ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆಬೀಜ ವಿತರಣೆಗೆ ಸಚಿವ ಸತೀಶ ಜಾರಕಿಹೊಳಿ ಸೂಚನೆ

‘ಕುಡಿಯುವ ನೀರು; ಆರೋಗ್ಯ, ಶಿಕ್ಷಣ, ಕೃಷಿಗೆ ಆದ್ಯತೆ’
Published 30 ಮೇ 2023, 10:35 IST
Last Updated 30 ಮೇ 2023, 10:35 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಬುಧವಾರ (ಮೇ 31) ರೈತರಿಗೆ ಬಿತ್ತನೆಬೀಜ- ಗೊಬ್ಬರ ವಿತರಿಸಬೇಕು. ಆಯಾ ಶಾಸಕರ ಗಮನಕ್ಕೆ ತಂದು ವಿತರಣೆ ಕಾರ್ಯ ಆರಂಭಿಸಬೇಕು' ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೂಚನೆ ನೀಡಿದರು.

ಜಿಲ್ಲೆಯ ಅಭಿವೃದ್ಧಿ ಕುರಿತು ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

'ಬೀಜ ಖರೀದಿಗೆ ರೈತರು ದೂರ ಅಲೆಯುವುದನ್ನು ತಪ್ಪಿಸಲು ಆದಷ್ಟು ಸಮೀಪದಲ್ಲಿ ಬೀಜ ಲಭಿಸುವಂತೆ ಕ್ರಮ ಕೈಗೊಳ್ಳಬೇಕು' ಎಂದು ತಿಳಿಸಿದರು.

'ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ಬಾಕಿ ಇದ್ದರೆ ಕೂಡಲೇ ಬಿಡುಗಡೆ ಮಾಡಬೇಕು. ಆತ್ಮಹತ್ಯೆ ವರದಿಯಾದ ಕೂಡಲೇ ಮರಣೋತ್ತರ ಪರೀಕ್ಷೆ ನಡೆಸಿ ಪರಿಹಾರ ಬಿಡುಗಡೆಗೊಳಿಸಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು' ಎಂದು ತಿಳಿಸಿದರು.

'ವಿಪತ್ತು ಸಂದರ್ಭದಲ್ಲಿ ಯಾವುದೇ ಜಾನುವಾರುಗಳು ಮೃತಪಟ್ಟಾಗ ಅವುಗಳ ಮಾಲೀಕರಿಗೆ ಅಧಿಕಾರಿಗಳು ಸ್ವತಃ ಮನೆಗೆ ತೆರಳಿ ಪರಿಹಾರ ವಿತರಿಸಬೇಕು.

ಪರಿಹಾರ ಪಡೆಯುವ ಪ್ರಕ್ರಿಯೆ ಗೊತ್ತಿಲ್ಲದಿರುವುದರಿಂದ ಅನೇಕ ಜನರು ಪರಿಹಾರ ಪಡೆಯಲು ಮುಂದಾಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳೇ ಆಸಕ್ತಿ ವಹಿಸಿ ಪರಿಹಾರ ನೀಡಬೇಕು' ಎಂದೂ ತಾಕೀತು ಮಾಡಿದರು.

ಶಿಕ್ಷಕರ ಕೊರತೆ ಆಗದಿರಲಿ:

ಶಾಲೆಗಳು ಆರಂಭಗೊಂಡಿವೆ. ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಬೇಕು.

ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ತೆರವುಗೊಳಿಸಬೇಕು' ಎಂದೂ ಹೇಳಿದರು.

'ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಔಷಧಿಗಳ ದಾಸ್ತಾನು ಇರಬೇಕು. ಬೆಳಗಾವಿಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಯಂತ್ರೋಪಕರಣ ಒದಗಿಸಿ ಆದಷ್ಟು ಬೇಗನೇ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

'ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅತೀ ಹೆಚ್ಚು ಬಿಪಿಎಲ್ ಕಾರ್ಡು ಇರುವ ಕಡೆಗಳಲ್ಲಿ ಪಡಿತರ ಅಂಗಡಿ ಆರಂಭಿಸಲು ಪರವಾನಗಿ ನೀಡಬೇಕು ಎಂದರು.

ಕುಡಿಯುವ ನೀರು:

'ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬವಾದಷ್ಟು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಾಮಗಾರಿಗಳು ವಿಳಂಬಗೊಳ್ಳಬಾರದು. ಅಧಿಕಾರಿಗಳು ನಿರಂತರ ನಿಗಾವಹಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು' ಎಂದು ಸಚಿವ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

'ಬೆಳಗಾವಿ ನಗರದ ಕುಡಿಯುವ ನೀರು ಪೂರೈಕೆ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಕುರಿತು ಪ್ರತ್ಯೇಕವಾಗಿ ಸಭೆ ನಡೆಸಿ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ಹೇಳಿದರು.

ಚುರುಕಿನಿಂದ ಕೆಲಸ ಮಾಡಿ:

'ಹೊಸ ಸರ್ಕಾರದ ಆಶಯದ ಪ್ರಕಾರ ಅಧಿಕಾರಿಗಳು ಕೆಲಸ ಮಾಡಬೇಕು. ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂಬುದು ಸರ್ಕಾರದ ಆದ್ಯತೆ. ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು.

ಕ್ರಿಯಾಶೀಲ ಅಧಿಕಾರಿಗಳಿಗೆ ಕೆಲಸ ಮಾಡಲು ಪ್ರೋತ್ಸಾಹ ನೀಡಲಾಗುವುದು' ಎಂದು ಸಚಿವರಾದ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT