‘ಮೆಟ್ರೋ ನಗರಗಳಲ್ಲಿ ಮಹಿಳೆಗೆ ಭಯದ ವಾತಾವರಣ’

7
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಆರ್‌.ಕೆ. ದತ್ತಾ ಹೇಳಿಕೆ

‘ಮೆಟ್ರೋ ನಗರಗಳಲ್ಲಿ ಮಹಿಳೆಗೆ ಭಯದ ವಾತಾವರಣ’

Published:
Updated:

ಬೆಳಗಾವಿ: ‘ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಶೇ 90ರಷ್ಟು ಮಹಿಳೆಯರು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿ ಅವರಿಗೆ ಆತಂಕ ಮತ್ತು ಭಯದ ವಾತಾವರಣ ಇರುವುದೇ ಇದಕ್ಕೆ ಕಾರಣ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಆರ್.ಕೆ. ದತ್ತಾ ತಿಳಿಸಿದರು.

ನವದೆಹಲಿಯ ಹನ್ಸ್ ಸೆಡಲ್ ಪ್ರತಿಷ್ಠಾನ, ಗ್ಲೋಬಲ್ ಕನ್‌ಸರ್ನ್ಸ್‌ ಇಂಡಿಯಾ, ಸಾಧನಾ ಮಾನವ ಹಕ್ಕುಗಳ ಕೇಂದ್ರ, ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ‘ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷಿತ ನಗರಗಳ ನಿರ್ಮಾಣ’ ವಿಷಯವಾಗಿ ಆಯೋಜಿಸಿರುವ 2 ದಿನಗಳ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಂಗಳೂರಿನ ಸಾರ್ವಜನಿಕ ಸ್ಥಳಗಳು ಮಹಿಳೆ ಮತ್ತು ಮಕ್ಕಳಿಗೆ ಅಸುರಕ್ಷಿತ ಭಾವನೆ ಮೂಡಿಸುತ್ತಿವೆ ಎನ್ನುವುದು ಈಚೆಗೆ ನಡೆದ ಸಮೀಕ್ಷೆ ಹೇಳಿದೆ. ಇದೇ ಪರಿಸ್ಥಿತಿ ದೇಶದ ಬೇರೆ ನಗರಗಳಲ್ಲೂ ಇದೆ. ಈ ಅಸುರಕ್ಷಿತ ಭಾವನೆ ಹೋಗಲಾಡಿಸಲು ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆ ಇನ್ನಷ್ಟು ಚುರುಕಾಗಬೇಕು’ ಎಂದು ಹೇಳಿದರು.

ನಿರೀಕ್ಷಿತ ಪ್ರಮಾಣದಲ್ಲಿಲ್ಲ:  ‘ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಿರೀಕ್ಷಿತ ಪ್ರಮಾಣದಲ್ಲಿ ಇತ್ಯರ್ಥಗೊಳ್ಳುತ್ತಿಲ್ಲ. ದೇಶದಲ್ಲಿ ಈ ಪ್ರಮಾಣ  ಶೇ.18.9ರಷ್ಟಿದೆ. ರಾಜ್ಯದಲ್ಲಿ ಅದು ಶೇ 4.7ರಷ್ಟಿದೆ. 2016ರಿಂದ ಇಲ್ಲಿವರೆಗೆ ದೇಶದಲ್ಲಿ 22 ಲಕ್ಷ ಪ್ರಕರಣಗಳು ವಿಚಾರಣೆಗೆ ಬಂದಿವೆ.

ಆ ಪೈಕಿ 23ಸಾವಿರ ಪ್ರಕರಣಗಳಷ್ಟೇ ಇತ್ಯರ್ಥಗೊಂಡಿವೆ. ರಾಜ್ಯದಲ್ಲಿ 1,236 ದೌರ್ಜನ್ಯ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಆ ಪೈಕಿ 60 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ. ನಿರಾಸಕ್ತಿಯಿಂದ ಕೂಡಿದ ತನಿಖೆ ಹಾಗೂ ವಿಚಾರಣೆ ಕಾರಣಗಳಿಂದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಸಮಾಜದಲ್ಲಿ ಕಾನೂನಿನ ಭಯ ಇಲ್ಲದಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ಮಾತನಾಡಿ, ‘ನಮ್ಮ ನಗರ, ಜಿಲ್ಲೆಗಳಲ್ಲಿ ಜನರಿಗೆ ನೂರಕ್ಕೆ ನೂರರಷ್ಟು ಸುರಕ್ಷತೆ ಒದಗಿಸುತ್ತಿದ್ದೇವೆ ಎಂದು ಹೇಳಿಕೊಳ್ಳಬಹುದಾದರೂ ವಾಸ್ತವದಲ್ಲಿ ಹಾಗಿಲ್ಲ. ಪರಿಸ್ಥಿತಿ ಮತ್ತು ನಮ್ಮ ಕಾರ್ಯವೈಖರಿ ನೂನ್ಯತೆಗಳನ್ನು ಹುಟ್ಟಿ ಹಾಕುತ್ತಿದೆ’ ಎಂದು ತಿಳಿಸಿದರು.

ನಿರಾಸಕ್ತಿಯೂ ಕಾರಣ: ‘ಶೇ. 50ರಿಂದ 60ರಷ್ಟು ಸಿಬ್ಬಂದಿ ಕೊರತೆ ನಡುವೆಯೂ ಪೊಲೀಸರು ಜೀವದ ಹಂಗು ತೊರೆದು ಆರೋಪಿಗಳನ್ನು ಬಂಧಿಸಿರುವ ಉದಾಹರಣೆಗವೆ. ಆದರೆ, ಅದನ್ನು ಗುರುತಿಸುವುದು ಅಪರೂಪ. ದೂರು ದಾಖಲಿಸುವುದರಿಂದ ದೋಷಾರೋಪಣಾ ಪ‍ಟ್ಟಿ ಸಲ್ಲಿಸುವವರೆಗಿನ ಪ್ರಕ್ರಿಯೆಯಲ್ಲಿ ಸಿಬ್ಬಂದಿ ತೋರುವ ನಿರಾಸಕ್ತಿಯೂ ನ್ಯಾಯ ಒದಗಿಸಿಕೊಡುವಲ್ಲಿ ವಿಫಲವಾಗುತ್ತಿದೆ. ವ್ಯವಸ್ಥೆ ಬದಲಾವಣೆ ಜೊತೆಗೆ, ಅಧಿಕಾರಿ ಮತ್ತು ಸಿಬ್ಬಂದಿ ಕಾನೂನನ್ನು ಇನ್ನಷ್ಟು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಗ್ಲೋಬಲ್ ಕನ್‌ಸರ್ನ್ಸ್‌ ಇಂಡಿಯಾ ಸಂಸ್ಥೆ ಸಂಯೋಜಕಿ ಬೃಂದಾ ಅಡಿಗೆ ಮಾತನಾಡಿ, ‘ಪೊಲೀಸ್ ಮತ್ತು  ನ್ಯಾಯಾಂಗ ಇಲಾಖೆಯಿಂದ ನ್ಯಾಯ ಸಿಗುತ್ತದೆ ಎನ್ನುವ ಭಾವನೆ ಇಂದಿಗೂ ಜನರಲ್ಲಿ ಗಟ್ಟಿಯಾಗಿದೆ. ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹಕ್ಕುಗಳನ್ನೂ ರಕ್ಷಿಸಲು ಆಯೋಗ ಚಿಂತನೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ನಗರ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ಸಾಧನಾ ಮಾನವ ಹಕ್ಕುಗಳ ಕೇಂದ್ರದ ಸಂಯೋಜಕಿ ಇಸಬೆಲ್ಲಾ ಕ್ಸೇವಿಯರ್, ಮಹಿಳಾ ಕಲ್ಯಾಣ ಸಂಸ್ಥೆ ಕಾರ್ಯದರ್ಶಿ ವೈಜಯಂತಿ ಚೌಗುಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !