ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಕ ಬೆಳೆಗೆ ಒತ್ತು; ಸಿರಿಧಾನ್ಯಗಳಿಗೆ ಶುಕ್ರದೆಸೆ

Last Updated 20 ಜೂನ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸಾಂಪ್ರದಾಯಕ ಬೆಳೆಗಳಾದ ಸಿರಿಧಾನ್ಯಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ‘ರೈತ ಸಿರಿ’ ಯೋಜನೆ ರೂಪಿಸಿದೆ. ಇದರಡಿ ರೈತರಿಗೆ 1 ಹೆಕ್ಟೇರ್‌ಗೆ ₹ 10,000 ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದ್ದು, ಬೆಳಗಾವಿ ಜಿಲ್ಲೆಗೆ 2,275 ಹೆಕ್ಟೇರ್‌ ಗುರಿ ನೀಡಲಾಗಿದೆ.

ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಹಾಗೂ ಬರಗು ಬೆಳೆಗೆ ಉತ್ತೇಜನ ನೀಡಲಾಗುತ್ತಿದೆ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ, ಕಡಿಮೆ ಫಲವತ್ತತೆ ಇರುವ ಭೂಮಿಯಲ್ಲಿ ಹಾಗೂ ಒಣ ಹವೆ– ಶುಷ್ಕ ಪ್ರದೇಶಗಳಲ್ಲಿಯೂ ಈ ಬೆಳೆಗಳು ಸಲೀಸಾಗಿ ಬೆಳೆಯುತ್ತವೆ.

ಜಿಲ್ಲೆಯ ಒಟ್ಟು ಸಿರಿಧಾನ್ಯ ಬೆಳೆಯುವ 2,740 ಹೆಕ್ಟೇರ್‌ ಪ್ರದೇಶದ ಪೈಕಿ ಕಳೆದ ವರ್ಷ ಕೇವಲ 625 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗಿತ್ತು. ನಿಗದಿತ ಗುರಿಯ ಶೇ 22.81 ರಷ್ಟು ಮಾತ್ರ ಪೂರ್ಣಗೊಳ್ಳಲು ಸಾಧ್ಯವಾಗಿತ್ತು. ಅದನ್ನೀಗ ಕನಿಷ್ಠ 2,275 ಹೆಕ್ಟೇರ್‌ಗೆ ವಿಸ್ತರಿಸಲು ಗುರಿ ಇಟ್ಟುಕೊಳ್ಳಲಾಗಿದೆ.

ಮರಳಿಸುವುದೇ ಗತವೈಭವ

ಹಲವು ವರ್ಷಗಳ ಹಿಂದೆ ಈ ನಾಡಿನಲ್ಲಿ ಸಿರಿಧಾನ್ಯಗಳನ್ನೇ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಹೆಚ್ಚಿನ ಆದಾಯ ತರುವಂತಹ ಭತ್ತ, ಕಬ್ಬು ಬೆಳೆಗಳತ್ತ ರೈತರು ವಾಲಿದರು. ಹೀಗಾಗಿ ಪೌಷ್ಟಿಕಯುಕ್ತವಾದ ಸಿರಿಧಾನ್ಯಗಳು ಕ್ರಮೇಣ ಕಡಿಮೆಯಾಗುತ್ತ ಬಂದವು. ಕಳೆದುಹೋದ ದಿನಗಳನ್ನು ಪುನಃ ಮರಳಿ ತರಲು ಸರ್ಕಾರ ಈ ಯೋಜನೆ ರೂಪಿಸಿದೆ.

ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಸಣ್ಣ, ಅತಿ ಸಣ್ಣ ಅಥವಾ ದೊಡ್ಡ ರೈತ ಎನ್ನುವ ಯಾವುದೇ ಭೇದಭಾವ ಇಲ್ಲದೇ ಯಾವುದೇ ರೈತರೂ ಕೂಡ ಇದರ ಲಾಭ ಪಡೆಯಬಹುದು. 1 ಹೆಕ್ಟೇರ್‌ ಪ್ರದೇಶಕ್ಕೆ ₹ 10,000 ಪ್ರೋತ್ಸಾಹ ಧನ ಸಿಗಲಿದೆ. ಸರ್ಕಾರ ನಿಗದಿ ಪಡಿಸಿದ ಎಲ್ಲ 2,275 ಹೆಕ್ಟೇರ್‌ ಪ್ರದೇಶಕ್ಕೂ ಸಹಾಯ ಧನ ಸಿಗಲಿದೆ.

‘ಪ್ರೋತ್ಸಾಹ ಧನವು ಎರಡು ಕಂತುಗಳಲ್ಲಿ ರೈತರಿಗೆ ಸಿಗಲಿದೆ. ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಲಿದೆ. ಸಿರಿಧಾನ್ಯ ಬೆಳೆದ ರೈತರು ಸಮೀಪದ ರೈತ ಕೇಂದ್ರಗಳಿಗೆ ಹೋಗಿ, ಅರ್ಜಿ ತುಂಬಿಕೊಡಬೇಕು. ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿರಿಧಾನ್ಯಗಳನ್ನು ಕುಟ್ಟಿ ಪುಡಿ ಮಾಡಲು ಸಾಮಾನ್ಯವಾದ ಗಿರಣಿಗಳಲ್ಲಿ ಸಾಧ್ಯವಿಲ್ಲ. ಅದಕ್ಕೆ ಪ್ರತ್ಯೇಕವಾದ ಯಂತ್ರಗಳು ಬೇಕಾಗುತ್ತವೆ. ಇಂತಹ ಯಂತ್ರಗಳನ್ನು ಹಾಕಲು ಯಾವುದಾದರೂ ಸಂಘ– ಸಂಸ್ಥೆಗಳು ಬಯಸಿದರೆ ಅವುಗಳಿಗೂ ಸರ್ಕಾರದಿಂದ ರಿಯಾಯಿತಿ ಸೌಲಭ್ಯವಿದೆ. ₹ 10 ಲಕ್ಷ ವೆಚ್ಚದ ಘಟಕಕ್ಕೆ ಸುಮಾರು ₹ 5 ಲಕ್ಷದವರೆಗೆ ಸಬ್ಸಿಡಿ ಸೌಲಭ್ಯ ಸಿಗಲಿದೆ’ ಎಂದು ಹೇಳಿದರು.

ಕ್ಷೀಣಿಸಲು ಕಾರಣವೇನು?

ಬೆಳಗಾವಿ ಜಿಲ್ಲೆಯಲ್ಲಿ ಸಾಂಪ್ರದಾಯಕವಾಗಿ 2,740 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ರೈತರು ನೀರಾವರಿ ಸೌಲಭ್ಯ ಪಡೆದು, ನೀರಾವರಿ ಬೆಳೆಗಳಿಗೆ ರೂಪಾಂತರವಾದರು. ಸಿರಿ ಧಾನ್ಯ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಬೆಲೆ ಸಿಗದಿರುವ ಕಾರಣ, ವಾಣಿಜ್ಯ ಬೆಳೆಗಳತ್ತ ಚಿತ್ತ ಹರಿಸಿದರು. ಈ ಸಮಸ್ಯೆಗಳನ್ನು ಹೋಗಲಾಡಿಸಿ, ಸಿರಿಧಾನ್ಯಗಳಿಗೆ ಪುನಃಶ್ಚೇತನ ತಂದುಕೊಡಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT