ಬುಧವಾರ, ಆಗಸ್ಟ್ 10, 2022
24 °C
ಜೀವನ್‌ರೇಖಾ ಆಸ್ಪತ್ರೆ ನಿರ್ದೇಶಕ ಡಾ.ಅಮಿತ್

‘2ರಿಂದ 3 ತಿಂಗಳಲ್ಲಿ ಲಸಿಕೆ ಲಭ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಹೈದರಾಬಾದ್‌ನ ಭಾರತ್ ಬಯೊಟೆಕ್ ಕಂಪನಿ ಮತ್ತು ಐಸಿಎಂಆರ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ‘ಕೋವ್ಯಾಕ್ಸಿನ್’ ಕೋವಿಡ್–19 ಲಸಿಕೆಯ ಕ್ಲಿನಿಕಲ್ ಟ್ರಯಲ್‌ ನಡೆಸಲಾಗುತ್ತಿರುವ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆಯಲ್ಲಿರುವ ಜೀವನ್‌ ರೇಖಾ ಆಸ್ಪತ್ರೆಗೆ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಶನಿವಾರ ಭೇಟಿ ನೀಡಿ ಅಲ್ಲಿನ ವೈದ್ಯರಿಂದ ಮಾಹಿತಿ ಪಡೆದರು.

ಲಸಿಕೆ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಎಸ್. ಭಾಟೆ, ‘ದೇಶದಲ್ಲಿ 25 ಕೇಂದ್ರಗಳಲ್ಲಿ ಈ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗಿಸಿ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತಿದೆ. ಅದರಲ್ಲಿ ಜೀವನ್ ರೇಖಾ ಆಸ್ಪತ್ರೆಯೂ ಒಂದಾಗಿದೆ. ಆಸ್ಪತ್ರೆಯಲ್ಲಿ 18 ವರ್ಷ ಮೇಲಿನ ಸಾವಿರ ಸ್ವಯಂಸೇವಕರಿಗೆ ಪ್ರಯೋಗ ನಡೆಸುವ ಗುರಿ ಹೊಂದಲಾಗಿದೆ. ಈಗಾಗಲೇ 250 ಸ್ವಯಂಸೇವಕರಿಗೆ ಲಸಿಕೆ ನೀಡಲಾಗಿದೆ. ಅವರಿಗೆ ಇದುವರೆಗೆ ಯಾವುದೇ ಅಡ್ಡಪರಿಣಾಮಗಳಾಗಿಲ್ಲ ಹಾಗೂ ಅವರಲ್ಲಿ ಕೋವಿಡ್–19 ಕಂಡುಬಂದಿಲ್ಲ’ ಎಂದು ತಿಳಿಸಿದರು.

‘3ನೇ ಹಂತದ ಲಸಿಕಾ ಪ್ರಯೋಗವು ದೇಶದ 25 ಕೆಂದ್ರಗಳಲ್ಲಿ ಯಶಸ್ವಿಯಾದರೆ 2ರಿಂದ 3 ತಿಂಗಳಲ್ಲಿ ಇಡೀ ಜಗತ್ತಿಗೆ ನೀಡಬಹುದಾಗಿದೆ’ ಎಂದು ಹೇಳಿದರು.

‘ದೇಶದ 25 ಲಸಿಕಾ ಪ್ರಯೋಗ ಕೇಂದ್ರಗಳಲ್ಲಿ ನಮ್ಮ ಬೆಳಗಾವಿಯ ಜೀವನರೇಖಾ ಆಸ್ಪತ್ರೆ ಒಂದಾಗಿಗಿರುವುದು ಹೆಮ್ಮೆಯ ವಿಷಯವಾಗಿದೆ. ದೇಶದಲ್ಲಿ 2 ಹಂತದ ಪ್ರಯೋಗ ಆಗಿದೆ. 3ನೇ ಹಂತ ಪ್ರಾರಂಭವಾಗಿದೆ. ಒಂದು ಕೇಂದ್ರದಲ್ಲಿ ಸಾವಿರ ಮಂದಿ ಮೇಲೆ ಟ್ರಯಲ್ ನಡೆಯುತ್ತಿರುವುದು ಮತ್ತು ಜನರು ಸಹಕಾರ ಕೊಡುತ್ತಿರುವುದು ಸಂತಸದ ಸಂಗತಿಯಾಗಿದೆ’ ಎಂದು ಶಾಸಕರು ಹೇಳಿದರು.

‘ಸ್ವಯಂಸೇವಕರು ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕು. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಯಶಸ್ವಿಯಾಗುವ ಭರವಸೆ ಇದೆ’ ಎಂದು ಹೇಳಿದರು.

‘ನಗರದ ಜನರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಡಾ.ಅಜಯ, ಡಾ.ದೇಸಾಯಿ, ವಕೀಲ ಎನ್.ಆರ್. ಲಾತೂರ, ಸ್ವಯಂಸೇವಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.