ಜನಸಂಖ್ಯೆ ಏರಿಕೆ: ವೈದ್ಯರ ಕೊರತೆ– ಎನ್‌ಬಿಎ ನಿರ್ದೇಶಕ ಡಾ.ಅಭಿಜಿತ್ ಸೇಠ್

ಭಾನುವಾರ, ಏಪ್ರಿಲ್ 21, 2019
24 °C

ಜನಸಂಖ್ಯೆ ಏರಿಕೆ: ವೈದ್ಯರ ಕೊರತೆ– ಎನ್‌ಬಿಎ ನಿರ್ದೇಶಕ ಡಾ.ಅಭಿಜಿತ್ ಸೇಠ್

Published:
Updated:
Prajavani

ಬೆಳಗಾವಿ: ‘ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಲಭ್ಯವಿಲ್ಲದೇ ಇರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದು ನವದೆಹಲಿಯ ಎನ್‌ಬಿಎ (ನ್ಯಾಷನಲ್ ಬೋರ್ಡ್‌ ಆಫ್ ಎಕ್ಸಾಮಿನೇಶನ್) ನಿರ್ದೇಶಕ ಡಾ.ಅಭಿಜಿತ್ ಸೇಠ್ ಹೇಳಿದರು.

ಇಲ್ಲಿನ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು, ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ನಡೆದ ‘ಜೆಎನ್‌ಎಂಸಿ ವೈಜ್ಞಾನಿಕ ಸಮಾಜದ 37ನೇ ವಾರ್ಷಿಕ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಚ್ಚಿನ ಗ್ರಾಮೀಣ ಪ್ರದೇಶ ಹೊಂದಿರುವ ಹಾಗೂ ಕೃಷಿ ಆಧಾರಿತವಾದ ನಮ್ಮ ದೇಶದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಅವರಲ್ಲಿ ಬರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಸಿಗುತ್ತಿಲ್ಲ. ವಿಶ್ವಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಸಾವಿರ ಜನಕ್ಕೆ ಒಬ್ಬ ವೈದ್ಯರು ಅವಶ್ಯ. ಆದರೆ ನಮ್ಮಲ್ಲಿ 2ಸಾವಿರ ಜನಕ್ಕೆ ಒಬ್ಬ ವೈದ್ಯರಿದ್ದಾರೆ. ಹೀಗಾಗಿ, ವೈದ್ಯಕೀಯ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಗ್ರಾಮೀಣ ಸೇವೆಗೆ ವೈದ್ಯರನ್ನು ಸಜ್ಜುಗೊಳಿಸಬೇಕಾಗಿದೆ’ ಎಂದು ತಿಳಿಸಿದರು.

‘ತುರ್ತು ಪರಿಸ್ಥಿಯಲ್ಲಿ ಚಿಕಿತ್ಸೆ ನೀಡುವ ತಜ್ಞ ವೈದ್ಯರು ಲಭಿಸುತ್ತಿಲ್ಲ. ಪ್ರತಿ ವರ್ಷ 60ಸಾವಿರ ಪದವಿ, 30 ಸಾವಿರ ಸ್ನಾತ್ತಕೋತ್ತರ ಪದವಿ ಪಡೆದ ವೈದ್ಯರು ಹೊರಬೀಳುತ್ತಿದ್ದಾರೆ. ಆದರೂ ಅವರು ಹಳ್ಳಿಗಳಲ್ಲಿ ಸೇವೆಗೆ ಸಿಗುತ್ತಿಲ್ಲ. ದೇಶದಲ್ಲಿ 10 ಲಕ್ಷಕ್ಕೂ ಅಧಿಕ ವೈದ್ಯರಿದ್ದಾರೆ. ಅವರಲ್ಲಿ ಶೇ 8.18 (ಅಲೋಪತಿ) ಲಕ್ಷ ವೈದ್ಯರು ಮಾತ್ರ ಸೇವೆಗೆ ಲಭ್ಯವಿದ್ದಾರೆ. 2025ಕ್ಕೆ 1.5 ಲಕ್ಷ ವೈದ್ಯರನ್ನು ಪ್ರತಿ ವರ್ಷ ಸೇವೆಗೆ ಅಣಿಗೊಳಿಸಲು ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘40 ವರ್ಷಗಳಿಂದ ವೈದ್ಯಕೀಯ ಶಿಕ್ಷಣದಲ್ಲಿ ಬದಲಾವಣೆಯಾಗಿಲ್ಲ. ಪ್ರಸಕ್ತ ವ್ಯವಸ್ಥೆಗೆ ತಕ್ಕಂತೆ ರೂಪಿಸಬೇಕಾಗಿದೆ. ಆದರೆ ಅದು ಕಾರ್ಯಗತಗೊಳ್ಳುವುದು ಕಠಿಣ’ ಎಂದು ಅಭಿ‍ಪ್ರಾಯಪಟ್ಟರು.

ಹಿರಿಯ ವೈದ್ಯ ಡಾ.ಕೆ.ಎಸ್. ಗೋಪಿನಾಥ ದತ್ತಿ ಉಪನ್ಯಾಸ ನೀಡಿದರು. ಶಸ್ತ್ರಚಿಕಿತ್ಸಾ ವಿಧಾನದಲ್ಲಿ ರೊಬೊಟಿಕ್ ತಂತ್ರಜ್ಞಾನದ ಪ್ರಾತ್ಯಕ್ಷಿತೆ ಪ್ರದರ್ಶಿಸಲಾಯಿತು.

ಜೆಎನ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯಾಧ್ಯಕ್ಷ ಡಾ. ಆರ್‌.ಬಿ. ನೇರಲಿ, ಡಾ.ವಿ.ಎ. ಕೋಟಿವಾಲೆ, ಡಾ.ರೇಷ್ಮಾ ಕರಿಶೆಟ್ಟಿ, ಡಾ.ಶಮಾ ಬೆಲ್ಲದ, ಡಾ.ಆರ್.ಎಸ್. ಮುಧೋಳ, ಡಾ.ಕುಮಾರ ವಿಂಚುರಕರ, ಡಾ.ಶಿವಗೌಡ ಪಾಟೀಲ, ಡಾ.ಎ.ಪಿ. ಹೊಗಾಡೆ, ಡಾ.ಎನ್.ಆರ್. ಮುನವಳ್ಳಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !