ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಳಿಕೆಯಾಗದ ತಾಯಿ, ಶಿಶು ಮರಣ ಪ್ರಮಾಣ’

‘ಮಾನ್ಯತಾ ಕೇಂದ್ರಿಕೃತ ತರಬೇತಿ’ ಕಾರ್ಯಕ್ರಮ
Last Updated 10 ಡಿಸೆಂಬರ್ 2019, 16:13 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದಲ್ಲಿ ತಾಯಿ ಮತ್ತು ಮಗುವಿನ ಮರಣ ಪ್ರಮಾಣದಲ್ಲಿ ನಿರೀಕ್ಷಿತ ಪ್ರಮಾಣದ ಇಳಿಕೆ ಕಂಡುಬಂದಿಲ್ಲ’ ಎಂದು ಬೆಂಗಳೂರಿನ ದಿವಾಕರ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ.ಹೇಮಾ ದಿವಾಕರ ಹೇಳಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಮಾನ್ಯತಾ ಕೇಂದ್ರಿಕೃತ ತರಬೇತಿ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

‘ಗರ್ಭಾವಸ್ಥೆಯಿಂದ ಹಿಡಿದು ಹೆರಿಗೆವರೆಗೆ ಸ್ತ್ರೀಯರಲ್ಲಿ ಸಹಜವಾಗಿಯೇ ಕೆಲವು ಬದಲಾವಣೆಗಳಾಗುತ್ತವೆ. ಅವು ಆಕೆ ಅಥವಾ ಶಿಶುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ’ ಎಂದು ತಿಳಿಸಿದರು.

‘2013ರಲ್ಲಿ ಪ್ರತಿ ಲಕ್ಷ ಹೆರಿಗೆಗಳಲ್ಲಿ 342 ತಾಯಂದಿರು ಮರಣ ಹೊಂದಿದ್ದರು. 2017ರ ಸಮೀಕ್ಷೆ ಪ್ರಕಾರ ಪ್ರತಿ ವರ್ಷ ಸರಾಸರಿ 211 ತಾಯಂದಿರು ವೈದ್ಯಕೀಯ ಹಾಗೂ ಮತ್ತಿತರ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಇನ್ನಷ್ಟು ಹತೋಟಿಗೆ ತರಲು ಶ್ರಮಿಸಬೇಕಾಗಿದೆ’ ಎಂದರು.

ಹಿರಿಯ ವೈದ್ಯ ಡಾ.ಎಚ್‌.ಬಿ. ರಾಜಶೇಖರ ಮಾತನಾಡಿ, ‘ತಾಯ್ತನವೆಂಬುದು ಸ್ತ್ರೀ ಸಂಕುಲಕ್ಕೆ ಒಂದು ವರದಾನವೇ ಸರಿ. ಆದರೆ, ಇತ್ತೀಚೆಗೆ ವ್ಯಾಯಾಮರಹಿತ ಜೀವನ, ಆಧುನಿಕ ಜೀವನಶೈಲಿ, ಪೋಷಕಾಂಶಗಳ ಸೇವನೆಯ ಕೊರತೆಯಿಂದಾಗಿ ಸಹಜ ಹೆರಿಗೆ (ನಾರ್ಮಲ್‌ ಡೆಲಿವರಿ) ಪ್ರಮಾಣ ಕಡಿಮೆಯಾಗಿದೆ. ಕೆಲವು ಕ್ಲಿಷ್ಟಕರ ಸಂದರ್ಭಗಳಲ್ಲಿ ಸಿಸೇರಿಯನ್ ಹೆರಿಗೆಗಳಿಗೆ ಮೊರೆ ಹೋದರೂ ತಾಯಿ ಹಾಗೂ ಶಿಶುವಿನ ಮರಣದ ಸಂಖ್ಯೆ ಕಡಿಮೆಯಾಗಿಲ್ಲ. ವೈಜ್ಞಾನಿಕ ತಳಹದಿ ಆಧಾರದ ಮೇಲೆ ಹೆರಿಗೆ ಪದ್ಧತಿ ಅನುಸರಿಸುವ ಮೂಲಕ ತಾಯಿ ಹಾಗೂ ಶಿಶುವಿನ ಮರಣದ ಸಂಖ್ಯೆಯನ್ನು ಹತೋಟಿಗೆ ತರಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ, ‘ಕರ್ನಾಟಕದಲ್ಲಿ ಲಕ್ಷ ಜೀವಂತ ಜನನಗಳಿಗೆ ಸುಮಾರು 100 ತಾಯಂದಿರು ಮರಣ ಹೊಂದುತ್ತಿದ್ದಾರೆ ಹಾಗೂ ಶಿಶು ಮರಣದ ಪ್ರಮಾಣವು 25 ಇದೆ. ಇವೆರಡನ್ನೂ ಕಡಿಮೆ ಮಾಡುವಲ್ಲಿ ಮಾನ್ಯತಾ ಕಾರ್ಯಕ್ರಮವು ಖಾಸಗಿ ವೈದ್ಯರು ಹಾಗೂ ಶುಶ್ರೂಷಕಿಯರಿಗೆ ತರಬೇತಿ ನೀಡುವಲ್ಲಿ ಸರ್ಕಾರದದೊಂದಿಗೆ ಮಹತ್ತರ ಪಾತ್ರ ವಹಿಸುತ್ತಿದೆ’ ಎಂದರು.

ಹಿರಿಯ ವೈದ್ಯ ಡಾ.ಬಿ.ಎಸ್. ಮಹಾಂತಶೆಟ್ಟಿ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ ಮುಖ್ಯಸ್ಥೆ ಡಾ.ರಾಜೇಶ್ವರಿ ಕಡಕೋಳ, ಡಾ.ದರಶಿತ ಶೆಟ್ಟಿ, ಡಾ.ಸತೀಶ ದಾಮನಕರ, ಡಾ.ವಿದ್ಯಾ ಕಾಖಂಡಕಿ, ಡಾ.ಕೆ.ಎನ್. ಹುಲಿಕಟ್ಟಿ, ಡಾ.ಮುಕ್ತಾ, ಡಾ.ರವೀಂದ್ರ ನರಸಾಪೂರ ಇದ್ದರು.ಡಾ.ವಿದ್ಯಾ ನಿರೂಪಿಸಿದರು. ಡಾ.ಮುಕ್ತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT