ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಂತ್ರಸ್ತರಿಗೆ ಸ್ಪಂದಿಸುತ್ತಿರುವ ಶಾಸಕರು

ಕಾಗವಾಡ ಪ್ರತಿನಿಧಿ ಕಾಣಿಸಿಯೇ ಇಲ್ಲ!
Last Updated 11 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರಗಳಲ್ಲೂ ನದಿಗಳ ಪ್ರವಾಹ ಅಥವಾ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ, 15 ಕ್ಷೇತ್ರಗಳ ಶಾಸಕರು ಮಾತ್ರ ಜನರಿಗೆ ಸ್ಪಂದಿಸುತ್ತಿರುವುದು ಕಂಡುಬಂದಿದೆ.

ಮಳೆ, ಪ್ರವಾಹದ ನಡುವೆಯೇ ಸಂಚರಿಸಿ, ಕೆಸರಿನಲ್ಲಿ ಓಡಾಡಿ ಜನರ ಅಹವಾಲುಗಳನ್ನು ಆಲಿಸುತ್ತಿದ್ದಾರೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಲು ಕಾಳಜಿ ವಹಿಸುತ್ತಿದ್ದಾರೆ. ಈ ಮೂಲಕ ತಮ್ಮ ಜನರ ಹಿತ ಕಾಯುವ ಬದ್ಧತೆ ಪ್ರದರ್ಶಿಸುತ್ತಿದ್ದಾರೆ.

ದಕ್ಷಿಣ ಕ್ಷೇತ್ರದ ಅಭಯ ಪಾಟೀಲ, ಜಲಾವೃತಗೊಂಡಿದ್ದ ಹಲವು ಬಡಾವಣೆಗಳಲ್ಲಿ ಸಂಚರಿಸಿ ಸಂತ್ರಸ್ತರಿಗೆ ಧೈರ್ಯ ಹೇಳಿದ್ದರು. ನೀರು ಹೊರಹಾಕುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸ್ವತಃ ಟ್ಯೂಬ್ ಬೋಟ್ ನಡೆಸುವ ಮೂಲಕ ಕೆಲವರನ್ನು ನೀರಿನಿಂದ ಹೊರಕ್ಕೆ ಕರೆದುಕೊಂಡು ಬಂದಿದ್ದರು. ಭಾನುವಾರ, ಡೆಂಗಿ ಹಾಗೂ ಚಿಕೂನ್‌ಗುನ್ಯಾ ನಿರೋಧಕ ಲಸಿಕೆ ಹಾಕಿಸುವ ಅಭಿಯಾನವನ್ನೂ ನಡೆಸಿದ್ದಾರೆ.

ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಕೂಡ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಹಲವು ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಲೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಕಾರ್ಯಾಚರಣೆ ಮಾಡಿಸಿದ್ದಾರೆ.

ಆತ್ಮವಿಶ್ವಾಸ ತುಂಬಲು:ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೂಡ ‘ನಿಮ್ಮೊಂದಿಗೆ ನಾನಿದ್ದೇನೆ ಧೈರ್ಯದಿಂದಿರಿ’ ಎನ್ನುವ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಹಳ್ಳಿಗಳಲ್ಲಿ ಸುತ್ತುತ್ತಿದ್ದಾರೆ. ಸಂತ್ರಸ್ತರಿಗೆ ರಗ್ಗು, ಔಷಧ ಮೊದಲಾದವುಗಳನ್ನು ವಿತರಿಸಿ ಪರಿಹಾರ ಕೊಡಿಸುವ ಭರವಸೆ ನೀಡುತ್ತಿದ್ದಾರೆ.

ಖಾನಾಪುರದ ಡಾ.ಅಂಜಲಿ ನಿಂಬಾಳ್ಕರ್‌ ಜನರಿಗೆ ನೆರವಾಗುತ್ತಿದ್ದಾರೆ. ಸಂತ್ರಸ್ತರಿಗೆ ಮೊದಲನೇ ಹಂತದಲ್ಲಿ ಪರಿಹಾರವನ್ನೂ ಕೊಡಿಸಿದ್ದಾರೆ. ಪರಿಹಾರದ ಚೆಕ್‌ ನೀಡಿದ ನಂತರ ವಯೋವೃದ್ಧರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿರುವುದು ವಿಶೇಷ.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕದಲ್ಲಿರುವ ತಮ್ಮ ಎನ್ಎಸ್‌ಎಫ್‌ ಅತಿಥಿ ಗೃಹಕ್ಕೆ ಘಟಪ್ರಭಾ ನದಿ ನೀರು ನುಗ್ಗಿದ್ದರೂ ತಲೆಕೆಡಿಸಿಕೊಳ್ಳದೇ ಕ್ಷೇತ್ರದಲ್ಲಿ ನಿತ್ಯ ನೂರಾರು ಕಿ.ಮೀ. ಸುತ್ತಾಡಿ ಜನರ ಸಂಕಷ್ಟಗಳಿಗೆ ಕಿವಿಯಾಗುತ್ತಿದ್ದಾರೆ. ನೆರವನ್ನೂ ಕೊಡಿಸುತ್ತಿದ್ದಾರೆ. ‘ನಿಮಗೆ ಎಲ್ಲ ರೀತಿಯ ಅನುಕೂಲವನ್ನೂ ಮಾಡಿಕೊಡುತ್ತೇನೆ. ಸರ್ಕಾರ ಅನುದಾನ ಕೊಟ್ಟರೆ ಸರಿ. ಇಲ್ಲವಾದರೆ ನನ್ನ ಆಸ್ತಿಯನ್ನಾದರೂ ಮಾರಿ ನಿಮಗೆ ನೆರವಾಗುತ್ತೇನೆ, ಧೈರ್ಯದಿಂದಿರಿ’ ಎಂದು ಸಂತ್ರಸ್ತರಿಗೆ ನಮಸ್ಕರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂತ್ರಸ್ತರೊಂದಿಗೆ:ಕುಡಚಿ ಶಾಸಕ ಪಿ. ರಾಜೀವ ಬೆಂಬಲಿಗರೊಂದಿಗೆ ಜನರ ರಕ್ಷಣೆಗೆ ಇಳಿಸಿದ್ದಾರೆ. ಸಂತ್ರಸ್ತರೊಬ್ಬರ ಎಮ್ಮೆಯನ್ನು ತಾವೇ ಸಾಗಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಂತೆಯೇ ಯಮಕನಮರಡಿಯ ಸತೀಶ ಜಾರಕಿಹೊಳಿ ಹಾಗೂ ಹುಕ್ಕೇರಿಯ ಉಮೇಶ ಕತ್ತಿ ಕೂಡ ಕ್ಷೇತ್ರ ಸಂಚಾರ ಮಾಡಿ ಜನರಿಗೆ ನೆರವಾಗುತ್ತಿದ್ದಾರೆ.

ಸವದತ್ತಿ–ಯಲ್ಲಮ್ಮ ಕ್ಷೇತ್ರದ ಪ್ರತಿನಿಧಿ ಆನಂದ ಮಾಮನಿ ಕೂಡ ಸಂತ್ರಸ್ತರಿಗೆ ಧೈರ್ಯ ತುಂಬುತ್ತಿದ್ದಾರೆ. ಮಲ್ರಪ್ರಭಾ ನದಿ ನೀರಿನ ಪ್ರವಾಹದಲ್ಲಿ ಸಿಲುಕಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇದೇ ರೀತಿ ರಾಮದುರ್ಗದ ಮಹಾದೇವಪ್ಪ ಯಾದವಾಡ, ರಾಯಬಾಗದ ಡಿ.ಎಂ. ಐಹೊಳೆ, ಚಿಕ್ಕೋಡಿ–ಸದಲಗಾದ ಗಣೇಶ ಹುಕ್ಕೇರಿ, ನಿ‍ಪ್ಪಾಣಿಯ ಶಶಿಕಲಾ ಜೊಲ್ಲೆ, ಚನ್ನಮ್ಮನ ಕಿತ್ತೂರಿನ ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲದ ಮಹಾಂತೇಶ ಕೌಜಲಗಿ ಕೂಡ ಓಡಾಡುತ್ತಿದ್ದಾರೆ.

ಆದರೆ, ಅನರ್ಹಗೊಂಡಿರುವ ಶಾಸಕರಾದ ಗೋಕಾಕದ ರಮೇಶ ಜಾರಕಿಹೊಳಿ, ಅಥಣಿಯ ಮಹೇಶ ಕುಮಠಳ್ಳಿ ‘ಶಾಸ್ತ್ರ’ಕ್ಕೆ ಎನ್ನುವಂತೆ ಒಮ್ಮೆಯಷ್ಟೇ ಸಂತ್ರಸ್ತರ ಅಳಲು ಆಲಿಸಿದ್ದಾರೆ. ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕಾಣಿಸಿಕೊಂಡಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT