ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ; ಶಾಲಾಭಿವೃದ್ಧಿ, ಜಿಮ್ ಉಪಕರಣಗಳಿಗೆ ಆದ್ಯತೆ

ಹಲವು ಕಾರ್ಯಕ್ಕೆ ನೆರವಾದ ಸತೀಶ ಜಾರಕಿಹೊಳಿ
Last Updated 19 ಅಕ್ಟೋಬರ್ 2021, 6:25 IST
ಅಕ್ಷರ ಗಾತ್ರ

ಬೆಳಗಾವಿ: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಯಮಕನಮರಡಿ ವಿಧಾನಸಭಾ ಕ್ಷೇತ್ರದಿಂದ ಸತತ 3ನೇ ಬಾರಿಗೆ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಹಲವು ಕಾರ್ಯಕ್ಕೆ ಅನುದಾನ ಒದಗಿಸಿದ್ದಾರೆ.

2018–19, 2019–20, 2020–21ನೇ ಸಾಲಿನಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ₹ 3.60 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹ 3.20 ಕೋಟಿಯನ್ನು ವಿವಿಧ ಕಾರ್ಯಗಳಿಗೆ ಹಂಚಿಕೆ ಮಾಡಿದ್ದಾರೆ. ಇವುಗಳಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. 2021–22ನೇ ಸಾಲಿನಲ್ಲಿ ₹ 1 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 25 ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ 10 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ₹ 45.41 ಲಕ್ಷ ಹಂಚಿಕೆಯಾಗಿದೆ.

ಪ್ರಸಕ್ತ ಸಾಲಿನಲ್ಲಿ ಅಂದರೆ 2021–22ರಲ್ಲಿ ₹ 50 ಲಕ್ಷ ಬಳಸುವುದು ಬಾಕಿ ಇದೆ. ವಾಸ್ತವವಾಗಿ ನಾಲ್ಕು ಸಾಲುಗಳಲ್ಲಿ ವರ್ಷಕ್ಕೆ ತಲಾ ₹ 2 ಕೋಟಿಯತೆ ₹ 8 ಕೋಟಿ ಬಿಡುಗಡೆ ಆಗಬೇಕಿತ್ತು. ಒಟ್ಟಾರೆ ಅವರಿಗೆ ₹ 4.60 ಕೋಟಿ ಬಂದಿದ್ದು, ಅದರಲ್ಲಿ ಸೆಪ್ಟೆಂಬರ್‌ವರೆಗೆ ₹ 3.70 ಕೋಟಿ ಬಳಸಿದ್ದಾರೆ ಎನ್ನುವುದು ಉಪವಿಭಾಗಾಧಿಕಾರಿ ಕಚೇರಿ ಮಾಹಿತಿಯಿಂದ ತಿಳಿದುಬಂದಿದೆ.

ಮಕ್ಕಳು, ಯುವಜನರ ನೆರವಿಗೆ:

ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳ ಅಭಿವೃದ್ಧಿ ಹಾಗೂ ಯವಕರು ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನೆರವಾಗುವ ಜಿಮ್‌ಗಳಿಗೆ ಸಲಕರಣೆಗಳನ್ನು ನೀಡಲು ಸಿಂಹಪಾಲನ್ನು ಅವರು ನೀಡಿದ್ದಾರೆ.

ವಿವಿಧ ಗ್ರಾಮಗಳಲ್ಲಿನ 40 ಯುವಕ ಮಂಡಳಿಗಳಿಗೆ ವ್ಯಾಯಾಮ ಶಾಲೆಗೆ (ಜಿಮ್) ಉಪಕರಣಗಳ ಪೂರೈಕೆಗೆ ₹ 80 ಲಕ್ಷ ಹಂಚಿಕೆ ಮಾಡಿದ್ದಾರೆ. ವಿವಿಧ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಕಂಪ್ಯೂಟರ್‌ ಖರೀದಿಗಾಗಿ ₹ 6 ಲಕ್ಷ ಒದಗಿಸಿದ್ದಾರೆ. ವಿವಿಧ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಕ್ರೀಡಾ ಸಾಮಗ್ರಿಗಳು ಮತ್ತು ಡೆಸ್ಕ್‌ಗಳ ಪೂರೈಕೆಗೆ ₹ 48 ಲಕ್ಷ ಕೊಟ್ಟಿದ್ದಾರೆ.

ವೈಜ್ಞಾನಿಕ ಮನೋಭಾವಕ್ಕೆ:

ಮೌಢ್ಯದ ವಿರುದ್ಧ ಹೋರಾಟ ನಡೆಸುತ್ತಿರುವ ಹಾಗೂ ಜಾಗೃತಿ ಮೂಡಿಸುತ್ತಿರುವ ಅವರು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸದಲ್ಲೂ ಕೈಜೋಡಿಸಿದ್ದಾರೆ. ಇದಕ್ಕಾಗಿ, ₹ 10 ಲಕ್ಷ ವೆಚ್ಚದಲ್ಲಿ ವಿವಿಧ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ವಿಜ್ಞಾನ ಉಪಕರಣಗಳನ್ನು ಕೊಡಿಸಿದ್ದಾರೆ. 40 ಅಂಗವಿಕಲರಿಗೆ ತ್ರಿಚಕ್ರವಾಹನಗಳನ್ನು ವಿತರಿಸಿದ್ದಾರೆ. ಇದಕ್ಕಾಗಿ ₹ 28 ಲಕ್ಷ ವಿನಿಯೋಗಿಸಿದ್ದಾರೆ. 7 ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ₹ 35 ಲಕ್ಷ ಒದಗಿಸಿದ್ದಾರೆ. ವಿವಿಧ ಗ್ರಾಮಗಳಲ್ಲಿ ಹೈಮಾಸ್ಟ್‌ ದೀಪಗಳ ಅಳವಡಿಕೆಗೆ ₹ 10 ಲಕ್ಷ ಕೊಟ್ಟಿದ್ದಾರೆ.

ಕೋವಿಡ್ ಸಂದರ್ಭದಲ್ಲಿ:

ಪಾಶ್ಚಾಪೂರ, ಕಡೋಲಿ, ಹೆಬ್ಬಾಳ, ದಡ್ಡಿ, ಯಮಕನಮರಡಿ, ಹುದಲಿ, ಹತ್ತರಗಿ, ಕಾಕತಿ ಗ್ರಾಮಗಳಿಗೆ ಕಸ ವಿಲೇವಾರಿ ವಾಹನಗಳ ಖರೀದಿಗೆಂದು ₹ 28 ಲಕ್ಷ ಹಂಚಿಕೆ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆಮ್ಲಜನಕ ಕೊರತೆ ಎದುರಾಗಿ ಸಂಕಷ್ಟ ಎದುರಾಗಿದ್ದ ಸಂದರ್ಭದಲ್ಲಿ ರೋಗಿಗಳ ಅನುಕೂಲಕ್ಕಾಗಿ ₹ 42 ಲಕ್ಷ ವೆಚ್ಚದಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಕೊಡಿಸಿದ್ದಾರೆ.

ಯಮಕನರಮಡಿ ಗ್ರಾಮದಲ್ಲಿ 2 ಶಾದಿಮಹಲ್‌ಗಳ ನಿರ್ಮಾಣಕ್ಕೆ ₹ 56 ಲಕ್ಷ ನೀಡಿದ್ದಾರೆ. ₹ 12 ಲಕ್ಷದಲ್ಲಿ ವಿವಿಧ ಗ್ರಾಮಗಳಲ್ಲಿ 4 ಬಸ್ ತಂಗುದಾಣ, ₹ 10 ಲಕ್ಷ ವೆಚ್ಚದಲ್ಲಿ ಸ್ಮಶಾನಕ್ಕೆ ಕಾಂಪೌಂಡ್ ಹಾಗೂ ಕಡೋಲಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ₹ 5 ಲಕ್ಷ ಒದಗಿಸಿದ್ದಾರೆ.

‘ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲು ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡಿದ್ದೇನೆ. ವಿವಿಧ ಶಾಲೆಗೆ ಡೆಸ್ಕ್‌ಗಳು, ಕಂಪ್ಯೂಟರ್‌ಗಳು, ವ್ಯಾಯಾಮ ಸಲಕರಣೆಗಳ ವಿತರಣೆಗೆ ಆದ್ಯತೆ ನೀಡಿದ್ದೇನೆ. ವಿಜ್ಞಾನ ಕಲಿಕೆಗೆ ಅಗತ್ಯ ಸಾಮಗ್ರಿಗಳನ್ನು ಕೊಡಿಸಿದ್ದೇನೆ’ ಎನ್ನುತ್ತಾರೆ ಸತೀಶ ಜಾರಕಿಹೊಳಿ.

ಸದ್ಬಳಕೆ ಮಾಡಿಕೊಂಡಿರುವೆ

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಅನುದಾನ ಸಮರ್ಪಕವಾಗಿ ಬಿಡುಗಡೆ ಆಗುತ್ತಿಲ್ಲ. ನಿಗದಿಯಂತೆ ₹ 2 ಕೋಟಿ ಬಂದರೆ ಜನರಿಗೆ ಹಚ್ಚಿನ ಅನುಕೂಲ ಕಲ್ಪಿಸಬಹುದು. ಬಂದಿದ್ದನ್ನು ಸದ್ಬಳಕೆ ಮಾಡಿಕೊಂಡಿದ್ದೇನೆ.

–ಸತೀಶ ಜಾರಕಿಹೊಳಿ, ಶಾಸಕ, ಯಮಕನಮರಡಿ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT