ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಮಾದರಿ ವಸ್ತು ಸಂಗ್ರಹಾಲಯ

‘ಪೊಲೀಸ್‌ ವಸ್ತು ಸಂಗ್ರಹಾಲಯ’ಕ್ಕೆ ಭೇಟಿ, ಗೃಹ ಸಚಿವ ಆಗರ ಜ್ಞಾನೇಂದ್ರ ಹೇಳಿಕೆ
Last Updated 7 ಜುಲೈ 2022, 5:01 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದ ಪೊಲೀಸ್‌ ವ್ಯವಸ್ಥೆಗೆ ಹೆಮ್ಮೆ ತರುವಂಥ ‘ಪೊಲೀಸ್‌ ವಸ್ತು ಸಂಗ್ರಹಾಲಯ’ ದೆಹಲಿಯಲ್ಲಿದೆ. ಬೆಳಗಾವಿಯ ಸಂಗ್ರಹಾಲಯವನ್ನೂ ಅದೇ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು’ ಎಂದು ಗೃಹ ಸಚಿವ ಆಗರ ಜ್ಞಾನೇಂದ್ರ ತಿಳಿಸಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯ ಸಮೀಪದಲ್ಲಿರುವ ‘ಪೊಲೀಸ್ ಮ್ಯೂಸಿಯಂ’ಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಉತ್ತಮ ರೀತಿಯ ಕಾರ್ಯ ಮಾಡುತ್ತಿದೆ. ಬೆಳಗಾವಿಯಲ್ಲಿನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದವರಿಗೆ ಇದು ಅರ್ಥವಾಗುತ್ತದೆ. ಜನರನ್ನು ಕಾಪಾಡುವಲ್ಲಿ ಜೀವ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿ ಭಾವಚಿತ್ರಗಳನ್ನು ಇಲ್ಲಿ ಇರಿಸಬೇಕು. ಅವರ ತ್ಯಾಗ, ಧೈರ್ಯವು ಇನ್ನೊಬ್ಬರಿಗೆ ಮಾದರಿಯಾಗುತ್ತದೆ’ ಎಂದರು.

‘ಪ್ರಸ್ತುತ ಹೆಚ್ಚು ಅನುದಾನ ಬಿಡುಗಡೆ ಮಾಡಿ ಪೊಲೀಸ್ ಇಲಾಖೆಯನ್ನು ಬಲಪಡಿಸಲಾಗುತ್ತಿದೆ. ಜುಲೈ 7ರಂದು ಜಿಲ್ಲೆಯಲ್ಲಿ ಎರಡು ಹೊಸ ಪೊಲೀಸ್ ಠಾಣೆಯನ್ನು ಉದ್ಘಾಟನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾಡಿಗೆ, ದುರಸ್ತಿ ಅಗತ್ಯವಿರುವ 100ಕ್ಕೂ ಹೆಚ್ಚು ಠಾಣೆಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುವುದು’ ಎಂದರು.

‘ಸೈಬರ್‌ ಅಪರಾಧ ಪತ್ತೆ ವಿಭಾಗವನ್ನು ಬಲಪಡಿಸಲಾಗುವುದು. ಸದ್ಯದಲ್ಲೇ 5,000 ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಪ್ರಕ್ರಿಯೆ ನಡೆಯಲಿದೆ’ ಎಂದು ಹೇಳಿದರು.

ಮನೆಗಳ ನಿರ್ಮಾಣ: ‘ಸಿಬ್ಬಂದಿಗೆ ರಾಜ್ಯದಾದ್ಯಂತ ₹ 2,000 ಕೋಟಿ ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪೊಲೀಸ್‌ ಕುಟುಂಬಗಳು ಸುರಕ್ಷಿತ ಮನೆಗಳಲ್ಲಿ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗುವುದು’ ಎಂದರು.

‘ಸದ್ಯ ಎರಡು ಬೆಡ್‌ರೂಮ್‌ಗಳನ್ನು ಹೊಂದಿದ 164 ಮನೆಗಳ ನಿರ್ಮಾಣ ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಧರ್ಮಾಧಿಕಾರಿಗೆ ಅಭಿನಂದನೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭಾ ನಾಮನಿರ್ದೇಶಕ ಸದಸ್ಯರನ್ನಾಗಿ ನೇಮಕ ಮಾಡಿದ್ದು ಅಭಿನಂದನೀಯ. ಕೇಂದ್ರ ಸರ್ಕಾರಕ್ಕೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

‘ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ, ಸಮಾಜಸೇವಾ ಕಾರ್ಯಗಳಿಂದ ಗ್ರಾಮೀಣ ಜನತೆಗೆ ಅನುಕೂಲವಾಗಿದೆ. ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುತ್ತಿದ್ದಾರೆ. ಇದು ಪೂಜ್ಯರಿಗೆ ಸಂದ ಗೌರವ’ ಎಂದರು.

ಉತ್ತರ ವಲಯದ ಐಜಿಪಿ ಸತೀಶಕುಮಾರ, ನಗರ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ, ಡಿಸಿಪಿ ರವೀಂದ್ರ ಗಡಾದಿ, ನಗರದ ಕ್ರೈಂ ವಿಭಾಗದ ಡಿಸಿಪಿ ಪಿ.ವಿ. ಸ್ನೇಹಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾಂವಿ ಹಾಗೂ ನಗರದ ಪೊಲೀಸ್ ಅಧಿಕಾರಿ ಸಿಬ್ಬಂದಿ ಇದ್ದರು.

*

ರಾಮದುರ್ಗ ಪೊಲೀಸರಿಗೆ ಅಭಿನಂದನಾ ಪತ್ರ

‘ಚಂದ್ರಶೇಖರ ಗುರೂಜಿ ಅವರ ಹತ್ಯಗೈದ ಆರೋಪಿಗಳನ್ನು ಬಂಧಿಸುವಲ್ಲಿ ರಾಮದುರ್ಗ ಪೊಲೀಸರು ತೋರಿದ ಸಾಹಸ, ಚಾಣಾಕ್ಷತನ ಮೆಚ್ಚುವಂಥದ್ದು. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಗುರುವಾರ ಅಭಿನಂದನಾ ಪತ್ರ ನೀಡಲಾಗುವುದು’ ಎಂದು ಆರಗ ಜ್ಞಾನೇಂದ್ರ ಹೇಳಿದರು.

‘ಎಲ್ಲದಕ್ಕೂ ಪೊಲೀಸರನ್ನೇ ಹೊಣೆ ಮಾಡುವ ಪರಿಪಾಠ ಬೆಳೆದುಬಿಟ್ಟಿದೆ. ಅಪರಾಧ ಕೃತ್ಯಗಳು ನಡೆದಾಗ ಅವುಗಳನ್ನು ಹೇಗೆ ಮಟ್ಟ ಹಾಕುತ್ತಾರೆ ಎನ್ನುವುದರ ಮೇಲೆ ಅವರ ಕಾರ್ಯಕ್ಷಮತೆಯನ್ನು ತಿಳಿಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT