ಭಾನುವಾರ, ಆಗಸ್ಟ್ 25, 2019
21 °C

ಸಂತ್ರಸ್ತರಿಗೆ ರಗ್ಗು, ಔಷಧ ವಿತರಿಸಿದ ಲಕ್ಷ್ಮಿ

Published:
Updated:
Prajavani

ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಶನಿವಾರ ಇಡೀ ದಿನ ಭೇಟಿ ನೀಡಿ  ಸಂತ್ರಸ್ತರಿಗೆ ರಗ್ಗುಗಳು (ಹೊದಿಕೆಗಳು) ಮತ್ತು ಔಷಧಗಳನ್ನು ವಿತರಿಸಿದರು.

ಕಂಗ್ರಾಳಿ ಕೆ.ಎಚ್., ರಾಜಾನಗರ, ಸಿದ್ದೇಶ್ವರ ನಗರ, ಅಂಬೇವಾಡಿ, ಮಣ್ಣೂರು, ಗೋಜಗಾ, ಕೆ.ಕೆ. ಕೊಪ್ಪ, ಹಾಲಗಿಮರಡಿ, ಹುಲಿಕವಿ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿದರು. ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು. ಎಲ್ಲರ ಅಹವಾಲು, ನೋವುಗಳನ್ನು ಆಲಿಸಿದ ಶಾಸಕರು, ಎಲ್ಲ ಸಂತ್ರಸ್ತರಿಗೂ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

‘ಒಂದೇ ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದೇನೆ. ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಶಾಲೆಗಳನ್ನು ದುರಸ್ತಿ ಮಾಡಿಸಿದ್ದೇನೆ. ಕಾಂಪೌಂಡ್‌ಗಳನ್ನು ನಿರ್ಮಿಸಲಾಗಿತ್ತು. ಈಗ, ಆ ಕಾಮಗಾರಿಗಳು ಮಹಾಮಳೆಯಿಂದ ಹಾಳಾಗಿವೆ. 50 ವರ್ಷಗಳಿಂದ ಇಲ್ಲಿ ಆಗದ ಕೆಲಸವನ್ನು ಒಂದೇ ವರ್ಷದಲ್ಲಿ ಮಾಡಿ ತೋರಿಸಿದ್ದೆ. ಆದರೆ, ನಿಸರ್ಗದ ಮುಂದೆ ಮಾನವರೆಲ್ಲರೂ ಸಣ್ಣವರು. ಮಳೆಯಿಂದ ತೊಂದರೆಯಾಗಿದೆ’ ಎಂದು ತಿಳಿಸಿದರು.

‘ಇದರಿಂದ ನಾನು ಕಂಗೆಡುವುದಿಲ್ಲ. ಮತ್ತೆ ಗ್ರಾಮಗಳನ್ನು ಕಟ್ಟಿ ನಿಲ್ಲಿಸುತ್ತೇನೆ. ಯಾರೂ ಎದೆಗುಂದಬಾರದು. ಸರ್ಕಾರ ನನ್ನೊಂದಿಗೆ ಸಹಕರಿಸಬೇಕು. ಯಾವುದೇ ಪಕ್ಷಪಾತ ಮಾಡದೇ ಅಭಿವೃದ್ಧಿಗೆ ನೆರವಾಗಬೇಕು’ ಎಂದು ಕೋರಿದರು.

Post Comments (+)