ಭಾನುವಾರ, ಸೆಪ್ಟೆಂಬರ್ 19, 2021
31 °C

ಸಚಿವ ಸ್ಥಾನ ಸಿಗದಿದ್ದುದ್ದಕ್ಕೆ ಅಸಮಾಧಾನವಿಲ್ಲ: ಡಿ.ಎಂ. ಐಹೊಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗರಮುನ್ನೋಳಿ (ಬೆಳಗಾವಿ ಜಿಲ್ಲೆ): ‘ಸಚಿವ ಸ್ಥಾನ ನೀಡುವುದಾಗಿ ಪಕ್ಷದ ನಾಯಕರು ಭರವಸೆ ನೀಡಿದ್ದರು. ಆದರೆ, ಕೊನೆ ಹಂತದಲ್ಲಿ ತಪ್ಪಿ ಹೋಯಿತು. ಸಚಿವನಾಗುವುದು ನನ್ನ ನಸೀಬಿನಲ್ಲಿಲ್ಲ’ ಎಂದು ರಾಯಬಾಗ ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಸಮೀಪದ ಬಂಬಲವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 1 ಕೋಟಿ ಅನುದಾನದಲ್ಲಿ ಬಂಬಲವಾಡ– ನಾಗರಮುನ್ನೋಳಿ ಕೂಡುವ ರಸ್ತೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸ್ಥಾನದ ಭರವಸೆ ಇತ್ತು. ಸಿಗದಿರುವುದಕ್ಕೆ ಯಾವುದೇ ನಾಯಕರ ಕುರಿತು ನನಗೆ ಅಸಮಾಧಾನವಿಲ್ಲ. ಮುಂದೆಯೂ ನಿರೀಕ್ಷೆ ಇಟ್ಟುಕೊಳ್ಳುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುತ್ತೇನೆ’ ಎಂದರು.

‘ಬಸದಿಗಳ ದುರಸ್ತಿಗೆ ₹ 2 ಕೋಟಿ ಮಂಜೂರಾಗಿದೆ. ತೋರಣಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು ಎನ್ನುವುದು ಆ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸರ್ಕಾರ ನನ್ನ ಮನವಿಗೆ ಸ್ಪಂದಿಸಿ ಮಂಜೂರಾತಿ ನೀಡಿದೆ. ಇದರಿಂದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

‘ಅತಿವೃಷ್ಟಿಯಿಂದ ಹಾನಿಯಾದ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷವಾಗಿ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದ್ದು,  ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸಬೇಕು’ ಎಂದು ಸೂಚಿಸಿದರು.

ಮುಖಂಡ ಪವನ ಕತ್ತಿ ಮಾತನಾಡಿ, ‘ರಾಯಬಾಗ ಕ್ಷೇತ್ರದಲ್ಲಿ ಬರುವ ಚಿಕ್ಕೋಡಿ ತಾಲ್ಲೂಕಿನ ಹಳ್ಳಿಗಳು ಅಭಿವೃದ್ಧಿ ಕಾಣಲು ಶಾಸಕ ಐಹೊಳೆ ಕೊಡುಗೆ ಅಪಾರವಾಗಿದೆ. ಎಲ್ಲ ಇಲಾಖೆಗಳಿಂದ ಅನುದಾನ ತರುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖಂಡರಾದ ಮಹೇಶ ಭಾತೆ, ಸುರೇಶ ಬೆಲ್ಲದ, ಬಸವರಾಜ ಕುಂಬಾರ, ಹಸನ ಸನದಿ, ದೇವರಾಜ ಪಶ್ಚಾಪುರೆ, ಬಸು ಮಾಳಗಿ, ರವಿ ಹಿರೆಕೋಡಿ, ಚಂದ್ರಶೇಖರ ಅರಭಾಂವಿ, ಸದಾಶಿವ ಘೋರ್ಪಡೆ, ಬಸಲಿಂಗ ಕಾಡೇಶಗೋಳ, ಮಹಾತೇಶ ಯಶವಂತಗೋಳ, ಐ.ಎ. ಕಾಕೋಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.