ಭಾನುವಾರ, ಜನವರಿ 24, 2021
18 °C

ಸಕ್ಕರೆ ಕಾರ್ಖಾನೆಗಳು ಸಣ್ಣತನ ತೋರಬಾರದು: ಸಚಿವ ಶಿವರಾಮ ಹೆಬ್ಬಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನುರಿಸುವ ಪ್ರತಿ ಟನ್‌ ಕಬ್ಬಿಗೆ ತಲಾ ₹ 1 ಅನ್ನು ಸಕ್ಕರೆ ಕಾರ್ಖಾನೆಗಳವರು ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ನೀಡಬೇಕು. ಈ ವಿಷಯದಲ್ಲಿ ಮಾಲೀಕರು ಸಣ್ಣತನ ತೋರುವುದು ಸರಿಯಲ್ಲ’ ಎಂದು ಸಕ್ಕರೆ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ತಿಳಿಸಿದರು.

ನಗರದ ಗಣೇಶಪುರ ರಸ್ತೆಯಲ್ಲಿರುವ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಸೋಮವಾರ ನಡೆದ 14ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಹುತೇಕ ಸಕ್ಕರೆ ಕಾರ್ಖಾನೆಗಳವರು ಪಾವತಿಸಿದ್ದಾರೆ. ಆದರೆ, ಕೆಲವು ಕಾರ್ಖಾನೆಗಳವರು ಹೈಕೋರ್ಟ್‌ಗೆ ಹೋಗಿದ್ದಾರೆ. ಈ ಸಂಬಂಧ ವಾದಿಸಲು ಸರ್ಕಾರದ ವಕೀಲರೊಂದಿಗೆ ಸಂಸ್ಥೆಯ ವಕೀಲರನ್ನು ಹೊಂದುವುದಕ್ಕೂ ಕೆಲವರು ಅಡ್ಡಿಪಡಿಸಿದರು. ಆ ನಡುವೆಯೂ ನೇಮಿಸಿಕೊಂಡಿದ್ದೇವೆ. ವ್ಯಾಜ್ಯ ನಮ್ಮಂತೆಯೇ ಆಗುವ ವಿಶ್ವಾಸವಿದೆ. ಆ ಹಣ ಬಂದರೆ, ಸಂಸ್ಥೆಯು ಆರ್ಥಿಕವಾಗಿ ಸದೃಢವಾಗಿ ಮತ್ತಷ್ಟು ಬೆಳೆಯಲಿದೆ’ ಎಂದರು.

ಶೇ 100ರಷ್ಟು ಸರಿ ಇಲ್ಲ: ‘ಯಾವ ಕಾರ್ಖಾನೆಯೂ ಶೇ 100ರಷ್ಟು ಸರಿ ಇರುವುದಿಲ್ಲ ಎನ್ನುವುದು ಗೊತ್ತಿದೆ. ಹೀಗಿದ್ದರೂ ನಾವು ತೊಂದರೆ ಕೊಡುತ್ತಿಲ್ಲ; ಸವಾರಿ ಮಾಡುತ್ತಿಲ್ಲ. ನವೀಕರಣ ಸೇರಿದಂತೆ ಯಾವುದಕ್ಕೂ ಅಡ್ಡಿಪಡಿಸಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದೊಂದಿಗೆ ಉತ್ತಮ ಸಹಯೋಗ ಇಟ್ಟುಕೊಳ್ಳಬೇಕು. ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಮ್ಮ ಉದ್ದೇಶಕ್ಕೆ ಕೈಜೋಡಿಸಬೇಕು’ ಎಂದು ತಿಳಿಸಿದರು.

‘ಒಂದೇ ಸೂರಿನಲ್ಲಿ ವಿವಿಧ ಬೆಳೆಗಳ ಮಾರ್ಗದರ್ಶನ ನೀಡುವುದಕ್ಕಾಗಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಸಂಸ್ಥೆಯಲ್ಲಿ ಜಾಗ ನೀಡಿದ್ದೇವೆ. ವಿ.ವಿ.ಯವರು ಇಲ್ಲಿಗೆ ಹೆಚ್ಚಿನ ಹಾಗೂ ಅನುಭವಿ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು. ಅನ್ನದಾತನ ರಕ್ಷಣೆ ಮಾಡುವವರೆಗೂ ಸ್ವಾವಲಂಬಿ ಭಾರತ ಕಾಣಬಹುದಾಗಿದೆ’ ಎಂದರು.

ಕೇಂದ್ರ ಸ್ಥಾಪನೆ: ಸಂಸ್ಥೆಯ ನಿರ್ದೇಶಕ ಡಾ.ಆರ್‌.ಬಿ. ಖಾಂಡಗಾವೆ, ‘ಹಸಿರು ಇಂಧನ ಉತ್ಕೃಷ್ಟತಾ ಕೇಂದ್ರ’ ಸ್ಥಾಪಿಸಲು ಯೋಜಿಸಲಾಗಿದೆ. ಇದಕ್ಕೆ ₹ 18.50 ಕೋಟಿ ಅನುದಾನ ಬೇಕಾಗುತ್ತದೆ. ಸಂಸ್ಥೆಯು ವಿವಿಧೆಡೆ ಹೊಂದಿರುವ ಜಾಗವನ್ನು ಇದಕ್ಕೆ ಬಳಸಿಕೊಳ್ಳಬಹುದಾಗಿದೆ. ದೇಶದಲ್ಲೆ ಮೊದಲನೆ ಕೇಂದ್ರ ಇದಾಗಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಸಚಿವರು, ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು.

ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಆಯುಕ್ತ ಅಕ್ರಂ ಪಾಷಾ, ‘ಕಳೆದ ಎರಡು ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಶೇ 99ರಷ್ಟು ಬಿಲ್ ಪಾವತಿಸಿವೆ. ಈ ಹಂಗಾಮಿನಲ್ಲಿ ಈಗಾಗಲೇ ಶೇ 50ರಷ್ಟು ಪಾವತಿಸಿವೆ. ಕೇಂದ್ರ ಸರ್ಕಾರದಿಂದ ಎಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಹಾಯಧನ ಒದಗಿಸಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ ಅಶೋಕ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ ಹೆಗ್ಗಳಗಿ, ಕೃಷ್ಣಕಾಂತ ರೆಡ್ಡಿ, ಅಜಿತ ದೇಸಾಯಿ. ರಮೇಶ ಪಟ್ಟಣ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ರಮೇಶ ಬಾಬು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು