ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಸಂತೆಯಲ್ಲಿ ಮಾಸ್ಕ್‌: ಕ್ರಮಕ್ಕೆ ಸೂಚನೆ

Last Updated 16 ಮಾರ್ಚ್ 2020, 12:23 IST
ಅಕ್ಷರ ಗಾತ್ರ

ಬೆಳಗಾವಿ: ‘ಕೊರೊನಾ ವೈರಸ್ ಸೋಂಕುಹರಡುವ ಭೀತಿ ಇರುವುದರಿಂದಾಗಿ, ಕಾಳಸಂತೆಯಲ್ಲಿ ಮಾಸ್ಕ್‌ಗಳನ್ನು (ಮುಖಗವಸು) ಮಾರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಆರೋಗ್ಯ ಶಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ವೈರಾಣು ಸೋಂಕು ಹರಡದಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಕೆಲವರು ಸಾರ್ವಜನಿಕರ ಜೀವನದೊಂದಿಗೆ ಚೆಲ್ಲಾ ಆಡುತ್ತಿದ್ದಾರೆ. ಮನಬಂದಷ್ಟು ಬೆಲೆಯಲ್ಲಿ ಮಾಸ್ಕ್‌ಗಳನ್ನು ಮಾರುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದಲೂ ಬಹಳಷ್ಟು ದೂರುಗಳು ಕೇಳಿಬರುತ್ತಿವೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಸರ್ಕಾರವು, ಒಂದು ವಾರದವರೆಗೆ ಕರ್ನಾಟಕ ಬಂದ್ ಮಾಡಿ ನಿಗಾ ವಹಿಸಿದೆ. ಈ ನಡುವೆಯೂ ಬೆಳಗಾವಿಯಲ್ಲಿ ಕೆಲವು ಕಾಲೇಜುಗಳನ್ನು ನಡೆಸುತ್ತಿದ್ದಾರೆ ಎನ್ನುವ ದೂರುಗಳಿವೆ. ಖಾಸಗಿ ಕಾಲೇಜುಗಳ ಮೇಲೆ ನಿಗಾ ಇಡಬೇಕು’ ಎಂದು ಸೂಚಿಸಿದರು.

‘ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಪೌರಕಾರ್ಮಿಕರಿಗೆ ಮಾಸ್ಕ್ ನೀಡಬೇಕು. ಅಧಿಕಾರಿಗಳು ಸಹ ಕಾಳಜಿ ತೆಗೆದುಕೊಳ್ಳಬೇಕು’ ಎಂದರು.

ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಉಪ ಆಯುಕ್ತ ಲಕ್ಷ್ಮಿ ಸುಳಗೇಕರ, ಪಾಲಿಕೆ ಆರೋಗ್ಯಾಧಿಕಾರಿ ಸಂಜಯ ಡುಮ್ಮಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT