ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯ ಕಾಲ: ತರಕಾರಿ ತುಟ್ಟಿ

ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ ಬೆಲೆ ಕುಸಿತ
Last Updated 3 ಜನವರಿ 2019, 19:32 IST
ಅಕ್ಷರ ಗಾತ್ರ

ಬೆಳಗಾವಿ: ಮದುವೆ ಮೊದಲಾದ ಶುಭ ಕಾರ್ಯಗಳ ಸೀಸನ್‌ ಆರಂಭವಾಗಿರುವುದರಿಂದಾಗಿ ಇಲ್ಲಿನ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು ಹಾಗೂ ಹೂವಿನ ಬೆಲೆ ಏರಿಕೆಯಾಗಿದೆ.

ತರಕಾರಿಗಳ ಬೆಲೆ ಕನಿಷ್ಠ ₹ 5 ಜಾಸ್ತಿಯಾಗಿದೆ. ಇತ್ತೀಚೆಗೆ ಮೂಲಂಗಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಕೆ.ಜಿ. ₹ 20ಕ್ಕೆ ಮಾರಲಾಗುತ್ತಿದೆ. ಸಗಟು ಮಾರುಕಟ್ಟೆಗೆ ಹೋಲಿಸಿದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಇನ್ನೂ ಕೊಂಚ ದುಬಾರಿಯೇ ಇದೆ.

‘ಹೊಸ ವರ್ಷಕ್ಕೆ ಮುಂಚಿನಿಂದಲೂ ತರಕಾರಿಗಳ ದರ ಜಾಸ್ತಿಯಾಗಿತ್ತು. ಮದುವೆ ಸೀಸನ್ ಕೂಡ ಇದಾಗಿರುವುದರಿಂದ, ಬೇಡಿಕೆ ಜಾಸ್ತಿ ಇದೆ. ಇದರಿಂದಾಗಿ ಸಹಜವಾಗಿಯೇ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಇನ್ನೂ ಕೆಲವು ದಿನಗಳವರೆಗೆ ಕಿಲೋಗೆ ₹ 2ರಿಂದ ₹ 3 ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ತರಕಾರಿ ವ್ಯಾಪಾರಿ ಪ್ರಶಾಂತ್‌ ಮರಗಿ ತಿಳಿಸಿದರು.

ಆಂಧ್ರಪ್ರದೇಶದಿಂದ:ಸೇಬು ಕನಿಷ್ಠ ₹ 100ರಿಂದ ಗರಿಷ್ಠ ₹ 180ರವರೆಗೆ ಇತ್ತು. ದಾಳಿಂಬೆಯೂ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಬೆಲೆಯಲ್ಲೇನೂ ಇಳಿಕೆಯಾಗಿಲ್ಲ. ಕೆ.ಜಿ.ಗೆ ₹ 100 ಇತ್ತು. ಕಿತ್ತಳೆ ಹಣ್ಣು ಕೆ.ಜಿ.ಗೆ ₹ 60ರಿಂದ ₹ 70 ಇದೆ.

ಸಾಮಾನ್ಯವಾಗಿ ಚಳಿಗಾಲ ಮುಗಿದ ನಂತರ ಸಿಗುತ್ತಿದ್ದ ಕಲ್ಲಂಗಡಿ ಈಗಾಗಲೇ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿಯೇ ದಾಂಗುಡಿ ಇಟ್ಟಿದೆ. ವ್ಯಾಪಾರಿಗಳು ನಗರದ ಅಲ್ಲಲ್ಲಿ ರಸ್ತೆಬದಿಯಲ್ಲಿ ಗುಡ್ಡೆ ಹಾಕಿಕೊಂಡು ಮಾರುತ್ತಿರುವುದು ಕಂಡುಬರುತ್ತಿದೆ. ಅವರು ಹಣ್ಣೊಂದಕ್ಕೆ (ಗಾತ್ರ ಆಧರಿಸಿ) ₹ ಕನಿಷ್ಠ ₹ 30ರಿಂದ ₹ 60ರವರೆಗೆ ಮಾರಾಟ ಮಾಡುತ್ತಿದ್ದಾರೆ. ‘ಸ್ಥಳೀಯವಾಗಿ ಈ ಹಣ್ಣು ದೊರೆಯಲು ಇನ್ನೂ ಸಮಯ ಬೇಕು. ನಾವು ಆಂಧ್ರಪ್ರದೇಶದಿಂದ ತರಿಸಿದ್ದೇವೆ. ಬಹಳ ಸಿಹಿ ಇದೆ. ಚಳಿಗಾಲವಾದರೂ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.

ರೈತರಿಗೆ ದೊರೆಯದ ಹೆಚ್ಚಿನ ಬೆಲೆ:ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರ ಈರುಳ್ಳಿ ಹಾಗೂ ಆಲೂಗಡ್ಡೆಗೆ ಬುಧವಾರ ಕಡಿಮೆ ಬೆಲೆ ದೊರೆಯಿತು. ಇದರಿಂದ ರೈತರು ತೀವ್ರ ನಷ್ಟ ಅನುಭವಿಸಬೇಕಾಯಿತು. ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ವಿಂಟಲ್‌ ಜವಾರಿ ಈರುಳ್ಳಿಗೆ ₹ 1200ರವರೆಗೆ ದರ ಸಿಕ್ಕಿತ್ತು. ಬುಧವಾರ ₹ 400ರಿಂದ ₹ 500ಕ್ಕೆ ಕುಸಿದಿತ್ತು. ಅಂತೆಯೇ ಆಲೂಗಡ್ಡೆ ಬೆಲೆಯು ₹ 1900ರಿಂದ ₹ 700ರಿಂದ ₹ 800ಕ್ಕಷ್ಟೇ ಮಾರಾಟವಾಯಿತು. ಆದರೆ, ಸಿಹಿ ಗೆಣಸಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿತು. ಹೋದ ವಾರ ₹ 200ರಿಂದ ₹400ರವರೆಗೆ ಇದ್ದ ದರ ₹ 300– ₹600ಕ್ಕೆ ನೆಗೆತ ಕಂಡಿತು.

ಎಪಿಎಂಸಿಗೆ, ಬುಧವಾರ ₹ 2520 ಕ್ವಿಂಟಲ್‌ ಈರುಳ್ಳಿ, 3080 ಕ್ವಿಂಟಲ್ ಆಲೂಗಡ್ಡೆ ಹಾಗೂ ₹ 3800 ಕ್ವಿಂಟಲ್‌ ಸಿಹಿಗೆಣಸು ಆವಕವಾಗಿದೆ. ಮುಂದಿನ ದಿನಗಳಲ್ಲೂ ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಏರಿಕೆ ಕಂಡುಬರುವ ಸಾಧ್ಯತೆ ಕಡಿಮೆ ಇದೆ.

ಬಾಂಗಡೆ ಮೀನು ದರದಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಕೆ.ಜಿ.ಗೆ ₹ 140ರಿಂದ ₹ 160 ಇತ್ತು. ಸೀಗಡಿ ₹ 300ರಿಂದ ₹ 350ಕ್ಕೆ, ಸುರಮಯಿ ₹ 450ರಿಂದ ₹ 850ರವರೆಗೆ ಇತ್ತು. ಸಗಟು ಮಾರುಕಟ್ಟೆಯಲ್ಲಿ ಮೊಟ್ಟೆ ಡಜನ್‌ಗೆ ₹ 58, ಕೋಳಿ ಮಾಂಸ ಕೆ.ಜಿ.ಗೆ ₹ 160, ಮಟನ್‌ ಕೆ.ಜಿ.ಗೆ ₹ 460ರ ಆಸುಪಾಸಿನಲ್ಲಿದೆ.

ದರ ವಿವರ
ತರಕಾರಿ;ಕಳೆದ ವಾರ ದರ (ಕೆ.ಜಿ.ಗೆ-₹ಗಳಲ್ಲಿ);ಈ ವಾರ ದರ (ಕೆ.ಜಿ.ಗೆ–₹ಗಳಲ್ಲಿ)

ಟೊಮೆಟೊ; 15–20;25–30

ಈರುಳ್ಳಿ; 15–20;20

ಆಲೂಗಡ್ಡೆ; 20;25-30

ಬದನೆಕಾಯಿ; 30–40;35-40

ಬೀನ್ಸ್‌; 40;40

ಬೆಂಡೆಕಾಯಿ; 40;40–45

ಸಿಹಿ ಗೆಣಸು; 15–20;20–22

ಕ್ಯಾರೆಟ್; 20–25;35–40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT