ಶನಿವಾರ, ಮಾರ್ಚ್ 25, 2023
29 °C
ಬೈಲಹೊಂಗಲ ಪುರಸಭೆ 10ನೇ ವಾರ್ಡ್‌ ವ್ಯಾಪ್ತಿ

ಬೆಳಗಾವಿ: ಗೊಲ್ಲರಹಟ್ಟಿ ಬಡಾವಣೆಯಲ್ಲಿ ಹಲವು ಸಮಸ್ಯೆ

ರವಿ ಎಂ. ಹುಲಕುಂದ Updated:

ಅಕ್ಷರ ಗಾತ್ರ : | |

Prajavani

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಗೊಲ್ಲರಹಟ್ಟಿ ಬಡಾವಣೆ ನಿವಾಸಿಗಳು ಸಾಕಷ್ಟು ಸಮಸ್ಯೆಗಳ ನಡುವೆ ಹೆಣಗಾಡುತ್ತಿದ್ದಾರೆ. ಮೂಲಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ.

ಪುರಸಭೆ 10ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಈ ಬಡಾವಣೆ ಅನೈರ್ಮಲ್ಯದಿಂದ ಕೂಡಿದೆ. ಸರಿಯಾದ ಬೀದಿದೀಪಗಳಿಲ್ಲ. ತ್ಯಾಜ್ಯ, ಗಿಡಗಳಿಂದ ತುಂಬಿ ತುಳುಕುತ್ತಿರುವ ಗಟಾರಗಳಿಂದ ದುರ್ವಾಸನೆ ಹೊರಹೊಮ್ಮುತ್ತಿದೆ. ಇದರಿಂದಾಗಿ ವಿಪರೀತ ಪ್ರಮಾಣದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಭೀತಿಯನ್ನು ನಿವಾಸಿಗಳು ಎದುರಿಸುವಂತಾಗಿದೆ.

ಹಂದಿಗಳ ವ್ಯಾಪಾರ, ಚಿಂದಿ ಆಯುವುದನ್ನು ಉದ್ಯೋಗವಾಗಿಸಿಕೊಂಡಿರುವ ನಿವಾಸಿಗಳು ಅಗತ್ಯ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಉತ್ತಮ ವಾತಾವರಣಲ್ಲಿ ಜೀವನ ನಡೆಸಲು ಆಗದಂತಹ ಸ್ಥಿತಿ ಅಲ್ಲಿನದಾಗಿದೆ.

ಬಳಕೆ ಆಗುತ್ತಿಲ್ಲ: ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯಗಳು ಬೀದಿನಾಯಿ ಮತ್ತು ಹಂದಿಗಳ ವಾಸಸ್ಥಳವಾಗಿವೆ. ಬಹಳ ದುಃಸ್ಥಿತಿಯಲ್ಲಿರುವುದರಿಂದ ಆ ಶೌಚಾಲಯಗಳನ್ನು ಬಳಸುವುದಕ್ಕೆ ಜನರು ಮುಂದಾಗುತ್ತಿಲ್ಲ. ಪರಿಣಾಮ ಇದ್ದರೂ ಇಲ್ಲದಂತಾಗಿವೆ. ಕೆಲವರು ಅವುಗಳ ಸುತ್ತಮುತ್ತಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಕೂಡಲೇ ಅವುಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ನಿವಾಸಿಗಳು ಮತ್ತು ಸಾರ್ವಜನಿಕರ ಬಳಕೆಗೆ ದೊರೆಯುವಂತೆ ಮಾಡಬೇಕು ಎನ್ನುವುದು ನಿವಾಸಿಗಳ ಆಗ್ರಹವಾಗಿದೆ.

ದೊಡ್ಡ ಕೆರೆ ಪಕ್ಕದ ಸಾಯಿ ಮಂದಿರಕ್ಕೆ ತೆರಳುವ ಮುಖ್ಯ ರಸ್ತೆ ಬಹಳ ಹಾಳಾಗಿದೆ. ಗುಂಡಿಗಳಿಂದ ಕೂಡಿದೆ. ಪಕ್ಕದ ಚರಂಡಿಯಲ್ಲಿನ ಕೊಳಚೆ ನೀರು ರಸ್ತೆಯಲ್ಲಿ ಹರಿಯುವುದು ಸಾಮಾನ್ಯವಾಗಿದೆ. ಇದರಿಂದ ಜನರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಸಾಯಿ ಮಂದಿರಕ್ಕೆ ತೆರಳುವ ಭಕ್ತರು ರಸ್ತೆಯಲ್ಲಿ ಸಂಗ್ರಹವಾದ ಅಥವಾ ಹರಿಯುವ ಚರಂಡಿಯ ಕೊಳಚೆ ನೀರು ತುಳಿದುಕೊಂಡೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆಗಾಲದಲ್ಲೂ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸರ್ಕಸ್ ಮಾಡಿದಂತೆಯೇ ಸರಿ.

ತ್ಯಾಜ್ಯ ನಿರ್ವಹಣೆಯೂ ಸರಿಯಾಗಿಲ್ಲ: ತ್ಯಾಜ್ಯ ವಿಲೇವಾರಿ ಕಾರ್ಯವೂ ಇಲ್ಲಿ ಸರಿಯಾಗಿ ನಡೆಯುತ್ತಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿದಿರುವುದರಿಂದಲೂ ವಾತಾವರಣ ಹದಗೆಟ್ಟಿದೆ.

ಅಲ್ಲಲ್ಲಿ ಸಿಮೆಂಟ್ ರಸ್ತೆ ಇದೆ. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಕೆಲಸ ಆಗುತ್ತಿಲ್ಲ. ಬೀದಿದೀಪಗಳು ಆಗಾಗ ಕೆಟ್ಟು ಹೋಗುತ್ತಲೇ ಇರುತ್ತವೆ. ದುರಸ್ತಿಗೆ ಕ್ರಮ ಆಗುತ್ತಿಲ್ಲ. ಕುಡಿಯುವ ನೀರು ಪೂರೈಕೆಯಲ್ಲೂ ಆಗಾಗ ವ್ಯತ್ಯಯ ಕಂಡುಬರುತ್ತದೆ. ಸಂಬಂಧಿಸಿದ ಪುರಸಭೆ ಸದಸ್ಯರು ಮತ್ತು ‍ಅಧಿಕಾರಿಗಳು ಇತ್ತ ಗಮನಹರಿಸಬೇಕು. ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವುದು ನಿವಾಸಿಗಳ ಆಗ್ರಹವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ಸದಸ್ಯೆ ಉಮಾ ಹೊಸೂರ, ‘ಸದಸ್ಯೆ ಆದಾಗಿನಿಂದ ವಾರ್ಡ್ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದೇನೆ. ಅಲ್ಲಲ್ಲಿ ಕೆಲವು ತೊಂದರೆಗಳಿವೆ. ಅವುಗಳನ್ನೂ ಸರಿಪಡಿಸಲಾಗುವುದು. ಮಾದರಿ ವಾರ್ಡ್ ಆಗಿಸಲು ಹೆಚ್ಚಿನ ಒತ್ತು ನೀಡಿದ್ದೇನೆ. ಸ್ವಲ್ಪ ಸಮಯ ಬೇಕು. ನಿವಾಸಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಸಹಕರಿಸಬೇಕು’ ಎಂದು ತಿಳಿಸಿದರು.

ಗಮನಹರಿಸುತ್ತಿಲ್ಲ
ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳ ಕೊರತೆ ಇದೆ. ಚರಂಡಿಗಳ ನಿರ್ವಹಣೆ ನಡೆಯುತ್ತಿಲ್ಲ. ಸ್ವಚ್ಛತೆಗೂ ಗಮನ ಕೊಡುತ್ತಿಲ್ಲ.
-ದುರ್ಗಪ್ಪ ಗೊಲ್ಲರ, ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು