ಸೋಮವಾರ, ಸೆಪ್ಟೆಂಬರ್ 26, 2022
22 °C
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ ಆಡಿ ಸೂಚನೆ

ತ್ಯಾಜ್ಯ ವಿಲೇವಾರಿ ಪ್ರತಿಯೊಬ್ಬರ ಜವಾಬ್ದಾರಿ: ಸುಭಾಷ ಆಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ದಿನನಿತ್ಯ ಹಸಿಕಸ, ಒಣಕಸ, ಇ-ಕಸ, ಹಾನಿಕಾರಕ ಕಸ ಸೇರಿದಂತೆ ಹಲವಾರು ರೀತಿಯ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದೇವೆ. ಇದರಿಂದ ಕಸ ವಿಲೇವಾರಿ ಒಂದು ಸವಾಲಾಗಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕೆಲಸಕ್ಕೆ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು’ ಎಂದುರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ ಆಡಿ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಘನತ್ಯಾಜ್ಯ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ‘ಬೆಂಗಳೂರು ನಗರದ ನಂತರ ಬೆಳಗಾವಿ ಕೂಡ ಒಂದು ದೊಡ್ಡ ಜಿಲ್ಲೆಯಾಗಿದೆ. ಘನತ್ಯಾಜ್ಯ ವಿಲೇವಾರಿಗೆ ಇಲ್ಲಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ನಿಲ್ಲಬೇಕು’ ಎಂದರು.

‘ಸ್ಮಾರ್ಟ್‌ಸಿಟಿ ಅಡಿಯಲ್ಲಿ ನಗರದಲ್ಲಿ ಈಗಾಗಲೇ ಎಲ್ಲ ರಸ್ತೆ ಹಾಗೂ ಇನ್ನಿತರ ಕಾಮಗಾರಿಗಳು ಮುಕ್ತಾಯಗೊಂಡಿವೆ. ಸ್ವಚ್ಛತೆ ಕಾಪಾಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಶೌಚಾಲಯ ಸೇರಿದಂತೆ ನಗರದ ಎಲ್ಲ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಸಂಭಂದಿಸಿದ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು’ ಎಂದು ಹೇಳಿದರು.

‘ಮನೆ, ಅಂಗಡಿ, ಹೋಟೆಲ್, ಸೂಪರ್ ಮಾಲ್ ಸೇರಿದಂತೆ ಯಾರೂ ಎಲ್ಲೆಂದರಲ್ಲಿ ಕಸ ಎಸೆಯದಂತೆ ದಿನನಿತ್ಯ ತಿಳಿಸಬೇಕು. ಪಾಲಿಕೆ ಸೂಚನಾ ಫಲಕಗಳನ್ನು ಹೊರತುಪಡಿಸಿ, ನಗರದ ಯಾವುದೇ ಸ್ಥಳಗಳಲ್ಲಿ ಗೋಡೆಗಳ ಮೇಲೆ ಎಲ್.ಇ.ಡಿ ಹಾಗೂ ಇನ್ನಿತರ ಪೋಸ್ಟರ್ ಅಳವಡಿಸಲು ಅವಕಾಶ ಕೊಡಬಾರದು’ ಎಂದು ಸೂಚಿಸಿದರು.

‘ಪ್ರತಿ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ, ಸಾಮಾಜಿಕ ಕಾರ್ಯಕರ್ತರ ಸಹಯೋಗದೊಂದಿಗೆ ಜಾಗೃತಿ ಮೂಡಿಸಬೇಕು. ಜಿಲ್ಲಾಧಿಕಾರಿ ಸೇರಿದಂತೆ ಪ್ರತಿ ಇಲಾಖೆಯ ಅಧಿಕಾರಿಗಳು ಅವರ ಸ್ಥಳೀಯ ಪ್ರದೇಶದ ಸ್ವಚ್ಛತೆ ಬಗ್ಗೆ ಖುದ್ದಾಗಿ ನಿರಂತರ ಪರಿಶೀಲನೆ ಮಾಡಬೇಕು’ ಎಂದರು.

‘ಜಿಲ್ಲೆಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ನಿಯಮಾವಳಿ ಪ್ರಕಾರ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಗ್ರಾಮ ಪಂಚಾಯಿತಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕೂಡ ಜಾರಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಚ್.ವಿ.ದರ್ಶನ್, ಎಸ್ಪಿ ಡಾ.ಸಂಜೀವ ಪಾಟೀಲ, ಪಾಲಿಕೆ ಆಯುಕ್ತ  ಡಾ.ರುದ್ರೇಶ ಘಾಳಿ, ಯೋಜನಾ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಇತರ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು