ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿ ಚಿತ್ರದಲ್ಲಿ ಕನ್ನಡಿಗರ ಭಾವನೆಗೆ ಧಕ್ಕೆ ತರುವಂಥ ಸಂಭಾಷಣೆ: ಕರವೇ ಪ್ರತಿಭಟನೆ

‘ಬಾಯ್ಸ್-3’ ಚಲನಚಿತ್ರ ಪ್ರದರ್ಶನಕ್ಕೆ ವಿರೋಧ
Last Updated 16 ಸೆಪ್ಟೆಂಬರ್ 2022, 10:21 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡಿಗರ ಭಾವನೆ ಕೆರಳಿಸುವ ಹಾಗೂ ಕರ್ನಾಟಕ ಪೊಲೀಸರ ಬಗ್ಗೆ ಹಗುರವಾದ ಸಂಭಾಷಣೆ ಇರುವ ಮರಾಠಿ ಚಲನಚಿತ್ರ ‘ಬಾಯ್ಸ್‌–3’ಯನ್ನು ರಾಜ್ಯದಲ್ಲಿ ಪ್ರದರ್ಶನ ಮಾಡಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಚಲನಚಿತ್ರದ ಬಹುಪಾಲು ಭಾಗ ಕರ್ನಾಟಕದಲ್ಲೇ ಚಿತ್ರೀಕರಣವಾಗಿದೆ. ಆದರೆ, ಕೆಲವು ದೃಶ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಗಡಿ ಸಮಸ್ಯೆ ಕೆದಕುವ ಪ್ರಯತ್ನ ಮಾಡಲಾಗಿದೆ. ‘ಮರಾಠಿಯ ಗತ್ತನ್ನು ಬೆಳಗಾವಿಯಲ್ಲಿ ಅಲ್ಲದೇ ಇನ್ನೆಲ್ಲಿ ತೋರಿಸಬೇಕು’ ಎಂದು ನಾಯಕ ನಟನು ಬೆಳಗಾವಿ ಪೊಲೀಸ್‌ ಅಧಿಕಾರಿಗೆ ಗದರಿಸುವ ದೃಶ್ಯವಿದೆ. ಉದ್ದೇಶಪೂರ್ವಕವಾಗಿ ಇದೇ ದೃಶ್ಯವನ್ನು ಟ್ರೈಲರ್‌ನಲ್ಲಿ ಹರಿಬಿಡಲಾಗಿದೆ. ಇದು ಕನ್ನಡ ನಾಡಿಗೆ, ಭಾಷೆಗೆ ಮಾಡಿದ ಲೇವಡಿ ಎಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಕನ್ನಡಿಗರ ಭಾವನೆಗೆ ಧಕ್ಕೆಯಾಗುಂಥ ಕೆಲವು ದೃಶ್ಯಗಳನ್ನು ಬೇಕೆಂತಲೇ ಈ ಭಾಗದಲ್ಲಿ ಹರಿಬಿಡಲಾಗಿದೆ. ಆದ್ದರಿಂದ ಚಿತ್ರ ಎಲ್ಲಿ ತೆರೆ ಕಾಣುತ್ತದೆಯೋ ಅಲ್ಲಿಗೇ ಹೋಗಿ ನಿಲ್ಲಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರದ ಪೊಲೀಸ್‌ ಕಮಿಷನರ್‌ ಡಾ.ಎಂ.ಬಿ.ಬೋರಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಸುರೇಶ ಗಾವಣ್ಣವರ ನೇತೃತ್ವ ವಹಿಸಿದ್ದರು.

ತೆರೆ ಕಾಣದ ಚಿತ್ರ: ಮಹಾರಾಷ್ಟ್ರದಾದ್ಯಂತ ಶುಕ್ರವಾರ ತೆರೆಕಂಡ ‘ಬಾಯ್ಸ್‌–3’ ಮರಾಠಿ ಚಲನಚಿತ್ರ ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲಿಯೂ ಪ್ರದರ್ಶನ ಕಾಣಲಿಲ್ಲ. ಈ ಹಿಂದೆ ಬಂದ ‘ಬಾಯ್ಸ್‌–1’ ಹಾಗೂ ‘ಬಾಯ್ಸ್–2’ ಚಿತ್ರಗಳು ರಾಜ್ಯದಲ್ಲಿ ಪ್ರದರ್ಶನ ಕಂಡಿದ್ದವು. ಹಾಸ್ಯ ಪ್ರಧಾನ ಈ ಚಿತ್ರಗಳ ಮೂರನೇ ಸರಣಿಯಲ್ಲಿ ಕನ್ನಡಿಗರ ಬಗ್ಗೆ ಲೇವಡಿ ಮಾಡಲಾಗಿದೆ ಎಂಬ ಕಾರಣಕ್ಕೆ ಚಿತ್ರಪ್ರದರ್ಶನಕ್ಕೆ ಯಾರೂ ಮುಂದೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT