ಮಂಗಳವಾರ, ಮಾರ್ಚ್ 9, 2021
31 °C
ಅಧಿಕಾರಿಗಳಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೂಚನೆ

ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿ: ಡಾ.ಕೆ. ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಆರೋಗ್ಯ ಇಲಾಖೆ ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾರ್ವಜನಿಕರಿಗೆ ಕೈಗೆಟುಕುವಂತೆ ಅಥವಾ ಉಚಿತವಾಗಿ ಆರೋಗ್ಯ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ.‌ ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಹಳಷ್ಟು ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಅನುಷ್ಠಾನದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು’ ಎಂದರು.

‘ಉತ್ತಮ ಸೌಲಭ್ಯ ಒದಗಿಸಲು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ವಿಲೀನಗೊಳಿಸಿ ಒಂದೇ ಇಲಾಖೆ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಗಿದೆ’ ಎಂದರು.

ವರದಿ ನೀಡಬೇಕು:

‘ಜಿಲ್ಲಾಸ್ಪತ್ರೆಯನ್ನು ಎನ್.ಎ.ಬಿ.ಎಚ್. ಹಾಗೂ ಎನ್.ಕ್ಯೂ.ಎ.ಎಸ್. ಗುಣಮಟ್ಟಕ್ಕೆ ತಕ್ಕಂತೆ ಉನ್ನತೀಕರಣಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಬಿಮ್ಸ್ ನಿರ್ದೇಶಕರು ಹಾಗೂ ಜಿಲ್ಲಾ ಸರ್ಜನ್‌ಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಕೂಡ ನಿಯಮಿತವಾಗಿ ಈ ಬಗ್ಗೆ ಪರಿಶೀಲಿಸಬೇಕು ಎಂದರು.

‘ತಾಲ್ಲೂಕು ಆಸ್ಪತ್ರೆಗಳಿಗೆ ಹೋಲಿಸಿದರೆ ಜಿಲ್ಲಾಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ಹೆರಿಗೆ ಆಗುತ್ತಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಇದಕ್ಕೆ ಕಾರಣವೇನು ಎನ್ನುವ ವರದಿ ನೀಡಬೇಕು’ ಎಂದು ಸೂಚಿಸಿದರು.

‘ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಪ್ರತಿ ವಾರ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಪ್ರತಿ ವಿಭಾಗಗಳಿಗೂ ಗುರಿ ನಿಗದಿಪಡಿಸಬೇಕು. ಒಂದು ವೇಳೆ ನಿಗದಿ ಗುರಿ ಸಾಧಿಸದ ವಿಭಾಗಗಳ ಮುಖ್ಯಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಶಿಫಾರಸು ಮಾಡಬೇಕು’ ಎಂದು ’ ಎಂದು ಬಿಮ್ಸ್‌ ನಿರ್ದೇಶಕರಿಗೆ ತಾಕೀತು ಮಾಡಿದರು.

‘ಎಲ್ಲ ಶಾಲೆಗಳಲ್ಲೂ ಸಮಗ್ರ ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಬೇಕು’ ಎಂದು ತಿಳಿಸಿದರು.

ಸ್ವಚ್ಛತೆ ಕಾಪಾಡಿಕೊಳ್ಳಬೇಕು:

‘ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು. ಆಸ್ಪತ್ರೆಗಳ ಗುಣಮಟ್ಟ ಕಟ್ಟಡಗಳಿಂದ ಅಲ್ಲ; ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ತಿಳಿಯುತ್ತದೆ. ಆರೋಗ್ಯಕರ ವಾತಾವರಣ ಸೃಷ್ಟಿಸಲು ಇದು ಬಹಳ ಅಗತ್ಯವಾಗಿದೆ’ ಎಂದರು.

ಬಿಮ್ಸ್ ನಿರ್ದೇಶಕ ಡಾ.ವಿನಾಯ ದಾಸ್ತಿಕೊಪ್ಪ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

‘139 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 84 ಕೇಂದ್ರಗಳು 24×7 ಕಾರ್ಯನಿರ್ವಹಿಸುತ್ತಿವೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

ಆರೋಗ್ಯ ಇಲಾಖೆ ನಿರ್ದೇಶಕ ಓಂಪ್ರಕಾಶ್ ಪಾಟೀಲ, ಜಿಲ್ಲಾ ಪಂಚಾಯ್ತಿ ಸಿಇಒ ದರ್ಶನ್ ಎಚ್.ವಿ., ಹೆಚ್ಚುವರಿ ನಿರ್ದೇಶಕ ಡಾ.ಅಪ್ಪಾಸಾಬ ನರಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಡಿಎಚ್‌ಒ ಡಾ.ಗಡೇದ, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಐ.ಪಿ. ಗಡಾದ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ ಭಾಗವಹಿಸಿದ್ದರು.

ನೋಟಿಸ್ ನೀಡಲು ಸೂಚನೆ

ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ವಿಳಂಬ ಆಗಿರುವುದನ್ನು ಪ್ರಶ್ನಿಸಿ ಸಚಿವರು, ‘ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಬೇಕು. ಬಿಮ್ಸ್ ಆವರಣದಲ್ಲಿ ಆರಂಭವಾಗಿರುವ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯಾದ್ಯಂತ 108 ಆಂಬುಲೆನ್ಸ್ ಮೂಲಕ ಆರೋಗ್ಯ ಸೇವೆ ಮೇಲ್ವಿಚಾರಣೆಗೆ ಒಬ್ಬ ಕಾರ್ಯಕ್ರಮ ಅಧಿಕಾರಿ ನಿಯೋಜಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಎನ್.ಎಚ್.ಎಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಪ್ರತಿ ತಿಂಗಳೂ 5ರ ಒಳಗೆ ವೇತನ ಪಾವತಿಸಬೇಕು ಮತ್ತು  ನಿಯಮಿತವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಬಯೊಮೆಟ್ರಿಕ್ ವ್ಯವಸ್ಥೆ ಕಲ್ಪಿಸಬೇಕು. ವೈದ್ಯರು ಸಮಯಪಾಲನೆ ಮಾಡಬೇಕು. ಕರ್ತವ್ಯದ ಅವಧಿಯಲ್ಲಿ ಲಭ್ಯವಾಗದ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಕೋವಿಡ್-19 ಪ್ರಕರಣಗಳು ಇಳಿಮುಖ ಆಗುತ್ತಿರುವುದರಿಂದ ಕೋವಿಡೇತರ ಚಿಕಿತ್ಸೆ ನೀಡಲು ಅನುಕೂಲ ಆಗುವಂತೆ ನೋಡಿಕೊಳ್ಳಬೇಕು. ನಿಗದಿತ ಕೋವಿಡ್ ಬ್ಲಾಕ್ ಮಾರ್ಪಾಡು ಮಾಡಬೇಕು.
-ಡಾ.ಕೆ. ಸುಧಾಕರ್, ಆರೋಗ್ಯ ಸಚಿವ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು