‘ಸ್ಮಾರ್ಟ್‌ ಸಿಟಿ’ಯಡಿ ಪ್ರಸೂತಿ ಆಸ್ಪತ್ರೆ

6
₹ 2.25 ಕೋಟಿ ವೆಚ್ಚದಲ್ಲಿ ನಿರ್ಮಾಣ

‘ಸ್ಮಾರ್ಟ್‌ ಸಿಟಿ’ಯಡಿ ಪ್ರಸೂತಿ ಆಸ್ಪತ್ರೆ

Published:
Updated:
Deccan Herald

ಬೆಳಗಾವಿ: ಇಲ್ಲಿನ ವಂಟಮೂರಿ ಬಡಾವಣೆಯಲ್ಲಿರುವ ಸಾಯಿಮಂದಿರದ ಎದುರಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಸಿಟಿ ಯೋಜನೆ’ಯಡಿ ಅತ್ಯಾಧುನಿಕ ಪ್ರಸೂತಿ ಆಸ್ಪತ್ರೆ ತಲೆಎತ್ತಲಿದೆ. ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ವರ್ಷದೊಳಗೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.

ನಗರದಲ್ಲಿ ಜಿಲ್ಲಾಸ್ಪತ್ರೆ ಇದೆ. ಅದರ ಆವರಣದಲ್ಲೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನೂ ನಿರ್ಮಿಸಲಾಗುತ್ತಿದೆ. ಆದರೆ, ವಂಟಮೂರಿ ಭಾಗದಲ್ಲಿರುವ ಬಡಾವಣೆಗಳು, ಕೊಳೆಗೇರಿಗಳ ನಿವಾಸಿಗಳ ಹಾಗೂ ಸುತ್ತಮುತ್ತಲ ಗ್ರಾಮಗಳವರ ಅನುಕೂಲಕ್ಕಾಗಿ ಅಲ್ಲಿ ಆಸ್ಪತ್ರೆ ಕಟ್ಟಲಾಗುತ್ತಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ದೊರೆಯಲಿರುವ ₹ 1ಸಾವಿರ ಕೋಟಿ ಅನುದಾನದಲ್ಲಿ ಆರೋಗ್ಯ ಸೇವೆಗೂ ಇಂತಿಷ್ಟು ಹಣ ದೊರೆಯಲಿದೆ. ಈ ಪ್ರಸೂತಿ ಆಸ್ಪತ್ರೆಗೆ ₹ 2.25 ಕೋಟಿ ಅನುದಾನ ಒದಗಿಸಲಾಗಿದೆ.

ಏನೇನು ಸೌಲಭ್ಯ: ‘30 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ನಿರಂತರ 24 ಗಂಟೆಗಳ ಹೆರಿಗೆ ಸೌಲಭ್ಯ, ಆಪರೇಷನ್‌ ಥಿಯೇಟರ್‌, ನವಜಾತ ಶಿಶುಗಳ ಆರೈಕೆ ಕೇಂದ್ರ, ಅಲ್ಟ್ರಾಸೌಂಡ್‌, ಸ್ಕ್ಯಾನಿಂಗ್ ಕೊಠಡಿಗಳು, ಹೆರಿಗೆ ವಾರ್ಡ್‌ಗಳು, ನವಜಾತ ಶಿಶುಗಳ ತುರ್ತು ನಿಗಾ ಘಟಕ, ಲೇಬರ್‌ ವಾರ್ಡ್‌ಗಳನ್ನು ನಿರ್ಮಿಸಲಾಗುವುದು. ಖಾಸಗಿ ಆಸ್ಪತ್ರೆಗಳಂತೆ ಸರ್ಕಾರಿ ಆಸ್ಪತ್ರೆಯಲ್ಲೂ ಸೌಲಭ್ಯ ದೊರೆಯುವಂತಾಗಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿದೆ’ ಎಂದು ಸ್ಮಾರ್ಟ್‌ ಸಿಟಿ ಕಂಪನಿಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಮಿತಿ ಸಲಹೆಯಂತೆ: ‘ಇದರಿಂದ ವಂಟಮೂರಿ ಕಾಲೊನಿ, ರುಕ್ಮಿಣಗರ, ಕಣಬರಗಿ ಮೊದಲಾದ ಬಡಾವಣೆಗಳವರು ಜಿಲ್ಲಾಸ್ಪತ್ರೆಗೆ ಬರುವುದು ತಪ್ಪುತ್ತದೆ. ಕಟ್ಟಡ ನಿರ್ಮಿಸಿ, ಅಗತ್ಯ ಯಂತ್ರಗಳನ್ನು ಅಳವಡಿಸಿ, ಮೂಲಸೌಲಭ್ಯ ಒದಗಿಸುವ ಕೆಲಸವನ್ನಷ್ಟೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಾಡಲಾಗುವುದು. ನಂತರ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು’ ಎಂದು ತಿಳಿಸಿದರು.

‘ಡಿಎಚ್‌ಒ, ಜಿಲ್ಲಾ ಸರ್ಜನ್, ಬಿಮ್ಸ್‌ ನಿರ್ದೇಶಕರು ಹಾಗೂ ಮೂವರು ಖಾಸಗಿ ವೈದ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಅವರು ನೀಡಿದ ವರದಿಯ ಸಲಹೆಗಳನ್ನು ಆಧರಿಸಿ, ಪ್ರಸೂತಿ ಕೇಂದ್ರದಲ್ಲಿ ಸೌಲಭ್ಯ ಒದಗಿಸಲಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ವಾಣಿಜ್ಯ ಸಂಕೀರ್ಣ, ಕಲಾ ಗ್ಯಾಲರಿ, ಹೆರಿಟೇಜ್‌ ಪಾರ್ಕ್‌ ನಿರ್ಮಾಣ, ಆರೋಗ್ಯ ಸೇವೆ, ರಸ್ತೆ, ಕೆರೆ, ಉದ್ಯಾನ ಅವೃದ್ಧಿಪಡಿಸುವುದು ಸೇರಿದಂತೆ 37 ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !