ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಹೂಡಿಕೆಗೆ ಸೆಳೆಯಲು ಯತ್ನ

ಮಹಾರಾಷ್ಟ್ರದ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿದ ಸಚಿವ ಶೆಟ್ಟರ್
Last Updated 11 ಸೆಪ್ಟೆಂಬರ್ 2019, 12:17 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾರಾಷ್ಟ್ರದ ಕೈಗಾರಿಕೋದ್ಯಮಿಗಳು ಜಿಲ್ಲೆಯಲ್ಲಿ ಹೂಡಿಕೆಗೆ ಮುಂದಾದರೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಬುಧವಾರ ನಡೆದ ಸಂವಾದ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಸ್ಥಾಪನೆ ಮತ್ತು ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಭವಿಷ್ಯದಲ್ಲಿ ಅತ್ಯಂತ ಪ್ರಮುಖ ಕೈಗಾರಿಕಾ ಕಾರಿಡಾರ್ ಆಗಿ ರೂಪಗೊಳ್ಳಲಿದೆ. ನಿವೇಶನ ಹಂಚಿಕೆ, ಸಹಾಯಧನ, ಉತ್ಪನ್ನಗಳಿಗೆ ದರ ನಿಗದಿ ಸೇರಿದಂತೆ ಎಲ್ಲ ಬಗೆಯ ನೆರವನ್ನೂ ನೀಡಲಾಗುವುದು. ಈ ನಿಟ್ಟಿನಲ್ಲಿ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ಕೆಲವು ತಿಂಗಳಲ್ಲಿ ಸ್ಪಷ್ಟವಾಗಲಿದೆ

‘ಮಹಾರಾಷ್ಟ್ರದಲ್ಲಿ ಏನೇನು ಸೌಲಭ್ಯಗಳಿವೆ, ಇಲ್ಲಿನ ನಿರೀಕ್ಷೆಗಳೇನು ಎನ್ನುವುದನ್ನು ಲಿಖಿತವಾಗಿ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದ್ದೇನೆ. ಫೌಂಡ್ರಿ, ಜವಳಿ ಹಾಗೂ ಆಹಾರ ಸಂಸ್ಕರಣೆ ಕೈಗಾರಿಕೆಗಳ ಸ್ಥಾಪನೆಗೆ ಅವರು ಒಲವು ತೋರಿದ್ದಾರೆ. ಎಷ್ಟು ಕಂಪನಿಗಳು ಇಲ್ಲಿಗೆ ಬರಲಿವೆ, ಎಷ್ಟು ಹೂಡಿಕೆಯಾಗಲಿದೆ ಎನ್ನುವುದು ಕೆಲವು ತಿಂಗಳ ನಂತರ ಸ್ಪಷ್ಟವಾಗಲಿದೆ’ ಎಂದು ಪ್ರತಿಕ್ರಿಯಿಸಿದರು.

‘ಹಿಂದೆ ಬೆಳಗಾವಿಗೆ ವಿಮಾನಸಂಪರ್ಕ ಇಲ್ಲ ಎನ್ನುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಉಡಾನ್‌ ಯೋಜನೆಯಿಂದಾಗಿ ಬಹಳ ಅನುಕೂಲವಾಗಿದೆ. ಸಂಪರ್ಕ ಸುಧಾರಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಬೇಕು’ ಎಂದರು.

ಡಿಸೆಂಬರ್‌ನಲ್ಲಿ ಬಿಡುಗಡೆ

‘ಹೊಸ ಕೈಗಾರಿಕಾ ನೀತಿಯನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಕೈಗಾರಿಕೋದ್ಯಮಿಗಳು ಮತ್ತು ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಆಧರಿಸಿ‌ ಅಂತಿಮಪಡಿಸಲಾಗುವುದು. ದೇಶದಲ್ಲೇ ಮಾದರಿಯಾದ ನೀತಿ ರೂಪಿಸಲಾಗುವುದು. ಕೈಗಾರಿಕಾ ನಿವೇಶನಗಳ ಬೆಲೆ ನಿಗದಿ ಹಾಗೂ ಹಂಚಿಕೆಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲಾಗುವುದು. ಆಡಳಿತದಲ್ಲಿ ಸಕಾರಾತ್ಮಕ ಬದಲಾವಣೆ ತರಲಾಗುವುದು’ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ‌ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಮಾತನಾಡಿ, ‘ಕನ್ನಡ-ಮರಾಠಿ ಭಾಷಿಕರು ಸಮನ್ವಯದಿಂದ ಬದುಕುತ್ತಿರುವ ನಾಡಿದು. ಇಲ್ಲಿ ಕೈಗಾರಿಕೆ ಬೆಳವಣಿಗೆ ಆಗಬೇಕು. ಅಗತ್ಯ ಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ’ ಎಂದರು.

ಎಲ್ಲ ರೀತಿಯ ಸಹಕಾರ

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ‘ಫೌಂಡ್ರಿ ಹಾಗೂ ಆಟೊಮೊಬೈಲ್ ಕ್ಷೇತ್ರದಲ್ಲಿ ಬೆಳಗಾವಿ ಇಡೀ ರಾಷ್ಟ್ರದಲ್ಲಿ ಮುಂಚೂಣಿಯಲ್ಲಿದೆ. ಇತರ ರಾಜ್ಯದ ಕೈಗಾರಿಕೋದ್ಯಮಿಗಳು ಇಲ್ಲಿ ಬಂಡವಾಳ ಹೂಡಿಕೆಗೆ ಮುಂದಾದರೆ ಎಲ್ಲ ರೀತಿಯ ಸಹಕಾರ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಕಣಗಲಾ ಹಾಗೂ ಕಿತ್ತೂರಿನಲ್ಲಿ ಲಭ್ಯವಿರುವ ಕೈಗಾರಿಕಾ ನಿವೇಶನಗಳ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ಮಾಹಿತಿ ನೀಡಿದರು.

ಬೆಳಗಾವಿ, ಸಾಂಗ್ಲಿ, ಕೊಲ್ಹಾಪುರ, ಇಚಲಕರಂಜಿ ಸೇರಿದಂತೆ ವಿವಿಧ ನಗರಗಳ ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿನಿಧಿಗಳು, ಆಟೊಮೊಬೈಲ್‌, ಅರ್ಥಮೂವರ್ಸ್, ಪ್ಲಾಸ್ಟಿಕ್, ಆಹಾರ ಸಂಸ್ಕರಣೆ ಘಟಕಗಳ ಉದ್ಯಮಿಗಳು ಪಾಲ್ಗೊಂಡಿದ್ದರು.

ಕೈಗಾರಿಕಾ ಇಲಾಖೆ ಆಯುಕ್ತ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ನಿರ್ದೇಶಕಿ ಗುಂಜನ್ ಕೃಷ್ಣನ್, ಬಿಜೆಪಿ ಮುಖಂಡ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT