ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ವಿಧಾನಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಕೆ ವೇಳೆ ಲಖನ್‌ ಶಕ್ತಿ ಪ್ರದರ್ಶನ

ಸಾವಿರಾರು ಜನರನ್ನು ಸೇರಿಸಿದ್ದ ಪಕ್ಷೇತರ ಅಭ್ಯರ್ಥಿ
Last Updated 23 ನವೆಂಬರ್ 2021, 12:49 IST
ಅಕ್ಷರ ಗಾತ್ರ

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಪ್ರಮುಖ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿ ಮಾಡಿಕೊಂಡರು.

3ನೇ ಬಾರಿಗೆ ಆಯ್ಕೆ ಬಯಸಿರುವ ಮಹಾಂತೇಶ ಕವಟಗಿಮಠ ಬಿಜೆಪಿ ಅಭ್ಯರ್ಥಿಯಾಗಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಕಿರಿಯ ಸಹೋದರ ಚನ್ನರಾಜ ಹಟ್ಟಿಹೊಳಿ ಮತ್ತು ಜಾರಕಿಹೊಳಿ ಕುಟುಂಬದ ಉದ್ಯಮಿ ಲಖನ್‌ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಬಿಜೆಪಿಯಲ್ಲಿ ನಾಯಕರ ಸಂಖ್ಯೆ ಜಾಸ್ತಿ ಇತ್ತು. ಕಾಂಗ್ರೆಸ್‌ನವರು ನೂರಾರು ಕಾರ್ಯಕರ್ತರನ್ನು ಸೇರಿಸಿದ್ದರು. ನಿರೀಕ್ಷೆಯಂತೆಯೇ ಪಕ್ಷೇತರ ಸದಸ್ಯರಾಗಿ ಕಣಕ್ಕಿಳಿದಿರುವ ಲಖನ್‌ ಪರವಾಗಿ ಸಾವಿರಾರು ಮಂದಿ ಜಮಾಯಿಸಿದ್ದರು. ಮೆರವಣಿಗೆ ನಡೆಸಿದ ಎಲ್ಲರೂ, ಕಣದಲ್ಲಿ ತ್ರಿಕೋನ ಹಣಾಹಣಿ ಏರ್ಪಡಲಿದೆ ಎನ್ನುವ ಸಂದೇಶ ರವಾನಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಜಾರಕಿಹೊಳಿ ಸಹೋದರರು ಮತ್ತು ಕುಟುಂಬದವರು ಹೆಚ್ಚು ಗಮನಸೆಳೆದರು.

ಬೆಂಬಲಿಗರೊಂದಿಗೆಲಖನ್‌ ಜಾರಕಿಹೊಳಿ
ಬೆಂಬಲಿಗರೊಂದಿಗೆಲಖನ್‌ ಜಾರಕಿಹೊಳಿ

ಜೀಪ್‌ನಲ್ಲಿ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇದ್ದರು. ಬಿಜೆಪಿ ಅಭ್ಯರ್ಥಿಯೊಂದಿಗೆ ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಹೆಜ್ಜೆ ಹಾಕಿದರು. ಪಕ್ಷೇತರ ಲಖನ್‌ ಜೊತೆ ರಮೇಶ ಅವರ ಪುತ್ರ ಕೆಎಂಎಫ್‌ ನಿರ್ದೇಶಕರೂ ಆಗಿರುವ ಅಮರನಾಥ್ ಜಾರಕಿಹೊಳಿ, ಅಳಿಯ ಅಂಬಿರಾವ್ ಪಾಟೀಲ ಮತ್ತು ಆಪ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಹೋದರರ ಸವಾಲ್‌ನಂತೆಯೂ ಇತ್ತು.

ಇತ್ತೀಚೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಲಖನ್ ಸ್ಪರ್ಧೆ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷದವರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಲಖನ್‌ಗೆ ಸಹೋದರರಾದ ಬಾಲಚಂದ್ರ ಮತ್ತು ರಮೇಶ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಾರಕಿಹೊಳಿ ಕುಟುಂಬದ ಬೆಂಬಲಿಗರು ಹಾಗೂ ಅಭಿಮಾನಿಗಳು ಗೋಕಾಕದಿಂದ ನೂರಕ್ಕೂ ಹೆಚ್ಚು ವಾಹನಗಳಲ್ಲಿ ಬಂದು ಜಮಾಯಿಸಿ ಲಖನ್‌ ಜೊತೆ ಕಾಣಿಸಿಕೊಂಡರು.

ಬಿಜೆಪಿ ಅಭ್ಯರ್ಥಿಯೊಂದಿಗೆ ಶಾಸಕ ರಮೇಶ ಜಾರಕಿಹೊಳಿ
ಬಿಜೆಪಿ ಅಭ್ಯರ್ಥಿಯೊಂದಿಗೆ ಶಾಸಕ ರಮೇಶ ಜಾರಕಿಹೊಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT