನ್ನು ಒಳಗೊಂಡಿರುವ ಮಾನವ ಬಂಧುತ್ವ ವೇದಿಕೆಯು 21ನೇ ಶತಮಾನದ ಅನುಭವ ಮಂಟಪವಾಗಿದೆ ಎಂದು ಪ್ರಶಂಶಿಸಿದರು.

ಬುದ್ಧ, ಬಸವ ಸಾರಿದ ಸಮಾನತೆ ಸಂದೇಶವನ್ನೇ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಅಳವಡಿಸಿದ್ದರು. ಇದನ್ನು ಸಹಿಸದ ಮನುವಾದಿಗಳು ಇವತ್ತು ಸಂವಿಧಾನವನ್ನು ಸುಟ್ಟುಹಾಕುವಂತಹ ಕುಕೃತ್ಯಕ್ಕೆ ಇಳಿದಿದ್ದಾರೆ. ಇಂತಹ ಹೀನ ಕೆಲಸಕ್ಕೆ ಬುದ್ಧ, ಬಸವ, ಅಂಬೇಡ್ಕರ್‌ ಅವರ ಅನುಯಾಯಿಗಳನ್ನೇ ಬಳಸಿಕೊಳ್ಳುತ್ತಿರುವುದು ಆತಂಕ ಮೂಡಿಸುವಂತಹದ್ದು ಎಂದರು.

ಶರಣ ಚೇತನ ಸೇವಾ ಸಂಸ್ಥೆಯ ಇಬ್ರಾಹಿಂ ಮುಲ್ಲಾ, ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗ ವಿಭಾಗದ ನಿರ್ದೇಶಕ ಹೆಬ್ಬಾಲೆ ಕೆ. ನಾಗೇಶ ಅವರ ‘ಅಗ್ರಹಾರ’ ವೈಚಾರಿಕ ಕಾದಂಬರಿಯನ್ನು ಬಿಡುಗಡೆಗೊಳಿಸಲಾಯಿತು.

ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಮಹಾನಗರ ಪಾಲಿಕೆ ಸದಸ್ಯೆ ಸರಳಾ ಹೆರೆಕರ, ಇತರರು ಉಪಸ್ಥಿತರಿದ್ದರು. ಶಿಕ್ಷಕ ಮಹಾಂತೇಶ ತೋರಣಗಟ್ಟಿ ಸ್ವಾಗತಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !