ಬುಧವಾರ, ಮೇ 18, 2022
28 °C
ನೆರವಿಗೆ ಧಾವಿಸುವಂತೆ ಮೇದಾರರ ಆಗ್ರಹ

ಬೆಳಗಾವಿ: ಇಳಿಜಾರಿಗೆ ಬಿತ್ತು ‘ಏಣಿ’ ತಯಾರಿಸುವವರ ಬದುಕು

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಬಿದಿರು ಬಳಸಿ ವಿವಿಧ ರೀತಿಯ ವಸ್ತುಗಳನ್ನು ಸಿದ್ಧಪಡಿಸಿ ಬದುಕು ಸಾಗಿಸುತ್ತಿದ್ದ ಇಲ್ಲಿನ ಮೇದಾರ ಸಮಾಜದ ಜನರ ಜೀವನದ ಮೇಲೂ ಕೋವಿಡ್ 19 ಸೋಂಕು ಬರೆ ಎಳೆದಿದೆ.

ಲಾಕ್‌ಡೌನ್, ಬೆಳಿಗ್ಗೆ 4 ತಾಸುವರೆಗಿನ ವ್ಯಾಪಾರದಿಂದ ತೀವ್ರ ಸಂಕಷ್ಟಕ್ಕೆ ಇವರೂ ಒಳಗಾಗಿದ್ದಾರೆ.

ಮಾಡಿಟ್ಟ ವಸ್ತುಗಳನ್ನು ಮನೆವರೆಗೆ ಬಂದು ಕೊಳ್ಳುವವರು ಕಡಿಮೆ. ಹೀಗಾಗಿ ಹಳ್ಳಿ, ಹಳ್ಳಿ ತಿರುಗಾಡಿ ಬಿದಿರು ಬುಟ್ಟಿ, ಮರ, ಸಾಣಿಗೆಯನ್ನು ಕೇಳುವವರು ಇಲ್ಲವಾಗಿದ್ದಾರೆ. ಸಂಜೆಯವರೆಗೆ ತಿರುಗಾಡಿ ಮಾರಿದರೆ ನಿತ್ಯ ಬದುಕಿನ ಬಂಡೆ ಎಳೆಯುವಷ್ಟು ವಹಿವಾಟು ನಡೆಯುತ್ತಿತ್ತು. ನಾಲ್ಕು ತಾಸಿನ ವ್ಯಾಪಾರದ ಗಡುವಿನಲ್ಲಿ ಏನು ಮಾಡುವುದು ತಿಳಿಯದಾಗಿದೆ ಎನ್ನುತ್ತಾರೆ ಮೇದಾರರು.

ಬಿದಿರೇ ಬದುಕು:

‘ಮಹಾರಾಷ್ಟ್ರದ ಸಾವಂತವಾಡಿಯಿಂದ ಇಲ್ಲಿಗೆ ಬಂದು ಮಾರಾಟ ಮಾಡುವವರಿಂದ ಬಿದಿರು ಕೊಳ್ಳುವುದು, ಅದನ್ನು ಸೀಳಿ ಮರ, ಬುಟ್ಟಿ, ಯಲ್ಲಮ್ಮನ ಪಡ್ಡಲಿಗೆ, ಜಲ್ಲಿ, ಹತ್ತುವ ಏಣಿ ತಯಾರಿಸಿ ಹಳ್ಳಿ ತಿರುಗಿ ಮಾರಾಟ ಮಾಡುತ್ತಿದ್ದೆವು. ಮದುವೆ, ಶುಭ ಸಮಾರಂಭ ಮನೆಯಲ್ಲಿದ್ದರೆ ಬಿದಿರು ವಸ್ತುಗಳ ಬಳಸುವ ಸಂಪ್ರದಾಯವಿದೆ. ಪ್ಲಾಸ್ಟಿಕ್ ಯುಗದಲ್ಲಿ ಬಿದಿರು ವಸ್ತುಗಳನ್ನು ಬಳಸುವವರ ಸಂಖ್ಯೆಯೂ ಕಡಿಮೆಯಾಗಿದೆ’ ಎಂದು ಶಿವಲಿಂಗ ಬೋಗೂರ ಮತ್ತು ರಾಜು ಬೋಗೂರ ಸಹೋದರರು ತಿಳಿಸಿದರು.

‘ಎಲ್ಲ ಸಮಾಜದ ಜನಾಂಗದವರ ಮೇಲೂ ಕೊರೊನಾ ಪ್ರಹಾರ ಮಾಡಿದೆ. ಸಂತೆ ನಡೆಯುತ್ತಿಲ್ಲ, ಜನರ ಸೇರುವಂತಿಲ್ಲ ಎಂದು ಸರ್ಕಾರ ನಿಷೇಧ ಹೇರಿದೆ. ಮದುವೆ, ಶುಭ ಕಾರ್ಯಕ್ರಮಗಳಿಗೆ 40 ಜನ ಇರಬೇಕು ಎಂದು ನಿಯಮ ಹೇರಿದೆ. ಸಾಮೂಹಿಕ ವಿವಾಹಗಳಂತೂ ನೆರವೇರುತ್ತಿಲ್ಲ. ಬಾಸಿಂಗ ಇಟ್ಟುಕೊಳ್ಳಲು ಬಳಸುತ್ತಿದ್ದ ದೊಡ್ಡ ಜಲ್ಲಿಗಳ ಮಾರಾಟಕ್ಕೆ ಬರ ಬಿದ್ದಿದೆ’ ಎಂದು ಅವರು ಅಳಲು ತೋಡಿಕೊಂಡರು.

100 ಕುಟುಂಬ:

‘ಕಿತ್ತೂರು ತಾಲ್ಲೂಕಿನ ಕಿತ್ತೂರು ಸೇರಿದಂತೆ, ಮಾರ್ಗನಕೊಪ್ಪ, ದೇವರಶೀಗಿಹಳ್ಳಿ ಮತ್ತು ಎಂ.ಕೆ. ಹುಬ್ಬಳ್ಳಿಯಲ್ಲಿ ಮೇದಾರ ಸಮಾಜದ ಸುಮಾರು 100 ಕುಟುಂಬಗಳಿವೆ. ಕಿತ್ತೂರಲ್ಲೇ ಅಂದಾಜು 60 ಮನೆತನಗಳಿವೆ. ಕೆಲವರು ಶಾಮಿಯಾನ ಕೆಲಸ ಮಾಡುತ್ತಾರೆ. ಆದರೆ, ಹೆಚ್ಚು ಮನೆತನಗಳು ಕುಲಕಸುಬಾದ ಮೇದಾರಿಕೆಯನ್ನು ಇನ್ನೂ ತಮ್ಮ ಉಸಿರಾಗಿಸಿಕೊಂಡಿವೆ. ಮಾಡಿದ ಬುಟ್ಟಿ, ಮೊರ ಮೊದಲಾದವು ಮೂಲೆ ಸೇರಿವೆ’ ಎಂದು ನೋವು ತೋಡಿಕೊಂಡರು.

‘ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲೂ ಅನೇಕ ಸಮಾಜದವರಿಗೆ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿತು. ಆದಿವಾಸಿ ಗಿರಿಜನ ಬುಡಕಟ್ಟು ಜನಾಂಗಕ್ಕೆ ಸೇರಿದ ಮೇದಾರ ಸಮಾಜವನ್ನೇ ಮೆರೆಯಿತು. ಎರಡನೇ ಅಲೆಯಲ್ಲೂ ಸರ್ಕಾರದ ತಿರಸ್ಕಾರ ಮುಂದುವರೆದಿದೆ. ಬಿದಿರು ನಂಬಿ ಬದುಕುವವರನ್ನು ನಾಡಿನ ದೊರೆ ಯಡಿಯೂರಪ್ಪ ನೋಡಬೇಕು. ನಮಗೂ ನೆರವು ನೀಡಲು ಮುಂದಾಗಬೇಕು’ ಎಂದು ಸರಸ್ವತಿ ಬೋಗೂರ, ರುದ್ರಪ್ಪ ಹೊಸಮನಿ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು