ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ವಿನಾಕಾರಣ ವಿವಾದ ಸೃಷ್ಟಿ: ಶಾಸಕ ಪಿ.ರಾಜೀವ

ಪಠ್ಯಪುಸ್ತಕ ಪರಿಷ್ಕರಣೆ: ಬಿಜೆಪಿ ವಕ್ತಾರ, ಶಾಸಕ ಪಿ.ರಾಜೀವ ಆರೋಪ
Last Updated 1 ಜೂನ್ 2022, 16:02 IST
ಅಕ್ಷರ ಗಾತ್ರ

ಬೆಳಗಾವಿ: ‘ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ಸಿಗರು ವಿನಾಕಾರಣ ಜನರ ಭಾವನೆ ಕೆರಳಿಸುತ್ತಿದ್ದಾರೆ. ಸುಳ್ಳು ಹೇಳಿ ಸಾಹಿತಿಗಳನ್ನೂ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ, ಶಾಸಕ ಪಿ.ರಾಜೀವ ಆಕ್ರೋಶ ವ್ಯಕ್ತಪಡಿಸಿದರು.

‘ಪಠ್ಯಕ್ರಮದಲ್ಲಿ ಏನೇನೋ ಬದಲಾವಣೆ ಮಾಡಲಾಗಿದೆ ಎಂಬುದು ಸುಳ್ಳು. ಸಾಹಿತಿಗಳು ಈ ಕುತಂತ್ರಕ್ಕೆ ಬೆಲೆ ಕೊಡಬಾರದು’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಬಗ್ಗೆ ನಮಗೆ ಗೌರವವಿದೆ. ರೋಹಿತ್‌ ಚಕ್ರತೀರ್ಥ ಅವರ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿರೋಧಿಸುವ ಅವರ ನಿಲುವು ಸರಿಯಾದುದಲ್ಲ. ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಿದ್ದರಾಮಯ್ಯ ಅವರನ್ನು ಮೆಚ್ಚಿಸುವ ಉದ್ದೇಶದಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದರು. ಸಿಂಧೂ ಕೊಳ್ಳದ ಸಂಸ್ಕೃತಿಯ ಪಾಠ ಬಿಟ್ಟು ನೆಹರೂ ಕುಟುಂಬದ ಪಾಠ ಸೇರಿಸಿದ್ದರು’ ಎಂದೂ ದೂರಿದರು.

‘ಬರಗೂರು ಅವರ ನೇತೃತ್ವದ ಸಮಿತಿಯ ಪ್ರಮಾದಗಳನ್ನು ಸರಿಪಡಿಸಿ, ಈಗ ಪಠ್ಯಕ್ಕೆ ಸೇರಿಸಲಾಗಿದೆ. ಹಿಂದೆ ಭಗತ್‌ಸಿಂಗ್‌ ಅವರ ‍ಪಾಠ ಮಾತ್ರ ಇತ್ತು. ಈಗ ಅವರೂ ಸೇರಿದಂತೆ ರಾಜಗುರು ಹಾಗೂ ಸುಖದೇವ್‌ ಅವರ ಪಾಠಗಳನ್ನೂ ಸೇರಿಸಲಾಗಿದೆ’ ಎಂದರು.

‘ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಟಿಪ್ಪು ಸುಲ್ತಾನ್‌ ಹಾಗೂ ಹೈದರಾಲಿ ವಿಷಯವನ್ನು ಮಾತ್ರ ಬರಗೂರು ಅವರ ಸಮಿತಿ ಸೇರಿಸಿತ್ತು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ ಅವರಂಥ ವೀರರ ಪಾಠಗಳನ್ನೂ ಈಗ ಸೇರಿಸಲಾಗಿದೆ. ಹಿಂದೆ 7ರಷ್ಟಿದ್ದ ಕುವೆಂಪು ಅವರ ಪಾಠಗಳ ಸಂಖ್ಯೆಯನ್ನು ಈಗ 10ಕ್ಕೆ ಏರಿಸಲಾಗಿದೆ. ಬಸವೇಶ್ವರರ ವಚನಗಳಲ್ಲಿ ಯಾವುದನ್ನೂ ಕೈಬಿಟ್ಟಿಲ್ಲ. ಮೇಲಾಗಿ, ಬರಗೂರು ಅವರು ಕೈಬಿಟ್ಟಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧಿ ಅವರ ಪಾಠಗಳನ್ನು ಹೊಸದಾಗಿ ಸೇರಿಸಲಾಗಿದೆ’ ಎಂದು ವಿವರಿಸಿದರು.

‘ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವ ಕುರಿತು ಈ ಹಿಂದೆಯೇ ತಜ್ಞರ ಸಮಿತಿ ರಚಿಸಲಾಗಿದೆ. ಅದರ ವರದಿ ಬಾರದ ಕಾರಣ ಕೆಲಸ ವಿಳಂಬವಾಗಿದೆ. ಸುವರ್ಣ ವಿಧಾನಸೌಧವು ಈ ಭಾಗದ ಹೆಮ್ಮೆಯ ಪ್ರತೀಕ. ಅದಕ್ಕೆ ಎಲ್ಲರೂ ಗೌರವ ಕೊಡಬೇಕು. ಮಹಿಳೆಯೊಬ್ಬರು ಈ ಸೌಧದ ಮುಂದೆ ತಿಳಿಯದೇ ಶಾವಿಗೆ ಒಣಗಿಸಲು ಹಾಕಿರಬಹುದು. ಇಂಥ ಕೆಲಸ ಯಾರೂ ಮಾಡಬಾರದು’ ಎಂದರು.

ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ, ಮುಖಂಡ ಮುರುಘೇಂದ್ರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT