ಶುಕ್ರವಾರ, ಮೇ 27, 2022
27 °C
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಸದಸ್ಯರಿಲ್ಲ

ವಿಧಾನ ಪರಿಷತ್ ಚುನಾವಣೆ: ಬೆಳಗಾವಿಯಲ್ಲಿ ಮತದಾರರ ಪಟ್ಟಿಯ ಸ್ಪಷ್ಟ ಚಿತ್ರಣವಿಲ್ಲ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ದ್ವಿಸದಸ್ಯ ಚುನಾವಣೆಯಲ್ಲಿ, ಗ್ರಾಮ ಪಂಚಾಯಿತಿಗಳ ಸದಸ್ಯರಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಚುನಾಯಿತ ಜನಪ್ರತಿನಿಧಿಗಳು ಮತದಾರರಾಗಿದ್ದಾರೆ. ಇವರಲ್ಲಿ ಎಷ್ಟು ಮಂದಿ ಅರ್ಹ ಮತದಾರರಿದ್ದಾರೆ ಎನ್ನುವುದು ಚುನಾವಣಾ ಆಯೋಗದಿಂದ ಪಟ್ಟಿ ಪ್ರಕಟವಾದ ನಂತರವಷ್ಟೆ ಸ್ಪಷ್ಟವಾಗಲಿದೆ. ಆದರೆ, ಗ್ರಾಮ ಪಂಚಾಯಿತಿಗಳ ಸದಸ್ಯರು ಅತಿ ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದಾಗಿ ಅವರ ಮನವೊಲಿಕೆಗೆ ರಾಜಕೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ.

ಗ್ರಾಮ ಪಂಚಾಯಿತಿಗಳ ಸದಸ್ಯರು ಯಾವುದೇ ಪಕ್ಷದಿಂದ ಆಯ್ಕೆ ಆಗಿರುವುದಿಲ್ಲ. ಆದರೆ, ಒಂದೊಂದು ಪಕ್ಷದ ಬೆಂಬಲಿತರಾಗಿರುತ್ತಾರೆ ಅಥವಾ ಒಲವುಳ್ಳವರಾಗಿರುತ್ತಾರೆ. ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎನ್ನುವುದರ ಮೇಲೆ ಅಭ್ಯರ್ಥಿಗಳು ಮತ್ತು ಪಕ್ಷದ ಭವಿಷ್ಯ ನಿರ್ಧಾರವಾಗುತ್ತದೆ. ಹೋದ ಚುನಾವಣೆಯಲ್ಲಿ ಒಂದು ಸ್ಥಾನ ಬಿಜೆ‍ಪಿ (ಮಹಾಂತೇಶ ಕವಟಗಿಮಠ) ಪಾಲಾಗಿದ್ದರೆ, ಇನ್ನೊಂದು ಪಕ್ಷೇತರ ಅಭ್ಯರ್ಥಿ(ವಿವೇಕ್‌ರಾವ್ ಪಾಟೀಲ)ಗೆ ಒಲಿದಿತ್ತು. ಕಾಂಗ್ರೆಸ್‌ಗೆ ಗೆಲುವು ಸಾಧ್ಯವಾಗಿರಲಿಲ್ಲ.

ಚುನಾವಣೆ ನಡೆದಿಲ್ಲ

ಲಭ್ಯ ಅಂಕಿ–ಅಂಶದ ಪ್ರಕಾರ, ಅಂದಾಜು 9,400ಕ್ಕೂ ಹೆಚ್ಚಿನ ಮತದಾರರಿದ್ದಾರೆ. ಜಿಲ್ಲಾ ‍‍ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದಿಲ್ಲ. ಹೀಗಾಗಿ, ಆ ಮತದಾರರು ಇಲ್ಲ. ಕೆಲವು ಪಟ್ಟಣ ಪಂಚಾಯಿತಿಗಳ ಅಧಿಕಾರದ ಅವಧಿ ಮುಗಿದಿದ್ದು ಅಲ್ಲಿಯೂ ಸದಸ್ಯರಿಲ್ಲ. ಹೀಗಾಗಿ, ಮತದಾರರ ಸಂಖ್ಯೆಯು 500ಕ್ಕೂ ಜಾಸ್ತಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದ್ದರಿಂದ, ಅತಿ ದೊಡ್ಡ ಸಂಖ್ಯೆಯಲ್ಲಿರುವ ಗ್ರಾಮ ಪಂಚಾಯಿತಿಗಳ ಸದಸ್ಯರ ಮನವೊಲಿಕೆಯತ್ತ ರಾಜಕೀಯ ಪಕ್ಷದವರ ಚಿತ್ತ ನೆಟ್ಟಿದೆ.

ಜಿಲ್ಲೆಯಲ್ಲಿ 506 ಗ್ರಾಮ ಪಂಚಾಯಿತಿಗಳಿವೆ. ಒಂದು ನಗರಪಾಲಿಕೆ, ಎರಡು ನಗರಸಭೆ, 15 ಪುರಸಭೆ ಹಾಗೂ 15 ಪಟ್ಟಣ ಪಂಚಾಯ್ತಿಗಳಿವೆ. ಕೆಲವು ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅಲ್ಲಿಗೆ ಚುನಾವಣೆ ನಡೆಯುವುದಕ್ಕೆ ಮುನ್ನವೇ ವಿಧಾನಪರಿಷತ್ ಚುನಾವಣೆ ಎದುರಾಗಿದೆ. ಕೆಲವು ಸ್ಥಾನಗಳು ಅನರ್ಹತೆ, ರಾಜೀನಾಮೆ, ನಿಧನ ಅಥವಾ ಚುನಾವಣೆ ನಡೆಯದಿರುವುದರಿಂದ ತೆರವಾಗಿವೆ. ಹೀಗಾಗಿ, 2015ರ ಚುನಾವಣೆಗಿಂತ ಮತದಾರರ ಸಂಖ್ಯೆ ಕಡಿಮೆ ಇರಲಿದೆ ಎನ್ನಲಾಗಿದೆ.

ನಮಗೆ ಅವಕಾಶವಿದೆಯೇ?

ಈ ಬಾರಿಯ ಮಹಾನಗರಪಾಲಿಕೆ ಚುನಾವಣೆ ಪಕ್ಷಗಳ ಚಿಹ್ನೆ ಮೇಲೆ ನಡೆದಿತ್ತು. ಅಲ್ಲಿ ಗೆದ್ದಿರುವ ಅಭ್ಯರ್ಥಿಗಳು ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಹೀಗಾಗಿ, ನಮಗೆ ಮತದಾನದ ಹಕ್ಕು ಇದೆಯೋ ಇಲ್ಲವೋ ಎಂದು ಅಧಿಕಾರಿಗಳು ವಿಚಾರಿಸಿ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗದಿಂದ ಪಟ್ಟಿ  ಪ್ರಕಟವಾದ ನಂತರ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರದ ಅವಧಿ ಮುಗಿದಿದ್ದ ಗ್ರಾಮ ಪಂಚಾಯಿತಿಗಳಿಗೆ ಹೋದ ವರ್ಷ ಚುನಾವಣೆ ನಡೆದಿತ್ತು. ಆಗ ನಮ್ಮ ಬೆಂಬಲಿತರು ಇಷ್ಟು ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರು ಘೋಷಿಸಿದ್ದರು. ಈಗ, ಸ್ಥಳೀಯ ಸಂಸ್ಥೆಯಿಂದಲೇ ಮೇಲ್ಮನೆಗೆ ಹಣಾಹಣಿ ನಡೆಯುತ್ತಿದ್ದು ಯಾವ ಪಕ್ಷಕ್ಕೆ  ಬೆಂಬಲ ಎಷ್ಟಿದೆ ಎನ್ನುವುದು ಕೂಡ ಗೊತ್ತಾಗಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.