ಶನಿವಾರ, ಅಕ್ಟೋಬರ್ 23, 2021
20 °C
ಶಾಸಕರ ಅನುದಾನ ಬಳಕೆಯಲ್ಲಿ ಮುಂದಿರುವ ಹೆಬ್ಬಾಳಕರ

ಸಮುದಾಯ ಭವನಗಳಿಗೆ ‘ಲಕ್ಷ್ಮಿ’; ವರ ಶಾಸಕರ ಅನುದಾನ ಬಳಕೆಯಲ್ಲಿ ಹೆಬ್ಬಾಳಕರ ಮುಂದೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಅವರು, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ತಾವು ಪ್ರತಿನಿಧಿಸುತ್ತಿರುವ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿನ ಸಮುದಾಯ ಭವನಗಳ ನಿರ್ಮಾಣಕ್ಕೆ ಒದಗಿಸಿದ್ದಾರೆ.

ಗ್ರಾಮಸ್ಥರು ದೇವಾಲಯಗಳೊಂದಿಗೆ ಜನರಿಗೆ ಅನುಕೂಲ ಆಗಲೆಂದು ಸಮುದಾಯ ಭವನಗಳನ್ನು ನಿರ್ಮಿಸಲು ಯೋಜಿಸುತ್ತಾರೆ. ಇದಕ್ಕೆ ದೇಣಿಗೆಯನ್ನು ಸಂಗ್ರಹಿಸಿ ಹಣ ಹೊಂದಿಸುವುದು ಜೊತೆಗೆ ಶಾಸಕರ ನಿಧಿಯಿಂದಲೂ ಅವರು ನೆರವು ಕೇಳುವುದು ಸಾಮಾನ್ಯವಾಗಿದೆ. ಇದಕ್ಕೆ ಲಕ್ಷ್ಮಿ ಸ್ಪಂದಿಸಿದ್ದಾರೆ.

ನಿಧಿಯಲ್ಲಿ, ಇದೇ ಸೆಪ್ಟೆಂಬರ್‌ವರೆಗೆ ಬರೋಬ್ಬರಿ 62 ಸಮುದಾಯ ಭವನಗಳಿಗೆ ನೆರವು ಕೊಟ್ಟಿದ್ದಾರೆ. ಇವೆಲ್ಲವೂ ದೇವಾಲಯಗಳಿಗೆ ಹೊಂದಿಕೊಂಡಂತೆ ನಡೆಯುತ್ತಿರುವ ಕಾಮಗಾರಿಗಳಾಗಿವೆ. ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಕಾಮಗಾರಿಯು ವಿವಿಧ ಹಂತದಲ್ಲಿವೆ.

ಅವರಿಗೆ ಸರ್ಕಾರದಿಂದ ಸೆಪ್ಟೆಂಬರ್‌ವರೆಗೆ ₹ 4.60 ಕೋಟಿ ಅನುದಾನ ಬಂದಿದೆ. ಅದರಲ್ಲಿ ₹ 4.28 ಕೋಟಿ ಖರ್ಚು ಮಾಡಿದ್ದಾರೆ. ₹ 31.77 ಲಕ್ಷ ಮಾತ್ರವೇ ಉಳಿದಿದೆ. ನಿಧಿ ಬಳಕೆಯಲ್ಲಿ ಅವರು ಮುಂದಿದ್ದಾರೆ. ಸರ್ಕಾರದಿಂದ ವಾರ್ಷಿಕ ₹ 2 ಕೋಟಿ ಬಿಡುಗಡೆ ಆಗಬೇಕು. ಆದರೆ, ₹ 1 ಕೋಟಿಯನ್ನಷ್ಟೆ ಬಿಡುಗಡೆ ಮಾಡಲಾಗುತ್ತಿದೆ. ದೊರೆಯುವ ಹಣವನ್ನು ತ್ವರಿತವಾಗಿ ಬಳಸುವಲ್ಲಿ ಶಾಸಕಿ ಕ್ರಿಯಾಶೀಲತೆ ತೋರಿದ್ದಾರೆ. ಸಮುದಾಯಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.

ಬೇರೆಯದಕ್ಕೂ ಬಳಸಿ: ಸಮುದಾಯ ಭವನಗಳಿಗೆ ಆದ್ಯತೆ ನೀಡುವ ಮೂಲಕ, ವಿವಿಧ ಧರ್ಮೀಯರು ಮತ್ತು ಸಮಾಜದವರ ‘ಪ್ರೀತಿ’ಗೆ ಪಾತ್ರವಾಗುವುದಕ್ಕೆ ಅವರು ಪ್ರಯತ್ನಿಸಿದ್ದಾರೆ. ಕ್ಷೇತ್ರದಲ್ಲಿ 117 ಗ್ರಾಮಗಳಿವೆ. ಸಮುದಾಯ ಭವನಗಳಿಗೆ ಹಣ ಒದಗಿಸಿದ್ದು ಸಾಕು; ಇತರ ಕಾರ್ಯಕ್ಕೂ ಹಣ ಬಳಸುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ!

‘ಕೊರೊನಾ ಸಂದರ್ಭದಲ್ಲಿ ಅನುದಾನ ಸಮಪರ್ಕವಾಗಿ ಬಂದಿಲ್ಲ. ಬಂದಿದ್ದನ್ನು ಬಳಸಿಕೊಳ್ಳಲು ಕ್ರಮ ವಹಿಸಿದ್ದೇನೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಹೆಚ್ಚಿನ ಹಣವನ್ನು ಸಮುದಾಯ ಭವನಗಳ, ಮಂದಿರಗಳು ಮತ್ತು ಕಲ್ಯಾಣಮಂಟಪಗಳ ನಿರ್ಮಾಣಕ್ಕೆ ಒದಗಿಸಿದ್ದೇನೆ. ಇದರಿಂದ ಅಲ್ಲಿನವರು ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಕೂಲ ಆಗಲಿದೆ’ ಎಂದು ಲಕ್ಷ್ಮಿ ಹೆಬ್ಬಾಳಕರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಎಲ್ಲರಿಗೂ ಅನುಕೂಲ: ‘ನಮ್ಮ ಸಂಸ್ಕೃತಿ ಹಾಗೂ ಧರ್ಮ ಉಳಿಸುವುದಕ್ಕೋಸ್ಕರ ದೇಗುಲಗಳಿಗೆ ಹಣ ನೀಡಿದ್ದೇನೆ. ಎಲ್ಲ ರೀತಿಯ ಸಮಾಜದವರಿಗೂ ಆದ್ಯತೆ ಕೊಟ್ಟಿದ್ದೇನೆ. ರಸ್ತೆ, ಕೆರೆ, ಬಾಂದಾರ ಮೊದಲಾದವುಗಳ ಅಭಿವೃದ್ಧಿಗೆ ಪ್ರತ್ಯೇಕವಾಗಿ ಅನುದಾನ ತಂದಿದ್ದೇನೆ–ತರುತ್ತಿದ್ದೇನೆ. ವಿವಿಧ ಕಂಪನಿಗಳ ಸಹಯೋಗದಲ್ಲಿ ಸಿಎಸ್‌ಆರ್ ನಿಧಿಯಲ್ಲಿ ಶಾಲೆಯಲ್ಲಿ ಸ್ಮಾರ್ಟ್‌ ತರಗತಿ ಕೊಠಡಿಗಳನ್ನು ರೂಪಿಸಲು ಕ್ರಮ ವಹಿಸಿದ್ದೇನೆ. ಹೀಗಾಗಿ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಇಡೀ ಊರಿನ ಎಲ್ಲರಿಗೂ ಅನುಕೂಲ ಆಗಲೆಂದು ಭವನಗಳಿಗೆ ಕೊಟ್ಟಿದ್ದೇನೆ’ ಎನ್ನುತ್ತಾರೆ ಅವರು.

‘ಸರಾಸರಿ ₹ 5 ಲಕ್ಷದಿಂದ ಹಿಡಿದು ₹ 25 ಲಕ್ಷದವರೆಗೆ ಒದಗಿಸಿದ್ದೇನೆ. ಸಮುದಾಯ ಭವನವು ಶಾಶ್ವತ ಆಸ್ತಿಯಾಗಲಿದೆ. ನಮ್ಮ ಶಾಸಕರ ಕೊಡುಗೆ ಇದೆಂದು ಜನರೂ ನೆನೆಯುತ್ತಾರೆ. ಇನ್ಮುಂದೆ ಯುವಕ ಮಂಡಳಗಳು, ಶಾಲೆಗಳ ಅಭಿವೃದ್ಧಿಗೆ ಅನುದಾನ ಬಳಸುವಂತೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ. ಅದರಂತೆ ಶಾಲೆಗಳಲ್ಲಿ ಕಂಪ್ಯೂಟರ್‌, ಟ್ಯಾಬ್‌ಗಳನ್ನು ಒದಗಿಸಲು ಮತ್ತು ಸ್ಮಾರ್ಟ್‌ ತರಗತಿ ಕೊಠಡಿಗಳನ್ನು ರೂಪಿಸಲು ಹಣ ಕೊಡುವುದಕ್ಕೆ ಉದ್ದೇಶಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ಗ್ರಾಮಗಳಲ್ಲಿನ ಜನಸಂಖ್ಯೆ ಆಧರಿಸಿ ಅವರು ಭವನಗಳಿಗೆ ಅನುದಾನ ಒದಗಿಸಿದ್ದಾರೆ.

***

ಬಹುತೇಕ ಬಳಕೆ

ಪ್ರದೇಶಾಭಿವೃದ್ಧಿ ನಿಧಿಯನ್ನು ಬಹುತೇಕ ಬಳಸಿದ್ದೇನೆ. ಸರ್ಕಾರದಿಂದ ತ್ವರಿತವಾಗಿ ಹಣ ಬಿಡುಗಡೆಯಾದರೆ ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದಾಗಿದೆ.‌

–ಲಕ್ಷ್ಮಿ ಹೆಬ್ಬಾಳಕರ, ಶಾಸಕಿ, ಗ್ರಾಮೀಣ ವಿಧಾನಸಭಾ ಕ್ಷೇತ್ರ

***

ಪ್ರಗತಿ ಮಾಹಿತಿ

ಸಾಲು;ಬಿಡುಗಡೆಯಾದ ಅನುದಾನ;ಶಿಫಾರಸಾದ ಕಾಮಗಾರಿ;ಮಂಜೂರಾದ ಕಾಮಗಾರಿ;ಮೊತ್ತ;ಪೂರ್ಣ;ಪ್ರಗತಿ

2018–19;₹1 ಕೋಟಿ;41;22;₹ 1.25 ಕೋಟಿ;00;22

2019–20;₹ 1.60 ಕೋಟಿ;29;18;₹ 1.26 ಕೋಟಿ;5;13

2020–21;₹ 1 ಕೋಟಿ;24;15;₹ 1 ಕೋಟಿ;00;15

2021–22;₹ 1 ಕೋಟಿ;7;4;₹ 47.30 ಲಕ್ಷ;00;04

(2021–22ರಲ್ಲಿ ಸೆಪ್ಟೆಂಬರ್‌ವರೆಗೆ. ಮಾಹಿತಿ: ಉ‍‍ಪ ವಿಭಾಗಾಧಿಕಾರಿ ಕಚೇರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು